ಲೈಂಗಿಕ ಕಾರ್ಯಕರ್ತೆಯರಿಗೆ ಪರ್ಯಾಯ ಬದುಕು ಕಟ್ಟಿಕೊಡುವ ‘ಚೇತನಾ ಯೋಜನೆ’ ರಾಜ್ಯದಲ್ಲಿ ಕೇವಲ 1% ಲೈಂಗಿಕ ಕಾರ್ಯಕರ್ತೆಯರನ್ನು ಮಾತ್ರವೇ ತಲುಪಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಲೈಂಗಿಕ ಕಾರ್ಯಕರ್ತೆಯರು ವೇಶ್ಯಾ ವೃತ್ತಿಯನ್ನು ತೊರೆದು, ಸ್ವಯಂ ಉದ್ಯೋಗಕ್ಕಾಗಿ ಮತ್ತು ಗೌರವಯುತ ಜೀವನ ಕಟ್ಟಿಕೊಳ್ಳಲು ನೆರವಾಗಲು ಈ ಯೋಜನೆಯನ್ನು ತರಲಾಗಿದೆ. ಯೋಜನೆಯಡಿ 30,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ.
“ಯೋಜನೆಗೆ ಪ್ರತಿ ವರ್ಷ 2 ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತದೆ. ಈ ಮೊತ್ತ ಸಾಕಾಗುವುದಿಲ್ಲ. ನಿಧಿಯ ಕೊರತೆಯಿಂದಾಗಿ ಪ್ರತಿ ವರ್ಷ 651 ಲೈಂಗಿಕ ಕಾರ್ಯಕರ್ತೆಯರಿಗೆ ಮಾತ್ರವೇ ನೆರವು ನೀಡಲು ಸಾಧ್ಯವಾಗುತ್ತಿದೆ ಪುನರ್ವಸತಿ ಪಡೆಯಲು ಸಿದ್ಧರಿರುವ ಎಲ್ಲ ಲೈಂಗಿಕ ಕಾರ್ಯಕರ್ತೆಯರಿಗೆ ನೆರವು ನೀಡಲು ನಾಲ್ಕು ಪಟ್ಟು ಅಧಿಕ ನಿಧಿಯ ಅಗತ್ಯವಿದೆ” ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಜನರಲ್ ಮ್ಯಾನೇಜರ್ (ಚೇತನಾ ಯೋಜನೆ) ಪಾಲಿ ಎಂಜಿ ಹೇಳಿರುವುದಾಗಿ ಟಿಎನ್‌ಐಇ ವರದಿ ಮಾಡಿದೆ.
“ಯೋಜನೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಆಯೋಗ ಮನವಿ ಮಾಡಿದ್ದರೂ ನಿಧಿಯ ಹೆಚ್ಚಳವಾಗಿಲ್ಲ. ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿನ ಹಣದ ಕೊರತೆ ಇದಕ್ಕೆ ಕಾರಣ” ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಸುಮಾರು 3 ಲಕ್ಷ ಲೈಂಗಿಕ ಕಾರ್ಯಕರ್ತೆಯರಿದ್ದಾರೆ ಎಂದು ಅಧ್ಯಯನಗಳು ಹೇಳಿವೆ. ಆದರೆ, ಸೀಮಿತ ಹಣದ ಕಾರಣ ಇಲಾಖೆಯು ಅತ್ಯಂತ ಕಡಿಮೆ ಮಂದಿಗೆ ಮಾತ್ರ ಸಹಾಯ ಮಾಡುತ್ತಿದೆ.
ಈ ಸುದ್ದಿ ಓದಿದ್ದೀರಾ?: ಶಕ್ತಿ ಯೋಜನೆ | ಮತ್ತಷ್ಟು ‘ಸ್ವಾತಂತ್ರ್ಯ’ದತ್ತ ಮಹಿಳೆಯರ ಸವಾರಿ
“2022ರವರೆಗೆ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಇಚ್ಛಿಸುವ ಲೈಂಗಿಕ ಕಾರ್ಯಕರ್ತೆಯರಿಗೆ ತರಬೇತಿಯನ್ನೂ ನೀಡಲಾಗಿದೆ. 3-6 ದಿನಗಳ ಕಾರ್ಯಾಗಾರವು ಯೋಜನಾ ವರದಿ ತಯಾರಿಕೆ, ಸಾಮಾನ್ಯ ಲೆಕ್ಕಪತ್ರ ನಿರ್ವಹಣೆ, ವಸ್ತು ನಿರ್ವಹಣೆ ಮತ್ತು ಮಾರುಕಟ್ಟೆ ಕುರಿತು ತರಬೇತಿ ನೀಡಿದೆ” ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
“ಕರ್ನಾಟಕದಲ್ಲಿ ವೇಶ್ಯಾವಾಟಿಕೆ ವ್ಯವಸ್ಥೆ ಇಲ್ಲದಿರುವುದರಿಂದ ಅನೇಕರು ತಮ್ಮನ್ನು ಲೈಂಗಿಕ ಕಾರ್ಯಕರ್ತೆಯರೆಂದು ಘೋಷಿಸಿಕೊಳ್ಳಲು ಹೆದರುತ್ತಿದ್ದಾರೆ” ಎಂದು ಸಾಲಿಡಾರಿಟಿ ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಶುಭಾ ಚಾಕೋ ತಿಳಿಸಿದ್ದಾರೆ.
“30,000 ರೂಪಾಯಿಯ ಸಣ್ಣ ಮೊತ್ತದಲ್ಲಿ ಅವರು ಪರ್ಯಾಯ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಸುಭದ್ರ ಜೀವನ ಕಟ್ಟಿಕೊಳ್ಳಲು ಕನಿಷ್ಠ 1,00,000 ರೂಪಾಯಿ ಬೇಕಾಗುತ್ತದೆ. ಸಹಾಯ ಧನವನ್ನು ಒಂದು ಲಕ್ಷಕ್ಕೆ ಹೆಚ್ಚಿಸಬೇಕು” ಎಂದು ಲೈಂಗಿಕ ಕಾರ್ಯಕರ್ತೆಯರ ಪರವಾಗಿ ಕೆಲಸ ಮಾಡುವ ಎನ್‌ಜಿಒಗಳು ಒತ್ತಾಯಿಸಿವೆ.