ರಾಜ್ಯದ ಹೆಸರಾಂತ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ, ಮಾಜಿ ಶಾಸಕ ಹಾಗೂ ಹಿರಿಯ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರನ್ನು ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಪಕ್ಷದ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ದೆಹಲಿಯಲ್ಲಿ ಘೋಷಣೆ ಮಾಡಿದ್ದಾರೆ. ಇವರ ಜೊತೆಗೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಬಿ ಟಿ ನಾಗಣ್ಣ ಮತ್ತು ಅರ್ಜುನ್ ಪರಪ್ಪ ಹಲಗಿಗೌಡರ್ ಅವರನ್ನು ನೇಮಿಸಲಾಗಿದೆ.
ಆಮ್ ಆದ್ಮಿ ಪಕ್ಷದ ಈ ಹಿಂದಿನ ರಾಜ್ಯಾಧ್ಯಕ್ಷರಾಗಿದ್ದ ಪೃಥ್ವಿ ರೆಡ್ಡಿ ಅವರನ್ನು ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ಮುಖ್ಯಮಂತ್ರಿ ಚಂದ್ರು ಅವರು 1985 ರಿಂದ 1989ರ ಅವಧಿಯಲ್ಲಿ ಗೌರಿಬಿದನೂರು ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. 1998ರಿಂದ 2010ರ ಅವಧಿಗೆ ಬಿಜೆಪಿಯಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 2008ರಿಂದ 2014ರ ಅವಧಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಟ, ರಂಗಭೂಮಿ ಕಲಾವಿದರಾಗಿ ಸಾಕಷ್ಟು ಹೆಸರು ಮಾಡಿದ್ದ ಮುಖ್ಯಮಂತ್ರಿ ಚಂದ್ರು, ಅನೇಕ ಧಾರವಾಹಿಗಳಲ್ಲಿಯೂ ಅಭಿನಯಿಸುವ ಮೂಲಕ ಮನೆಮಾತಾದವರು.

ಈ ಕುರಿತು ಟ್ವೀಟ್ ಮಾಡಿರುವ ಪೃಥ್ವಿ ರೆಡ್ಡಿ, “ನಮ್ಮ ನೂತನ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕರ್ನಾಟಕದ ಜನರ ಪ್ರೀತಿ ಗಳಿಸಿದ ನಿಸ್ವಾರ್ಥ, ಬದ್ಧತೆಯ ವ್ಯಕ್ತಿ. ಆಮ್ ಆದ್ಮಿ ಪಕ್ಷ ಮತ್ತು ನಮ್ಮ ರಾಜ್ಯದ ಜನತೆಗೆ ಅವರು ಬಹುದೊಡ್ಡ ಆಸ್ತಿ” ಎಂದಿದ್ದಾರೆ. ಇದರ ಜೊತೆಗೆ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಬಿ.ಟಿ.ನಾಗಣ್ಣ ಮತ್ತು ಅರ್ಜುನ್ ಹಲಗಿಗೌಡರಿಗೂ ಅಭಿನಂದನೆ ಸಲ್ಲಿಸಿದ್ದಾರೆ