ಅಂಗನವಾಡಿಗಳಿಗೆ ವಿದ್ಯುತ್ ಅನ್ನು ಉಚಿತವಾಗಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಇಡೀ ರಾಜ್ಯದಲ್ಲಿ ಎಷ್ಟು ಅಂಗನವಾಡಿಗಳಿವೆ, ಎಷ್ಟು ವೆಚ್ಚ ತಗುಲುತ್ತಿದೆ ಎನ್ನುವ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ರಾಜ್ಯ ಸರ್ಕಾರ ಶಾಲೆಗಳಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಅದೇ ರೀತಿ ಅಂಗನವಾಡಿಗಳಿಗೂ ವಿದ್ಯುತ್ ಉಚಿತವಾಗಿ ನೀಡಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಅವರು ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದರು.
“ದಸರಾ ಜನರ ಉತ್ಸವ. ಇದು ಸರ್ಕಾರದ ಉತ್ಸವ ಅಲ್ಲ. ಇದರ ಹೊಣೆ ಜಿಲ್ಲಾಡಳಿತದ್ದು. ದಸರಾ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗಬಾರದು. ದಸರಾ ಜವಾಬ್ದಾರಿ ಇದ್ದವರನ್ನು ಹೊರತುಪಡಿಸಿ ಉಳಿದವರು ದಸರಾ ನೆಪದಲ್ಲಿ ಕಳ್ಳಾಟ ಆಡಬಾರದು” ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
“ಮೈಸೂರು ಸಾಂಸ್ಕೃತಿಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಪ್ರತಿ ವರ್ಷ ದಸರಾ ಮಹೋತ್ಸವವನ್ನು ಸರ್ಕಾರ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಕಳೆದ ವರ್ಷ ಬರಗಾಲ ಇತ್ತು. ಭೀಕರ ಬರಗಾಲ. ಈ ವರ್ಷ ಮಳೆ ಆಗಿದೆ. ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಎಲ್ಲಾ ಜಲಾಶಯಗಳೂ ತುಂಬಿವೆ. ಹೀಗಾಗಿ ಬರಗಾಲ ಇಲ್ಲದಿರುವುದರಿಂದ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ದಸರಾ ಆಚರಿಸುವ ಜೊತೆಗೆ ವೈಭವ ಮತ್ತು ಸಂಭ್ರಮಕ್ಕೆ ಕೊರತೆ ಆಗಬಾರದು. ನಮ್ಮ ಪರಂಪರೆ, ಚರಿತ್ರೆ, ಇತಿಹಾಸದ ವೈಭವ ಮಹೋತ್ಸವದಲ್ಲಿ ಮತ್ತು ಮಹೋತ್ಸವದ ಪರಿಣಾಮದಲ್ಲಿ ಜನರಿಗೆ ಕಾಣಿಸಬೇಕು” ಎಂದರು.
“ದಸರಾ ಸಂದರ್ಭದಲ್ಲಿ ಪ್ರವಾಸಿಗರಿಗೆ ತೊಂದರೆ ಆಗದಂತೆ ಬಸ್ ಗಳ ವ್ಯವಸ್ಥೆಯನ್ನು ಸೂಕ್ತವಾಗಿ ಕಲ್ಪಿಸಬೇಕು. ಶಾಲೆಗಳಿಗೆ ಹೋಗುವ ಗ್ರಾಮೀಣ ಭಾಗದ ಮಕ್ಕಳಿಗೆ ಮತ್ತು ಶಿಕ್ಷಕಿಯರಿಗೆ ತೊಂದರೆ ಆಗದಂತೆ ಬಸ್ ಗಳ ಸವಲತ್ತುಗಳನ್ನು ಕಲ್ಪಿಸಬೇಕು” ಎಂದು ಸಿಎಂ ಸೂಚಿಸಿದರು.