ಚೀನಾ ಮತ್ತೆ ತನ್ನ ಕೆಟ್ಟ ಚಾಳಿ ಪ್ರದರ್ಶಿಸಿದ್ದು, ಭಾರತದ ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರದಂತಹ ಪ್ರದೇಶಗಳನ್ನು ಒಳಗೊಂಡಿರುವ 2023ರ ಅಧಿಕೃತ ಆವೃತ್ತಿಯ ನಕ್ಷೆಯನ್ನು ಬಿಡುಗಡೆ ಮಾಡಿದೆ.
2023ರ ಚೀನಾದ ಅಧಿಕೃತ ನಕ್ಷೆಯನ್ನು ಸೋಮವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯವು ನಕ್ಷೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ಟ್ವಿಟ್ಟರ್‌ನಲ್ಲಿ ತಿಳಿಸಿದೆ.
ಕಳೆದ ಏಪ್ರಿಲ್‌ನಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳನ್ನು ಮರುನಾಮಕರಣ ಮಾಡುವ ಚೀನಾದ ಪ್ರಯತ್ನಗಳನ್ನು ಭಾರತ ತಿರಸ್ಕರಿಸಿದ ನಂತರ ಹೊಸ ನಕ್ಷೆಯನ್ನು ಚೀನಾ ಬಿಡುಗಡೆ ಮಾಡಿದೆ.
“ಚೀನಾವು ಇಂತಹ ಪ್ರಯತ್ನ ಮಾಡುತ್ತಿರುವುದು ಇದೇ ಮೊದಲಲ್ಲ. ನಾವು ಇದನ್ನು ಖಡಾಖಂಡಿತವಾಗಿ ತಿರಸ್ಕರಿಸುತ್ತೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
“ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. ಆವಿಷ್ಕರಿಸಿದ ಹೆಸರುಗಳನ್ನು ನಿಯೋಜಿಸುವ ಪ್ರಯತ್ನಗಳು ನಿಜ ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ” ಎಂದು ಬಾಗ್ಚಿ ಹೇಳಿದ್ದಾರೆ.
ಗ್ಲೋಬಲ್ ಟೈಮ್ಸ್ ಪ್ರದರ್ಶಿಸಿರುವ ನಕ್ಷೆಯಲ್ಲಿ 1962ರ ಯುದ್ಧದಲ್ಲಿ ಭಾರತದಿಂದ ಆಕ್ರಮಿಸಿಕೊಂಡ ಅಕ್ಸಾಯ್ ಚಿನ್ ಪ್ರದೇಶ ಹಾಗೂ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಚೀನಾ ಹೇಳಿಕೊಂಡಿದೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿ ಸದಾ ಉಳಿಯುತ್ತದೆ ಎಂದು ಭಾರತ ಸರ್ಕಾರ ಒತ್ತಿ ಹೇಳುತ್ತಿರುವಾಗಲೂ ಚೀನಾದ ಈ ಪ್ರಯತ್ನಕ್ಕೆ ಕೈ ಹಾಕಿದೆ.
ಈ ಸುದ್ದಿ ಓದಿದ್ದೀರಾ? ಡಿಸೆಂಬರ್‌ನಲ್ಲಿ ಲೋಕಸಭಾ ಚುನಾವಣೆ ಸಾಧ್ಯತೆ; ಪ್ರಚಾರಕ್ಕೆ ಎಲ್ಲ ಚಾಪರ್‌ಗಳನ್ನು ಬುಕ್ ಮಾಡಿರುವ ಬಿಜೆಪಿ
ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಇದನ್ನು ಸರಿಪಡಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ದಕ್ಷಿಣ ಆಫ್ರಿಕಾದ ಜೊಹಾನೆಸ್ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತುಕತೆ ನಡೆಸಿದ್ದರು. ಗಡಿಯಲ್ಲಿ ಉದ್ವಿಗ್ನತೆ ಶಮನ ಮತ್ತು ಸೇನಾ ಪಡೆಗಳನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಿದ್ದರು.
ಭಾರತ ಮತ್ತು ಚೀನಾದ ಬಾಂಧವ್ಯ ಕಳೆದ ಮೂರು ವರ್ಷಗಳಿಂದ ತೀರ ಹದಗೆಟ್ಟಿದೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಉದ್ವಿಗ್ನತೆಯಿಂದಾಗಿ ಎಲ್ಲ ಹಂತಗಳಲ್ಲಿ ಸಂಬಂಧಗಳು ಹಳಸಿವೆ. 2020 ರಿಂದ ಪೂರ್ವ ಲಡಾಖ್‌ನಲ್ಲಿನ ಗಡಿ ಸಮಸ್ಯೆಗಳನ್ನು ಪರಿಹರಿಸಲು ಎರಡೂ ಕಡೆಯಿಂದ ಇಲ್ಲಿಯವರೆಗೂ 19 ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದೆ.