ಚಾಮರಾಜ ನಗರ ಲೋಕಸಭಾ ಕ್ಷೇತ್ರ ಎಸ್ಸಿ ಮೀಸಲು ಕ್ಷೇತ್ರ. ಬಿಜೆಪಿಯಿಂದ ಮಾಜಿ ಶಾಸಕ ಎಸ್ ಬಾಲರಾಜು ಅಭ್ಯರ್ಥಿಯಾಗಿದ್ದಾರೆ, ಕಾಂಗ್ರೆಸ್ ಸುನಿಲ್ ಬೋಸ್ ಅವರಿಗೆ ಟಿಕೆಟ್ ನೀಡಿದೆ.
ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಧ್ರುವ ನಾರಾಯಣ್ ಅವರ ಅಕಾಲಿಕ ನಿಧನ ಕ್ಷೇತ್ರದ ಮಟ್ಟಿಗೆ ಮರೆಯಲಾರದ ಸಂಗತಿ. ಅವರಿಲ್ಲದ ಚುನಾವಣೆ ಮಸುಕಾಗಿದೆ. ವಿ ಶ್ರೀನಿವಾಸ್ ಪ್ರಸಾದ್ ಅವರು ವಯೋ ಸಹಜವಾಗಿ ರಾಜಕೀಯ ನಿವೃತ್ತಿಯಾಗಿದ್ದರಿಂದ ಪಕ್ಷಗಳ ನಡುವಣ ಜಿದ್ದಾಜಿದ್ದಿ ಏರ್ಪಟ್ಟಿದೆ.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗಿದರೆ, ಜೆಡಿಎಸ್ ಒಂದು ಕ್ಷೇತ್ರದಲ್ಲಿ ಖಾತೆ ತೆರೆದಿದೆ. ಬಿಜೆಪಿ ತನ್ನೆಲ್ಲ ಕ್ಷೇತ್ರಗಳನ್ನು ಕಳೆದುಕೊಂಡು ಯಾವುದೇ ಹಿಡಿತವನ್ನು ಹೊಂದಿಲ್ಲ.
ಚಾಮರಾಜ ನಗರ ಕಾಂಗ್ರೆಸ್ ವಿಚಾರದಲ್ಲಿ ಸರಾಗವಾಗಿ ಗೆಲ್ಲಬಹುದಾದ ಕ್ಷೇತ್ರ. ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್ ಸಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿದ್ದು ಸಿಎಂ ತವರು ಕ್ಷೇತ್ರ, ತಂದೆಯವರ ಟಿ ನರಸೀಪುರ ಕ್ಷೇತ್ರ ಇದೇ ವ್ಯಾಪ್ತಿಗೆ ಬರುವುದರಿಂದ ಬಲ ಬಂದಂತಾಗಿದೆ. ರಾಜಕೀಯವಾಗಿ ಹೊಸಮುಖ ಆದ್ರೆ ತಂದೆಯವರ ರಾಜಕಾರಣದ ಹಿರಿತನ, ಕ್ಷೇತ್ರದಲ್ಲಿ ಅವರಿಗಿರುವ ಹಿಡಿತ ಮಗನಿಗೆ ಕೈಹಿಡಿಯಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದು.
ಇನ್ನು ಬಿಜೆಪಿ ವಿಚಾರಕ್ಕೆ ಬಂದರೆ ಅಖಾಡದಲ್ಲಿ ವಿ ಶ್ರೀನಿವಾಸ್ ಪ್ರಸಾದ್ ಅವರು ಈ ಬಾರಿ ಕಣದಲ್ಲಿ ಇಲ್ಲ. ಕಳೆದ ಬಾರಿ ಗುಂಡ್ಲುಪೇಟೆಯ ಬಿಜೆಪಿಯಿಂದ ನಿರಂಜನ್ ಕುಮಾರ್, ನಂಜನಗೂಡು ಕ್ಷೇತ್ರದಿಂದ ಅಳಿಯ ಹರ್ಷವರ್ಧನ್, ಕೊಳ್ಳೆಗಾಲದಿಂದ ಎನ್ ಮಹೇಶ್ ಬಿಜೆಪಿ ಶಾಸಕರಾಗಿದ್ದರು. ಈಬಾರಿ ಎಲ್ಲರೂ ಸೋತಿರುವುದರಿಂದ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಅಂತಹ ಹಿಡಿತ ಇಲ್ಲ.
ಯಡಿಯೂರಪ್ಪ ಆಪ್ತ ಅಚ್ಚರಿಯ ಅಭ್ಯರ್ಥಿ ಎಸ್ ಬಾಲರಾಜ್ ಮೂಲತಃ ಯಳಂದೂರು ತಾಲ್ಲೂಕು ಮದ್ದೂರಿನವರು. ಮಾಜಿ ಕೇಂದ್ರ ಸಚಿವರಾದ ರಾಜಶೇಖರ್ ಮೂರ್ತಿ ಅವರ ಶಿಷ್ಯ. 2004ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು.
2008ರಲ್ಲಿ ಕ್ಷೇತ್ರ ಮರು ವಿಂಗಡನೆ ಆದಾಗ ಕೊಳ್ಳೇಗಾಲ ಕ್ಷೇತ್ರಕ್ಕೆ ಆರ್ ಧ್ರುವ ನಾರಾಯಣ್ ಬಂದ ಕಾರಣಕ್ಕೆ ಅವಕಾಶ ಕೈತಪ್ಪಿತು. ಎಸ್ ಬಾಲರಾಜ್ ಹಾಗೂ ಧ್ರುವ ನಾರಾಯಣ್ ಇಬ್ಬರೂ ಯುವ ಕಾಂಗ್ರೆಸ್ ಮೂಲಕ ರಾಜಕಾರಣಕ್ಕೆ ಬಂದವರು. ಧ್ರುವ ನಾರಾಯಣ್ ಅವರ ಆಪ್ತರು ಕೂಡ ಆಗಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಾಲರಾಜ್ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಅಚ್ಚರಿ ಎಂಬಂತೆ ವಿ ಶ್ರೀನಿವಾಸ್ ಪ್ರಸಾದ್ ಅವರನ್ನು ಕಡೆಗಣಿಸಿ ಯಡಿಯೂರಪ್ಪ ಆಪ್ತ ಬಾಲರಾಜ್ ಅವರಿಗೆ ಟಿಕೆಟ್ ದೊರೆತಿದ್ದು ನಿರೀಕ್ಷೆಗೂ ಮೀರಿದ್ದು.
ಕ್ಷೇತ್ರದ ವಿಚಾರಕ್ಕೆ ಬರುವುದೇ ಆದ್ರೆ ಅತಿ ಹೆಚ್ಚು ಬಾರಿ ವಿ ಶ್ರೀನಿವಾಸ್ ಪ್ರಸಾದ್ ಬೇರೆ ಬೇರೆ ಪಕ್ಷಗಳಿಂದ ಗೆದ್ದವರು ದಲಿತ ಸಮುದಾಯದ ದೊಡ್ಡ ನಾಯಕರು. ಕ್ಷೇತ್ರದ ತುಂಬೆಲ್ಲ ಕಾರ್ಯಕರ್ತರು, ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಆದರೆ ಎಸ್ ಬಾಲರಾಜ್ ಅವ್ರು ಹೊಸ ಮುಖ. ಕೊಳ್ಳೇಗಾಲ ಬಿಟ್ಟು ಬೇರೆ ಕ್ಷೇತ್ರಗಳಿಗೆ ಅಷ್ಟು ಪರಿಚಯ ಇಲ್ಲ. ಮೈಸೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಇವರ್ಯಾರು ಅನ್ನುವುದು ಗೊತ್ತಿಲ್ಲ. ಹೀಗಿರುವಾಗ ಚಾಮರಾಜ ನಗರ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಬಿಜೆಪಿ ಗೆಲುವು ಸಾಧಿಸುವುದು ಅಸಾಧ್ಯದ ಮಾತು.
ವಿ ಶ್ರೀನಿವಾಸ್ ಪ್ರಸಾದ್ ಹಾಗೂ ಅಳಿಯ ಡಾ ಎನ್ ಎಸ್ ಮೋಹನ್ ಬಿಜೆಪಿ ಕಾರ್ಯಕರ್ತರಾಗಿ ಎಸ್ ಬಾಲರಾಜ್ ಅವರನ್ನು ಬೆಂಬಲಿಸುವುದಾಗಿ, ಬಿಜೆಪಿ ಗೆಲ್ಲಿಸಿಕೊಂಡು ಬರಲು ಕ್ಷೇತ್ರದಲ್ಲಿ ಕೆಲಸ ಮಾಡುವುದಾಗಿ ಪತ್ರಿಕಾ ಹೇಳಿಕೆ ನೀಡಿರುತ್ತಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸುನಿಲ್ ಬೋಸ್ ಅವರನ್ನು ಗೆಲ್ಲಿಸಲೇಬೇಕು ಅನ್ನುವ ತೀರ್ಮಾನಕ್ಕೆ ಬಂದಿದ್ದು, ಕ್ಷೇತ್ರದ ಮಟ್ಟಿಗೆ ಓಡಾಟ ಕಂಡುಬರುತ್ತಿದೆ. ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಕೆ ವೆಂಕಟೇಶ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್ ಸಿ ಮಹದೇವಪ್ಪ ಕ್ಷೇತ್ರ ವ್ಯಾಪಿ ಪ್ರಚಾರ ಮಾಡಲಿದ್ದು ಕಾರ್ಯಕರ್ತರಿಗೆ ಹೊಸ ಹುರುಪು ಬಂದಂತಾಗಿದೆ
