ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರ ಈಗ ಮತ್ತಷ್ಟು ಕುತೂಹಲ ಕಾಯ್ದುಕೊಂಡಿದ್ದು, ಸಿಎಂ ಆಯ್ಕೆ ವಿಚಾರ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ ಶಿಫ್ಟ್ ಅಗಿದೆ.
ಇಂದು (ಮೆ 14) ಶಾಂಗ್ರಿಲಾ ಹೋಟೆಲ್‌ನಲ್ಲಿ ಕರೆಯಲಾಗಿದ್ದ ಶಾಸಕರ ಸಭೆಯಲ್ಲಿ ಒಂದು ಸಾಲಿನ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂಬ ನಿರ್ಣಯವನ್ನು ಸಭೆ ತಗೆದುಕೊಂಡಿದೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾರಥ್ಯದಲ್ಲಿ ಕಾಂಗ್ರೆಸ್ ಈ ಬಾರಿ ನಿರೀಕ್ಷೆ ಮೀರಿ ದಾಖಲೆ ಗೆಲುವನ್ನು ನಿರ್ಮಿಸಿದೆ. ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಈ ಇಬ್ಬರು ನಾಯಕರಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದು ಸದ್ಯ ಪ್ರಶ್ನೆಯಾಗಿಯೇ ಉಳಿದಿದೆ.
ಭಾನುವಾರ ಸಂಜೆ ಶಾಂಗ್ರಿಲಾ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಭಾಗವಹಿಸಿದ್ದರು.
ಕರ್ನಾಟಕದ ಶಾಸಕಾಂಗ ಪಕ್ಷದ ನಾಯಕ ಆಯ್ಕೆ ವಿಚಾರವಾಗಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವೀಕ್ಷಕರಾಗಿ ಸುಶೀಲ್ ಕುಮಾರ್ ಶಿಂಧೆ (ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರ), ಜಿತೇಂದ್ರ ಸಿಂಗ್ (ಎಐಸಿಸಿ ಪ್ರಧಾನ ಕಾರ್ಯದರ್ಶಿ) ಹಾಗೂ ದೀಪಕ್ ಬಬಾರಿಯಾ (ಮಾಜಿ ಎಐಸಿಸಿ ಪ್ರಧಾನ ಕಾರ್ಯದರ್ಶಿ) ಅವರನ್ನು ನಿಯೋಜಿಸಿದ್ದರು.
ವೀಕ್ಷಕರಾಗಿ ಬಂದ ಈ ಮೂವರು ನಾಯಕರು ಸಭೆಯಲ್ಲಿ ನಡೆದ ವಿಚಾರಗಳನ್ನು ಹೈಕಮಾಂಡ್‌ಗೆ ತಿಳಿಸಲಿದ್ದಾರೆ. ಅಂತಿಮವಾಗಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಬಹಿರಂಗವಾಗಲಿದೆ.

ಇಬ್ಬರ ನಾಯಕರ ಬೆಂಬಲಿಗರಿಂದ ಅಬ್ಬರ
ಶಾಂಗ್ರಿಲಾ ಹೋಟೆಲ್ ಒಳಗಡೆ ಕಾಂಗ್ರೆಸ್ ಶಾಸಕರ ಸಭೆ ನಡೆಯುತ್ತಿದ್ದರೆ ಅತ್ತ ಹೊರಗಡೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬೆಂಬಲಿಗರಿಂದ ಅಬ್ಬರ ಘೋಷಣೆಗಳು ವ್ಯಕ್ತವಾದವು.
ಡಿ ಕೆ ಶಿವಕುಮಾರ್ ಸಭೆಗೆ ಬರುತ್ತಿದ್ದಂತೆ ನೆರದಿದ್ದ ಅವರ ಅಪಾರ ಬೆಂಬಲಿಗರು ಡಿಕೆಸಿ ಭಾವಚಿತ್ರ ಹಿಡಿದು, ʼಡಿಕೆ.. ಡಿಕೆ..ʼ ಎಂದು ಕೂಗಿ ಸಂಭ್ರಮ ವ್ಯಕ್ತಪಡಿಸಿದರು. ಅತ್ತ ಸಿದ್ದರಾಮಯ್ಯ ಕೂಡ ಸಭೆಗೆ ಆಗಮಿಸುತ್ತಿದ್ದಂತೆ ನೆರೆದಿದ್ದ ಸಿದ್ದರಾಮಯ್ಯ ಬೆಂಬಲಿಗರು ಅವರ ಫೋಟೋ ಹಿಡಿದರು ʼಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯʼ ಎಂದು ಘೋಷಣೆ ಕೂಗಿದರು.