- ಗುಜರಾತ್ ಹೈಕೋರ್ಟ್ ತೀರ್ಪಿನ ದಿನದಂದೇ ಕೇವಿಯಟ್ ಸಲ್ಲಿಕೆ
- ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ 2 ವರ್ಷ ಶಿಕ್ಷೆ ಪ್ರಕಟ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೆಳ ಹಂತದ ನ್ಯಾಯಾಲಯ ಶಿಕ್ಷೆ ನೀಡಿದ್ದನ್ನು ಎತ್ತಿಹಿಡಿದ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗುವ ಮೇಲ್ಮನವಿ ವಿರುದ್ಧ ಕೇವಿಯಟ್ (ತಡೆ ಅರ್ಜಿ) ಸಲ್ಲಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಶಾಸಕ ಪೂರ್ಣೇಶ್ ಮೋದಿ ಈ ಅರ್ಜಿ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಅವರ ವಿರುದ್ಧ ಮೋದಿ ಉಪನಾಮದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದರ ಸಂಬಂಧ ದಾಖಲಾದ ಮಾನಹಾನಿ ಪ್ರಕರಣದಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು.
ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತಾರೆ ಎಂದು ಕಾಂಗ್ರೆಸ್ ಹೇಳಿತ್ತು. ಈ ಹಿನ್ನೆಲೆ ಪೂರ್ಣೇಶ್ ಮೋದಿ ಕೇವಿಯಟ್ ಸಲ್ಲಿಸಿದ್ದು ಪ್ರಕರಣದ ಸೂಕ್ತ ವಿಚಾರಣೆ ಆಲಿಸಿ ತೀರ್ಪು ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ಗುಜರಾತ್ ಹೈಕೋರ್ಟ್ ತೀರ್ಪು ಪ್ರಕಟವಾದ ದಿನದಂದೇ ಪೂರ್ಣೇಶ್ ಮೋದಿ ಅವರು ತಮ್ಮ ವಕೀಲ ಪಿ.ಎಸ್.ಸುಧೀರ್ ಅವರ ಮೂಲಕ ಈ ಕೇವಿಯಟ್ ಸಲ್ಲಿಸಿದ್ದಾರೆ. ಯಾವುದೇ ಆದೇಶವನ್ನು ನೀಡುವ ಮೊದಲು ನ್ಯಾಯಾಲಯವು ಎರಡೂ ಕಡೆಯವರ ವಾದ ಆಲಿಸಬೇಕೆಂದು ಕೇವಿಯಟ್‌ನಲ್ಲಿ ಮನವಿ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಜಾಲತಾಣ ಹೇಳಿದೆ.
ಮೋದಿ ಉಪನಾಮದ ಕುರಿತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕೆಳ ಹಂತದ ನ್ಯಾಯಾಲಯದ ಆದೇಶಕ್ಕೆ ತಡೆ ಕೋರಿ ರಾಹುಲ್ ಗಾಂಧಿ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಜುಲೈ 7ರಂದು ಗುಜರಾತ್ ಹೈಕೋರ್ಟ್‌ನ ಏಕ ಸದಸ್ಯ ಪೀಠ ರಾಹುಲ್ ಮನವಿಯನ್ನು ತಿರಸ್ಕರಿಸಿತ್ತು.
ಏನಿದು ಪ್ರಕರಣ?
2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಭಾಷಣದ ವೇಳೆ ರಾಹುಲ್ ಗಾಂಧಿ, ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು.
ಮೋದಿ ಉಪನಾಮದ ಟೀಕೆ ವಿರುದ್ಧ ಗುಜರಾತ್‌ನ ಸೂರತ್ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ, ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಇಡಿ ಮುಖ್ಯಸ್ಥ ಸಂಜಯ್ ಮಿಶ್ರಾ ಸೇವಾ ವಿಸ್ತರಣೆ ಕಾನೂನುಬಾಹಿರ ಎಂದ ಸುಪ್ರೀಂ ಕೋರ್ಟ್
ಈ ವರ್ಷದ ಮಾರ್ಚ್ 23ರಂದು ಪ್ರಕರಣದ ತೀರ್ಪು ನೀಡಿದ್ದ ಸೂರತ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ, ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಈ ತೀರ್ಪಿನ ಬಳಿಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.