ಸರ್ಕಾರದ ಈ ವಾರ್ಷಿಕ ವರದಿಗಳೆಲ್ಲ ಪ್ರತ್ಯೇಕವಾಗಿ ತಮ್ಮ ತಮ್ಮ ವಾದಗಳನ್ನು ಬಲವಾಗಿ ಮಂಡಿಸುತ್ತವೆಯಾದರೂ, ಅವುಗಳ ನಡುವಿನ ಸಂಬಂಧಗಳನ್ನು ನೋಡುತ್ತಾ ಹೋದಂತೆ ವಿಪರೀತಗಳೆಲ್ಲ ಕಾಣಿಸುತ್ತಾ ಹೋಗುತ್ತವೆ. ಇಂದಿನ ಎಕನಾಮಿಕ್ ಸರ್ವೇ ಚೌಕಟ್ಟನ್ನು ಆಧರಿಸಿ ನಾಳೆ ಬಜೆಟ್ ಇರಬೇಕಾದುದು ಸಂಪ್ರದಾಯ. ಆದರೆ ಅದು ಹಾಗಿರುವುದಿಲ್ಲ ಎಂಬುದು ಈಗ ಪ್ರತೀ ಬಾರಿ ಸಾಬೀತಾಗುತ್ತಿದೆ.
ಅಮೃತ ಕಾಲದಲ್ಲಿ (ಅಂದರೆ 2047) ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ದೇಶ ಆಗಬೇಕು, ಆರ್ಥಿಕವಾಗಿ ಮೂರನೇ ಸ್ಥಾನಕ್ಕೆ ಜಿಗಿಯಬೇಕು ಎಂಬೆಲ್ಲ ಆಶಯಗಳೇನೋ ಸರಿ ಇವೆ. ಆದರೆ ಹಾಗಾಗಲು ನಾವು ಯಾವ ವೇಗದಲ್ಲಿ, ಎತ್ತ ಸಾಗಬೇಕು ಎಂಬುದೆಲ್ಲ ‘ವೇರಿಯೆಬಲ್’ ಆಗಿ ಕುಳಿತಾಗ, ಈ ಎಕನಾಮಿಕ್ ಪ್ಲಾನಿಂಗ್‌ಗಳೆಲ್ಲ ಗಾಳಿ ಬಂದತ್ತ ತೂರಿಕೊಳ್ಳುವ ಆಟದಂತೆ ಕಾಣಿಸತೊಡಗುತ್ತವೆ.
ಕಳೆದ ವರ್ಷ ಮಧ್ಯಂತರ ಬಜೆಟ್ ಮಂಡಿಸುವ ಹೊತ್ತಿನಲ್ಲಿ ಮಂಡನೆ ಆಗಬೇಕಿದ್ದ ಎಕನಾಮಿಕ್ ಸರ್ವೇ ಇಂದು ಬೆಳಗ್ಗೆ ಸಂಸತ್ತಿನಲ್ಲಿ ಮಂಡನೆ ಆಗಿದೆ. ಕಳೆದ ವರ್ಷ ಚುನಾವಣಾ ಪೂರ್ವ ಮಧ್ಯಂತರ ಬಜೆಟ್ ವೇಳೆ, ಈ ಸರ್ವೇಗೆ ಬದಲು ಒಂದು ಸಮೀಕ್ಷೆಯನ್ನು ಮಂಡಿಸಿದ್ದ ಅರ್ಥಶಾಸ್ತ್ರಜ್ಞ ನಾಗೇಶ್ವರ ರಾಯರು, ಭಾರತ 2030ರ ಹೊತ್ತಿಗೆ 7 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಬೇಕೆಂಬ ಆಶಯ ವ್ಯಕ್ತಪಡಿಸಿದ್ದರು. ಅದಕ್ಕೆ ಮುನ್ನ ಚಾಲ್ತಿಯಲ್ಲಿದ್ದ 10 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಬೇಕೆಂಬ ಸಂಕಲ್ಪ ಎಲ್ಲೋ ಹಾದಿಯಲ್ಲಿ ಕಳೆದು ಹೋದಂತಿದೆ.
ವಾಸ್ತವದಲ್ಲಿ ಅದು ಕಳೆದು ಹೋದದ್ದಲ್ಲ. ದೇಶ ಆ ಗಾತ್ರದಲ್ಲಿ ಬೆಳೆಯಲು ನಾವು ಹೋಗುವ ವೇಗ ಸಾಕಾಗುತ್ತಿಲ್ಲ ಎಂಬ ಅರಿವು ಮೂಡಿದ್ದರ ಫಲ ಅದು. ಈಗ, ಪ್ರತೀವರ್ಷ 7% ದರದಲ್ಲಿ ದೇಶದ ಆರ್ಥಿಕತೆ ಬೆಳೆದರೆ, ನಾವು 2030ರ ಹೊತ್ತಿಗೆ 7 ಟ್ರಿಲಿಯನ್ ತಲುಪುವುದು ಸಾಧ್ಯ ಇದೆ ಎಂಬ ಲೆಕ್ಕಾಚಾರ ಖಚಿತ ಇದ್ದಂತಿದೆ. ಈ ಲೆಕ್ಕಾಚಾರ ಇನ್ನೂ ಒಂದು ಸಂಗತಿಯನ್ನು ಹೇಳುತ್ತಿದೆ. ಅದೇನೆಂದರೆ, ದೇಶ ಇನ್ನು ಆರೇಳು ವರ್ಷಗಳ ಕಾಲ 7%ಗಿಂತ ಹೆಚ್ಚಿನ ದರದಲ್ಲಿ ಬೆಳೆಯುವ ನಿರೀಕ್ಷೆ ಸರ್ಕಾರಕ್ಕೇ ಇಲ್ಲ! ಉದಾರೀಕರಣ ಪ್ರಕ್ರಿಯೆಯ ಆರಂಭದಲ್ಲಿ ಕೆಲ ವರ್ಷಗಳ ಕಾಲ ದೇಶ ಡಬಲ್ ಡಿಜಿಟ್ (>10%) ಬೆಳವಣಿಗೆ ಕಂಡಿತ್ತು ಎಂಬುದನ್ನು ಗಮನಿಸಿದರೆ, ನಾನು ಹೇಳುತ್ತಿರುವುದು ಅರ್ಥವಾದೀತು.
ಸರ್ಕಾರದ ಈ ವಾರ್ಷಿಕ ವರದಿಗಳೆಲ್ಲ ಪ್ರತ್ಯೇಕವಾಗಿ ತಮ್ಮ ತಮ್ಮ ವಾದಗಳನ್ನು ಬಲವಾಗಿ ಮಂಡಿಸುತ್ತವೆಯಾದರೂ, ಅವುಗಳ ನಡುವಿನ ಸಂಬಂಧಗಳನ್ನು ನೋಡುತ್ತಾ ಹೋದಂತೆ ವಿಪರೀತಗಳೆಲ್ಲ ಕಾಣಿಸುತ್ತಾ ಹೋಗುತ್ತವೆ. ಇಂದಿನ ಎಕನಾಮಿಕ್ ಸರ್ವೇ ಚೌಕಟ್ಟನ್ನು ಆಧರಿಸಿ ನಾಳೆ ಬಜೆಟ್ ಇರಬೇಕಾದುದು ಸಂಪ್ರದಾಯ. ಆದರೆ ಅದು ಹಾಗಿರುವುದಿಲ್ಲ ಎಂಬುದು ಈಗ ಪ್ರತೀ ಬಾರಿ ಸಾಬೀತಾಗುತ್ತಿದೆ. ಅದಕ್ಕಾಗಿ ನಾಳೆಗೆ ಕಾದು ನೋಡೋಣ.
ನಾನು ವಿಪರೀತ ಎಂದೆನಲ್ಲ- ಅದಕ್ಕೊಂದು ಉದಾಹರಣೆ ಕೊಡುತ್ತೇನೆ. ಈ ಎಕನಾಮಿಕ್ ಸರ್ವೇ ಪ್ರಕಾರ ಕೋವಿಡ್ ಉಂಟುಮಾಡಿದ ಆರ್ಥಿಕ ಹೊಂಡವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಜೊತೆಗೆ, 2005-06ನಿಂದ 2019-2021ರ ನಡುವೆ, ಆರ್ಥಿಕ ಉದಾರೀಕರಣದ ಅವಧಿಯಲ್ಲಿ 41 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆ ಎತ್ತಲಾಗಿದೆ ಎಂದು ಎಕನಾಮಿಕ್ ಸರ್ವೇ ಹೇಳುತ್ತಿದೆ. ಆದರೆ, ಇದೇ ವರದಿಯಲ್ಲಿ, ಆಹಾರ ಭದ್ರತಾ ಕಾಯಿದೆಯಡಿ 81.35 ಕೋಟಿ ಜನರಿಗೆ (75% ಗ್ರಾಮೀಣರು; 50% ನಗರವಾಸಿಗಳಿಗೆ) ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಲಾಗಿರುವ ಬಗ್ಗೆ ಕೂಡ ಹೇಳಲಾಗಿದೆ.
ಇದನ್ನು ಓದಿದ್ದೀರಾ?: ಭಾಗವತ್ ಗೀತೋಪದೇಶ; ಮೋದಿ ಯುಗಾಂತ್ಯದ ಮುನ್ಸೂಚನೆಯೇ?!
ಸರ್ಕಾರವು ಕುಸಿದಿರುವ ಆರ್ಥಿಕತೆಗೆ ಶಕ್ತಿ ನೀಡುವುದಕ್ಕಾಗಿ ಕ್ಯಾಪೆಕ್ಸ್ ಹೂಡಿಕೆಗೆ (ಮೂಲಸೌಕರ್ಯಗಳಿಗೆ) ಭಾರೀ ಒತ್ತು ನಿಡುತ್ತಿದ್ದು, ಕಳೆದ 7 ವರ್ಷಗಳಲ್ಲಿ ಈ ಹೂಡಿಕೆ 2.7 ಪಟ್ಟು ಹೆಚ್ಚಾಗಿದೆ. ಇದಕ್ಕಾಗಿ ಸರ್ಕಾರ ಡಿಸ್ಇನ್ವೆಸ್ಟ್‌ಮೆಂಟ್‌ನಿಂದ ಈತನಕ ಸಂಗ್ರಹಿಸಿದ 4.07 ಲಕ್ಷ ಕೋಟಿ ರೂ. ಸೇರಿದಂತೆ ಸರ್ಕಾರಿ-ಖಾಸಗಿ ಹೂಡಿಕೆಗಳು ವೆಚ್ಚವಾಗಿವೆ. ಇದೆಲ್ಲದರ ಉದ್ದೇಶ ಇದ್ದುದು, ಕುಸಿದಿರುವ ಆರ್ಥಿಕತೆಯನ್ನು ಸುಧಾರಿಸುವುದಾಗಿತ್ತು. ಆದರೆ, ಇಷ್ಟೆಲ್ಲ ಖರ್ಚು ಮಾಡಿಯೂ, ಇನ್ನೂ ಕೂಡ ಖಾಸಗಿ ಜನಸಮುದಾಯಗಳ ಕೊಳ್ಳುವಿಕೆ ಶಕ್ತಿ ಸಮಾಧಾನಕರ ಪ್ರಮಾಣದಲ್ಲಿ ವಾಪಸಾಗಿಲ್ಲ ಎಂದು ಸರ್ಕಾರವೇ ಒಪ್ಪಿಕೊಳ್ಳುತ್ತಿದೆ. ನಿರುದ್ಯೋಗ 2019ರಲ್ಲಿ 8.3% ಇದ್ದುದು, ಈಗ 2022ಕ್ಕೆ 7.2%ಗೆ ಇಳಿದಿದೆ.
ಹಣದುಬ್ಬರ ಅಪಾಯದ ಅಂಚಿನಲ್ಲಿದೆ, ಹಣಕಾಸು ಕೊರತೆ ಇನ್ನೂ ಆರ್ಥಿಕ ಶಿಸ್ತಿನ ಕಾಯಿದೆ ನಿಗದಿಪಡಿಸಿರುವ ವ್ಯಾಪ್ತಿಗಿಂತ ಹೊರಗೇ ಇದೆ. ಸರ್ಕಾರದ ಸಾಲ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ಆಮದು-ರಫ್ತು ಸಂತುಲನ ತೀರಾ ಅನಾರೋಗ್ಯಕರ ಸ್ಥಿತಿಯಲ್ಲಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ತನ್ನ ಆರ್ಥಿಕ ಸ್ಥಿತಿ ಸುಧಾರಿಸಲು ತನ್ನ ಪಾಲಿಸಿ ದರಗಳನ್ನು ಪರಿಷ್ಕರಿಸಿದರೆ, ಡಾಲರ್ ಎದುರು ರೂಪಾಯಿ ಇನ್ನಷ್ಟು ಕೆಳಗಿಳಿಯಲಿದೆ. ಜಗತ್ತು ಆರ್ಥಿಕವಾಗಿ ಕೆಳಗತಿಯಲ್ಲಿ ಸಾಗುತ್ತಿರುವುದರಿಂದ, ಮತ್ತು ಇಂಡೋನೇಷ್ಯಾ-ವಿಯೆಟ್ನಾಂನಂತಹ ದೇಶಗಳು ನಮ್ಮ ಜೊತೆ ರಫ್ತಿಗೆ ಸ್ಪರ್ಧೆಯಲ್ಲಿ ತೊಡಗಿಕೊಂಡಿರುವುದರಿಂದ, ನಮ್ಮ ರಫ್ತು ಸ್ಥಿತಿ ಮುಂದಿನ ವರ್ಷಕ್ಕೂ ಸುಧಾರಿಸುವ ಸನ್ನಿವೇಶ ಕಾಣಿಸುತ್ತಿಲ್ಲ. ಸರ್ಕಾರದ ಆದಾಯದಲ್ಲಿ ಬಲುದೊಡ್ಡ ಪಾಲು ಸಂಬಳ, ಪಿಂಚಿಣಿ, ಸಬ್ಸಿಡಿ, ಗ್ರಾಂಟುಗಳು, ಸಾಲ ಮರುಪಾವತಿಗೇ ಹೋಗುತ್ತಿವೆ.
ಸರ್ಕಾರ ಸಬ್ಸಿಡಿಗಳನ್ನು ನೇರವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಇಂಡಿಯಾ ಪ್ಲಾನಿನಲ್ಲಿದೆಯಾದರೂ, ಪೆಟ್ರೋಲಿಯಂ, ರಸಗೊಬ್ಬರದಂತಹ ಸಬ್ಸಿಡಿಗಳು, ಉತ್ಪಾದನೆ ಆಧರಿತ ಇನ್ಸೆಂಟೀವ್‌ಗಳು (PLI) ಇನ್ನೂ ಹಣವಂತರ ಪಾಲಾಗುತ್ತಿವೆಯೇ ಹೊರತು ತಳಮಟ್ಟಕ್ಕೆ ತಲುಪುತ್ತಿಲ್ಲ. ಆರ್ಥಿಕ ಅಸಮಾನತೆಯನ್ನು ನಿವಾರಿಸಲು, ತೆರಿಗೆ ನೆಟ್ ಹಿಗ್ಗಿಸಲು GST ಎಂಬ ಪರೋಕ್ಷ ಹಾದಿಯ ಮೂಲಕ ಮತ್ತೆ ಜನಸಾಮಾನ್ಯರನ್ನೇ ಸುಲಿಯಲಾಗುತ್ತಿದೆಯೇ ಹೊರತು ‘ಶ್ರೀಮಂತರಿಗೆ ತೆರಿಗೆ’ ಹಾಕುವ ಮನಸ್ಸು ಸರ್ಕಾರಕ್ಕೆ ಇನ್ನೂ ಬಂದಂತಿಲ್ಲ. ಸರ್ಕಾರ ತಾನು ಸಂಗ್ರಹಿಸಿರುವ ಸೆಸ್-ಸರ್‍ಚಾರ್ಜುಗಳನ್ನು ರಾಜ್ಯಗಳಿಗೆ ಮರುಹಂಚಿಕೆ ಮಾಡದಿರುವುದು, ರಾಜ್ಯಗಳ ಕಣ್ಣನ್ನು ಕೆಂಪಾಗಿಸಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಮೂರನೇ ಎರಡು ಪಾಲು ಗ್ರಾಮೀಣರ ಜೀವನ ಮಟ್ಟ ಸುಧಾರಣೆ ಆಗಿದೆ ಎಂದು ವರದಿ ಹೇಳುತ್ತಿದೆ. ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಆರೋಗ್ಯ ವಿಮೆ, ಮಹಿಳಾ ಸಶಕ್ತೀಕರಣ ಕಾರ್ಯಕ್ರಮಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಈ ನಿರ್ಧಾರ ತಳೆಯಲಾಗಿದೆ. ಕಾಗದದ ಮೇಲೆ ಇದೆಲ್ಲ ಸರಿ ಇರಬಹುದು. ಆದರೆ, ತಳಮಟ್ಟದಲ್ಲಿ ಇದೆಲ್ಲ ಪ್ರತಿಯೊಂದೂ ಕಾರ್ಯಕ್ರಮದ ಅನುಷ್ಠಾನ ಹೇಗಿದೆ ಎಂದು ಗೊತ್ತಿರುವವರಿಗೆ ಹೆಚ್ಚಿಗೆ ಹೇಳಬೇಕಾಗಿಲ್ಲ.
ಇಷ್ಟೆಲ್ಲ ಸನ್ನಿವೇಶ ಇನ್ನೂ ಮೋಡಗಟ್ಟಿಕೊಂಡೇ ಇದ್ದರೂ ‘ವಿಕಸಿತ ಭಾರತ’ 2047ಕ್ಕೆ ಗ್ಯಾರಂಟಿ ಅನ್ನುತ್ತಿದೆ, ಈ ಎಕನಾಮಿಕ್ ಸರ್ವೇ. ಸರ್ವೇ ಓದಲು ಆಸಕ್ತರು ಇಲ್ಲಿ ಅದನ್ನು ಓದಬಹುದು: https://www.indiabudget.gov.in/economicsurvey/index.php

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).