ಸಿಇಟಿ ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ಅಭ್ಯರ್ಥಿಗಳ ಜನಿವಾರ ತೆಗೆಸಿದರೆ ದೊಡ್ಡ ವಿವಾದವಾಗುತ್ತದೆ. ಅದೇ ಹೆಣ್ಣುಮಗಳ ಕೊರಳಿಂದ ತಾಳಿ ತೆಗೆಸಿದಾಗ ಸುದ್ದಿಯೇ ಆಗುವುದಿಲ್ಲ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, “ಜನಿವಾರ ತೆಗೆಸಿದ್ದನ್ನು ನಾನೂ ಕೂಡ ಒಪ್ಪುವುದಿಲ್ಲ, ಖಂಡಿಸುತ್ತೇನೆ. ಜನಿವಾರಕ್ಕೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ತಾಳಿಗೂ ಇದೆ. ಆದರೆ, ಅದು ವಿವಾದ ಆಗಲಿಲ್ಲ” ಎಂದು ಪ್ರತಿಕ್ರಿಯಿಸಿದರು.
ಈ ಸುದ್ದಿ ಓದಿದ್ದೀರಾ? ದೇವರನ್ನು ಪೂಜಿಸುವವರಿಗೆ ಆಷಾಢಭೂತಿತನ ಇರಬಾರದು: ಸಿಎಂ ಸಿದ್ದರಾಮಯ್ಯ
“ಹೆಣ್ಣುಮಗಳ ತಾಳಿ ಬೇಕಿದ್ದರೆ ತೆಗೆಸಬಹುದು, ಅದು ಮಾಧ್ಯಮಗಳಿಗೆ ಲೆಕ್ಕಕ್ಕೇ ಇಲ್ಲ. ಏಕೆಂದರೆ ಆಕೆ ಶೂದ್ರ ಹೆಣ್ಣುಮಗಳು. ಆದರೆ ಜನಿವಾರ ತೆಗೆಸಿದ್ದೇ ದೊಡ್ಡ ವಿಷಯವಾಗಿದೆ. ಶೋಷಿತರ ಮೇಲೆ ದಬ್ಬಾಳಿಕೆ ನಡೆದರೆ ಯಾವುದೇ ಮಾಧ್ಯಮಗಳು, ರಾಜಕೀಯ ವ್ಯಕ್ತಿಗಳು ಪ್ರಸ್ತಾಪ ಮಾಡುವುದಿಲ್ಲ” ಎಂದರು.