ಬಿಜೆಪಿಯಲ್ಲಿ ಹೊಸದಾಗಿ ಸೃಷ್ಟಿಯಾಗಿರುವ ಭಿನ್ನಮತೀಯ ನಾಯಕರ ಜೊತೆ ಗುರುತಿಸಿಕೊಂಡು ಸುದ್ದಿಯಾಗಿರುವ ಮೈಸೂರು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಧಾವಿಸಿದ್ದಾರೆ.
ಚಾಮುಂಡೇಶ್ವರಿ ಹಾಗೂ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆಯ ಕ್ರಮಕ್ಕೆ ಸಂಸದ ಯದುವೀರ್ ಮತ್ತು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದರೆ ಪ್ರತಾಪ್ ಸಿಂಹ ಅವರು ಸರ್ಕಾರ ಅತ್ಯುತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತಾವು ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಪ್ರಾಧಿಕಾರ ಬೇಕೆಂದು ಧ್ವನಿ ಎತ್ತಿದ್ದೆವು. ಅಂದು ಅದು ಸಾಧ್ಯವಾಗಲಿಲ್ಲ ಈಗ ಸಿದ್ದರಾಮಯ್ಯನವರು ಪ್ರಾಧಿಕಾರ ರಚನೆ ಮಾಡಿದ್ದಾರೆ. ಖಂಡಿತ ಇದು ಒಳ್ಳೆಯ ಕೆಲಸ” ಎಂದು ಹೇಳಿದರು.
ಚಾಮುಂಡೇಶ್ವರಿ ಪ್ರಾಧಿಕಾರ ರಚನೆಗೆ ಮೈಸೂರು ರಾಜ ಮನೆತನ ಮತ್ತು ಮೈಸೂರಿನ ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಒಡೆಯರ್ ಅಪಸ್ವರ ಎತ್ತಿರುವ ಬೆನ್ನಲ್ಲೇ ಪ್ರತಾಪ್ ಸಿಂಹ ಅವರ ಈ ಹೇಳಿಕೆ ಕುತೂಹಲ ಮೂಡಿಸಿದೆ. ಚಾಮುಂಡೇಶ್ವರಿ ಬೆಟ್ಟದಲ್ಲಿನ ಆಸ್ತಿ ಹೊಡೆದಾಟದ ಬಗ್ಗೆ ತಾವು ಮಾತನಾಡುವುದಿಲ್ಲ. ಆದರೆ ದೇವರು ಭಕ್ತರಿಗೆ ಸೇರಬೇಕು. ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕಾಗಿದ್ದು ಸರ್ಕಾರದ ಕರ್ತವ್ಯ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಚಾಮುಂಡಿ ಬೆಟ್ಟದ ಪ್ರಾಧಿಕಾರ ಸ್ಥಾಪನೆಗೆ ರಾಜಮನೆತನ ವಿರೋಧ ವಿಚಾರ ಕುರಿತು ಮಾತನಾಡಿದ ಅವರು, “ಸಿದ್ದರಾಮಯ್ಯ ಅವರನ್ನು ಕೆಲವು ಸೈದ್ದಾಂತಿಕ ವಿಚಾರದಲ್ಲಿ ಮಾತ್ರ ವಿರೋಧಿಸುತ್ತೇನೆ. ಬೆಟ್ಟದ ಯದ್ವಾತದ್ವಾ ಬೆಳವಣಿಗೆ ನಿಯಂತ್ರಿಸಲು ನ್ಯೂನತೆಗಳನ್ನು ಸರಿದೂಗಿಸಲು ಪ್ರಾಧಿಕಾರ ಅವಶ್ಯಕತೆ ಇದೆ. ಬೆಟ್ಟಕ್ಕೆ ಪೋಲಿಸ್ ಠಾಣೆ ಹಾಗೂ ಆಸ್ಪತ್ರೆ ಬೇಕು. ಇದೆಲ್ಲಾ ಆಗಲು ಒಂದು ಪ್ರಾಧಿಕಾರ ಬೇಕು” ಎಂದರು.