ಚೈತ್ರಾ ಮತ್ತು ತಂಡದಿಂದ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ, ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಅಭಿನವ ಹಾಲಶ್ರೀ, ಬೆಂಗಳೂರಿನ ಸಿಸಿಹೆಚ್ 57ನೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಹಾಲಾಶ್ರೀಗೆ ಜಾಮೀನು ನೀಡದಂತೆ ಸಿಸಿಬಿ ಆಕ್ಷೇಪಣೆ ಸಲ್ಲಿಸಿತ್ತು. ಈಗ ಈ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.
ವಂಚನೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬರುತ್ತಿದ್ದಂತೆಯೇ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಹಾಲಶ್ರೀ, ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಂಚನೆ ಪ್ರಕರಣದಲ್ಲಿ ಹಾಲಶ್ರೀ ವಿರುದ್ಧ ಯಾವುದೇ ಆರೋಪವಿಲ್ಲ. ಚೈತ್ರಾ ಕುಂದಾಪುರ ವಿರುದ್ಧ ಮಾತ್ರ ವಂಚನೆ ಆರೋಪವಿದೆ. ಹೀಗಾಗಿ ಅಭಿನವ ಹಾಲಶ್ರೀಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಹಾಲಶ್ರೀ ಪರ ವಕೀಲರು ಮನವಿ ಮಾಡಿದ್ದರು.
ಇದನ್ನು ಓದಿದ್ದೀರಾ? ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಸಿದವರ ಮೇಲೆ ಎಫ್ಐಆರ್
ವಿಚಾರಣೆ ನಡೆಸಿದ್ದ ಕೋರ್ಟ್, ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸಿಸಿಬಿಗೆ ಸೂಚಿಸಿತ್ತು. ಈ ನಡುವೆ ಹಾಲಶ್ರೀಗೆ ನಿರೀಕ್ಷಣಾ ಜಾಮೀನು ನೀಡದಂತೆ ವಂಚನೆಗೆ ಒಳಗಾದ ಉದ್ಯಮಿ ಗೋವಿಂದಬಾಬು ಪೂಜಾರಿ ಕೂಡ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಅಷ್ಟಲ್ಲದೆ, ತನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಉದ್ಯಮಿ ಗೋವಿಂದಬಾಬು ಪೂಜಾರಿ ಸೇರಿದಂತೆ ಕೆಲವರ ವಿರುದ್ಧ ಅಭಿನವ ಹಾಲಶ್ರೀ ದೂರು ನೀಡಿದ್ದರು. ಅಭಿನವ ಹಾಲಶ್ರೀ ದೂರಿನ ಬಗ್ಗೆ ಪೊಲೀಸರು ಎನ್ಸಿಆರ್ ದಾಖಲಿಸಿದ್ದರು.