ರಾಜ್ಯದ ಜನರಿಗೆ ಮೋಸ ಮಾಡುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

Date:

Advertisements
  • ತೆಲಂಗಾಣದ ಮುಖ್ಯಮಂತ್ರಿಗಳ ಆರೋಪ ಚುನಾವಣಾ ಪ್ರೇರಿತ: ಸಿಎಂ ಕಿಡಿ
  • ಗ್ಯಾರಂಟಿಗಳನ್ನು 5 ವರ್ಷಗಳವರೆಗೆ ಅನುಷ್ಠಾನಗೊಳಿಸಲಿದೆ: ಸಿದ್ದರಾಮಯ್ಯ

ತೆಲಂಗಾಣದ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡಲಾಗುತ್ತಿಲ್ಲ ಎಂಬ ಆರೋಪಗಳು ಚುನಾವಣಾ ಪ್ರೇರಿತ ಮತ್ತು ಸತ್ಯಕ್ಕೆ ದೂರವಾಗಿದೆ. ಕರ್ನಾಟಕ ರಾಜ್ಯದ ಜನತೆಯನ್ನು ಮೋಸ ಮಾಡಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾಂಗ್ರೆಸ್ ನೀಡಿರುವ ಎಲ್ಲ ಪಂಚ ಗ್ಯಾರಂಟಿಗಳನ್ನು 5 ವರ್ಷಗಳವರೆಗೆ ಅನುಷ್ಠಾನಗೊಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ತೆಲಂಗಾಣ ರಾಜ್ಯಕ್ಕೆ ಭಾನುವಾರ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

“ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿತು. ನಾವು ಅಧಿಕಾರ ಸ್ವೀಕರಿಸಿದ ಮೇ 20 ರ ದಿನದಂದೇ ಕಾಂಗ್ರೆಸ್ ನೀಡಿದ್ದ ಐದೂ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸಂಪುಟ ಸಭೆ ನಡೆಸಿ ತೀರ್ಮಾನಿಸಿ, ಸಂಬಂಧಪಟ್ಟ ಸರ್ಕಾರಿ ಆದೇಶಗಳನ್ನು ಅಂದೇ ನೀಡಲಾಯಿತು” ಎಂದರು.

Advertisements

ಶಕ್ತಿ ಯೋಜನೆಗೆ ಮಹಿಳೆಯರ ಮೆಚ್ಚುಗೆ 

“ನಮ್ಮ ಮೊದಲ ಗ್ಯಾರಂಟಿಯಾದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆಯನ್ನು ಜೂನ್ 11 ರಿಂದ ಜಾರಿಗೊಳಿಸಲಾಯಿತು. ನಿನ್ನೆಯ ದಿನ ರಾಜ್ಯದಲ್ಲಿ 100.47 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ ಶಕ್ತಿ ಯೋಜನೆಯ ಯಶಸ್ವಿ ಅನುಷ್ಠಾನದ ಸಂಭ್ರಮವನ್ನು ಆಚರಿಸಲಾಯಿತು. ರಾಜ್ಯದಲ್ಲಿ ಯಾವ ಜಾತಿಧರ್ಮಗಳ ಬೇಧವಿಲ್ಲದೇ ಪ್ರತಿದಿನ 60 ಲಕ್ಷ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಶ್ರಮಿಕ , ಉದ್ಯೋಗಸ್ಥ ಸೇರಿದಂತೆ ಎಲ್ಲ ವರ್ಗದ ಮಹಿಳೆಯರು ಯೋಜನೆಯ ಲಾಭಪಡೆಯುತ್ತಿದ್ದು, ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿಗಳು ಚುನಾವಣೆಯ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಆದರೆ ಇಲ್ಲಿನ ಇತರೆ ಪಕ್ಷಗಳು ಏಕೆ ಸುಳ್ಳು ಹೇಳುತ್ತಿವೆ” ಎಂದು ಪ್ರಶ್ನಿಸಿದರು.

ಅನ್ನಭಾಗ್ಯ

“ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ನೀಡುವ ಭರವಸೆಯನ್ನು ನೀಡಿತು. ಇದರ ಅನುಷ್ಠಾನಕ್ಕಾಗಿ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಆದರೆ ಕೇಂದ್ರ ಸರ್ಕಾರ ರಾಜ್ಯದ ಈ ಮನವಿಗೆ ಸ್ಪಂದಿಸಲಿಲ್ಲ. ಆದ್ದರಿಂದ 5 ಕೆಜಿ ಅಕ್ಕಿಯ ಬದಲು ಅದರ ಮೊತ್ತವನ್ನು ಜನರಿಗೆ ನೀಡಲು ಸರ್ಕಾರ ನಿರ್ಧರಿಸಿತು.ಈ ನಿಟ್ಟಿನಲ್ಲಿ 4.37 ಕೋಟಿ ಜನಸಂಖ್ಯೆಯ ಪ್ರತಿಯೊಬ್ಬರಿಗೆ ತಲಾ 700 ರೂ.ಗಳನ್ನು ಪ್ರತಿ ಫಲಾನುಭವಿಯ ಖಾತೆಗೆ ನೀಡಲಾಗುತ್ತಿದೆ” ಎಂದು ಹೇಳಿದರು.

ಗೃಹಜ್ಯೋತಿ

“ಗೃಹಜ್ಯೋತಿ ಯೋಜನೆಯನ್ನು ಜುಲೈ 2023 ರಿಂದಲೇ ಜಾರಿಗೊಳಿಸಲಾಗಿದ್ದು,ರಾಜ್ಯದ ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ಅನ್ನು ಉಚಿತವಾಗಿ ನೀಡಲಾಗುತ್ತಿದೆ. 12 ತಿಂಗಳ ವಿದ್ಯುತ್ ಬಳಕೆಯ ಸರಾಸರಿಗೆ ಶೇ. 10 ರಷ್ಟು ಹೆಚ್ಚಿನ ಯೂನಿಟ್ ಸೇರಿಸಿ ನೀಡಲಾಗುತ್ತಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ ಹೊತ್ತಿಗೆ ಬಿಜೆಪಿಯಲ್ಲಿ ದೊಡ್ಡ ಬದಲಾವಣೆ: ಎಂ ಬಿ ಪಾಟೀಲ

ಗೃಹಲಕ್ಷ್ಮಿ

“ಗೃಹಲಕ್ಷ್ಮಿ ಯೋಜನೆಯಡಿ 1.14 ಕೋಟಿ ಮಹಿಳಾ ಯಜಮಾನಿಗೆ ತಲಾ 2000 ರೂ. ಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಯ ನೋಂದಣಿ ನಿರಂತರವಾಗಿ ನಡೆಯುತ್ತಿದ್ದು, ಯಾವುದೇ ಅಡಚಣೆಗಳಿಲ್ಲದೇ ಯೋಜನೆಯ ಲಾಭವನ್ನು ಮಹಿಳೆಯರು ಪಡೆಯಬಹುದಾಗಿದೆ” ಎಂದರು.

ಜನವರಿ 2024ರಲ್ಲಿ ಯುವನಿಧಿ 

“ಯುವನಿಧಿ ಯೋಜನೆಯಡಿ ರಾಜ್ಯದ ನಿರುದ್ಯೋಗಿ ಯುವಜನರನ್ನು ಸಶಕ್ತಗೊಳಿಸುವ ಉದ್ದೇಶದಿಂದ ಜಾರಿಗೊಳಿಸಲಾಗುವುದು. 2022-23ನೇ ಸಾಲಿನಲ್ಲಿ ಪದವಿ ಪಡೆದ ಯುವಜನರಿಗೆ 2 ವರ್ಷಗಳವರೆಗೆ ಮಾಸಿಕ 3000 ರೂ. ಹಾಗೂ 2 ವರ್ಷದವರಗೆ ಡಿಪ್ಲೊಮಾ ಮಾಡಿದ ಯುವಜನರಿಗೆ ಮಾಸಿಕ 1500 ರೂ.ಗಳನ್ನು ನೀಡಲಾಗುವುದು. ಇದಲ್ಲದೇ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ ನೀಡಲಾಗುತ್ತದೆ. ಈ ಯೋಜನೆಯನ್ನು ಜನವರಿ 2024 ರಿಂದ ಜಾರಿಗೆ ತರಲಾಗುವುದು. ಕರ್ನಾಟಕ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಒಂದೇ ವರ್ಷದೊಳಗೇ ಜಾರಿಗೊಳಿಸಿದೆ. ಈ ವರ್ಷ ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಸುಮಾರು 38 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ” ಎಂದು ಹೇಳಿದರು.

ಬಿಜೆಪಿ ತನ್ನ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಿಲ್ಲ

“ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದ್ದೇವೆ. ಈ ಹಿಂದೆಯೂ ಕಾಂಗ್ರೆಸ್ ಸರ್ಕಾರ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿತ್ತು. ಆದರೆ ಬಿಜೆಪಿ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ಸಾಕಷ್ಟು ಭರವಸೆಗಳನ್ನು ನೀಡಿದ್ದರೂ , 2019-2023ರ ತಮ್ಮ ಅವಧಿಯಲ್ಲಿ ಕೇವಲ ಶೇ. 10 ರಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ. ಪ್ರಧಾನಿ ಮೋದಿಯವರು ಬಿಡುಗಡೆಗೊಳಿಸಿದ್ದ ಬಿಜೆಪಿ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸದೇ ಇರುವುದು ಸತ್ಯ. ಆದ್ದರಿಂದ ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ವಿರೋಧಪಕ್ಷಗಳು ಮಾಡುತ್ತಿರುವ ಆರೋಪಗಳು ಚುನಾವಣಾ ಪ್ರೇರಿತವಾಗಿದ್ದು, ಸತ್ಯಕ್ಕೆ ದೂರವಾಗಿದೆ” ಎಂದರು.

ರಾಜ್ಯದ ಆರ್ಥಿಕತೆ ಸದೃಢವಾಗಿದೆ

“ಪ್ರಧಾನಿ ಮೋದಿಯವರು ರಾಜಸ್ಥಾನದ ತಮ್ಮ ಚುನಾವಣಾ ಭಾಷಣದಲ್ಲಿ ಕರ್ನಾಟಕ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗುವುದಿಲ್ಲ ಹಾಗೂ ರಾಜ್ಯದ ಆರ್ಥಿಕತೆ ಕುಂಠಿತವಾಗುತ್ತದೆ ಎಂದು ಟೀಕಿಸಿದ್ದರು. ಅವರ ಈ ಮಾತು ಸತ್ಯಕ್ಕೆ ದೂರವಾಗಿದ್ದು, ರಾಜ್ಯದ ಆರ್ಥಿಕತೆ ಸದೃಢವಾಗಿದ್ದು, ಅನುದಾನಕ್ಕೆ ಕೊರತೆ ಇಲ್ಲ. ಆದ್ದರಿಂದ ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಖಂಡಿತ ಜಯ ಸಾಧಿಸಲಿದ್ದು, ಅಧಿಕಾರಕ್ಕೆ ಬರಲಿದೆ. ತೆಲಂಗಾಣದಲ್ಲಿ ಪಕ್ಷ ನೀಡಿರುವ ಆರು ಗ್ಯಾರಂಟಿಗಳನ್ನು ಕಾಂಗ್ರೆಸ್ ಈಡೇರಿಸಲಿದ್ದು, ಇದರ ಬಗ್ಗೆ ತೆಲಂಗಾಣ ಜನರಿಗೆ ಯಾವುದೇ ಸಂಶಯ ಬೇಡ” ಎಂದು ಭರವಸೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X