ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯು ಭಾರತದ ನೆಲವನ್ನು ಅತಿಕ್ರಮಿಸಿದೆ. ಸುಮಾರು 4000 ಚದರ ಕಿ.ಮೀ. ಭೂಮಿಯನ್ನು ಭಾರತವೇ ಚೀನಾಕ್ಕೆ ಬಿಟ್ಟುಕೊಂಟಂತಿದೆ ಎಂಬುದು ಲಡಾಖ್ ನಿವಾಸಿಗಳ ಮತ್ತು ವಿರೋಧ ಪಕ್ಷಗಳ ಆರೋಪವಾಗಿದೆ. ಚೀನಾದ ಅತಿಕ್ರಮಣವನ್ನು ವಿರೋಧಿಸುವ ವಿಚಾರದಲ್ಲಿ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಮೌನವು ಈ ಆರೋಪವನ್ನು ನಿಜವನ್ನಾಗಿಸಿದೆ.
ಲೋಕಸಭೆಯಲ್ಲಿ ಗುರುವಾರ ಶೂನ್ಯ ವೇಳೆ ಸಂದರ್ಭದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಚೀನಾ ಅತಿಕ್ರಮಣ ಮತ್ತು ಅಮೆರಿಕದ ಸುಂಕ ವಿಚಾರದಲ್ಲಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚೀನಾ ಅತಿಕ್ರಮಿಸಿರುವ ಭೂ ಪ್ರದೇಶವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಮತ್ತು ಅಮೆರಿಕ ವಿಧಿಸಿರುವ ಶೇಕಡ 17ರಷ್ಟು ಸುಂಕದ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಭಾರತದ ಲಡಾಖ್‌ನಲ್ಲಿ ಚೀನಾ ಬಂಕರ್ ನಿರ್ಮಾಣ – ಮೋದಿ ಮೌನವಾಗಿದ್ದಾರೆ, ಅಂದರೆ…!
“ಭಾರತದ ಸುಮಾರು 4,000 ಚದರ ಕಿ.ಮೀ. ಪ್ರದೇಶವನ್ನು ಚೀನಾ ಅತಿಕ್ರಮಿಸಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೂ ವಿದೇಶಾಂಗ ಕಾರ್ಯದರ್ಶಿ ಅವರು ಚೀನಾದ ರಾಯಭಾರಿಯೊಂದಿಗೆ ಕೇಕ್ ಕತ್ತರಿಸಿದ್ದಾರೆ. ಇದು ಆಘಾತಕಾರಿ” ಎಂದು ವಿಪಕ್ಷ ನಾಯಕ ಹೇಳಿದ್ದಾರೆ.
ವಿಪಕ್ಷಗಳು ಮೋದಿ ಸರ್ಕಾರದ ಮೇಲೆ ಈ ಆರೋಪವನ್ನು ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡಾ ಹಲವು ಬಾರಿ ವಿಪಕ್ಷಗಳು, ಲಡಾಖ್‌ನ ಹೋರಾಟ ಸಮಿತಿಗಳು ಈ ವಿಚಾರವನ್ನು ಸರ್ಕಾರದ ಮುಂದಿರಿಸಿದೆ. ಆದರೆ ಸರ್ಕಾರ ಮಾತ್ರ ಭಾರತದ ಒಂದಿಂಚ್ಚು ಕೂಡಾ ಚೀನಾ ಒತ್ತುವರಿ ಮಾಡಿಲ್ಲ, ಹಾಗೆ ಮಾಡಲು ನಾವು ಬಿಡುವುದಿಲ್ಲ. ಇವೆಲ್ಲವೂ ವಿಪಕ್ಷಗಳ ಕಟ್ಟುಕಥೆ ಎಂದಿದ್ದಾರೆ. ತಾನು ಅಧಿಕಾರಕ್ಕೆ ಬಂದರೆ ಚೀನಾದ ಅತಿಕ್ರಮಣದ ವಿರುದ್ಧ ದೃಢ ನಿಲುವು ತಾಳುವುದಾಗಿ ಘರ್ಜಿಸಿದ್ದ ಮೋದಿ ಈ ವಿಚಾರದಲ್ಲಿ ಮೌನ ತಾಳಿದ್ದಾರೆ.
2024ರಲ್ಲಿ ಲಡಾಖ್ ಭೂಮಿಯನ್ನು ಚೀನಾ ಸೈನಿಕರು ಅತಿಕ್ರಮಿಸಿರುವುದನ್ನು ಸಾಕ್ಷ್ಯ ಸಮೇತವಾಗಿ ಬಹಿರಂಗಪಡಿಸಲು ಲಡಾಖ್ ಸಾಮಾಜಿಕ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ‘ಗಡಿ ಮೆರವಣಿಗೆ’ ಆಯೋಜಿಸಿದ್ದರು. ಆದರೆ ಈ ಮೆರವಣಿಗೆ ನಡೆಯುವುದಕ್ಕೂ ಒಂದು ದಿನ ಮುಂಚೆಯೇ ಆಡಳಿತವು ನಿಷೇಧಾಜ್ಞೆ ಜಾರಿ ಮಾಡಿತು. ಹೀಗಾಗಿ ಸಂಘಟಕರು ‘ಗಡಿ ಮೆರವಣಿಗೆ’ ವಾಪಸ್ ಪಡೆದರು.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ ಉಗ್ರ ದಾಳಿ ಬಗ್ಗೆ ಪ್ರಧಾನಿ ಮೋದಿ ‘ಮೌನ’ ಪ್ರಶ್ನಿಸಿದ ರಾಹುಲ್ ಗಾಂಧಿ
ಪೂರ್ವ ಲಡಾಖ್‌ನ ಸುಮಾರು 60,000 ಚದರ ಕಿ.ಮೀ.ಗಿಂತಲೂ ಅಧಿಕ ನೆಲ ತನ್ನದೆಂಬುದು ಚೀನಾ ವಾದ. ಆದರೆ ಅಲ್ಲಿ ಯಾವುದೇ ಅಂತಾರಾಷ್ಟ್ರೀಯ ಗಡಿಯಿಲ್ಲ. 1962ರಲ್ಲಿ ಯುದ್ಧ ನಡೆದ ಬಳಿಕ ಭಾರತ, ಚೀನಾ ಸೇನೆಗಳು ತಾತ್ಕಾಲಿಕ ಕದನ ವಿರಾಮ ರೇಖೆಯನ್ನು (ವಾಸ್ತವ ನಿಯಂತ್ರಣ ರೇಖೆ -ಎಲ್‌ಎಸಿ) ಘೋಷಿಸಿಕೊಂಡಿದೆ. ಆದರೆ 2020ರ ನಂತರ ಚೀನಾ ರೇಖೆಯನ್ನು ಬದಲಾಯಿಸಲು ಯತ್ನಿಸಿದೆ. ಅದರಿಂದಾಗಿ 2020ರ ಮೇ, ಜೂನ್, ಅಕ್ಟೋಬರ್‌ನಲ್ಲಿ ಗಾಲ್ವಾನ್, ಪ್ಯಾಂಗ್ಯಾಂಗ್ ಬಳಿ ಚೀನಾ- ಭಾರತ ಯೋಧರ ನಡುವೆ ಘರ್ಷಣೆ ನಡೆದಿದೆ. ಭಾರೀ ಪ್ರಮಾಣದಲ್ಲಿ ಸೇನೆಯೂ ಜಮೆಯಾಗಿತ್ತು.
ಮಾತುಕತೆ ಬಳಿಕ ಸೇನೆ ಹಿಂಪಡೆಯಲಾಗಿದೆ. ಆದರೆ ಬಫರ್ ಝೋನ್ ರೂಪಿಸುವ ಚೀನಾದ ಷರತ್ತಿಗೆ ಭಾರತ ಒಪ್ಪಿದೆ. ಅದು ಭಾರತದ ನೆಲದಲ್ಲೇ ಇದೆ. ಈ ಹಿಂದೆ ಭಾರತ ಸೇನೆ ಗಸ್ತು ನಡೆಸುತ್ತಿದ್ದ ಜಾಗ ಇದೀಗ ಚೀನಾ ಸೇನೆಯ ನಿಯಂತ್ರಣದಲ್ಲಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ನಾವು ಯಾವುದೇ ಭೂ ಪ್ರದೇಶ ಬಿಟ್ಟುಕೊಟ್ಟಿಲ್ಲ ಎಂದು ಹೇಳುತ್ತಲೇ ಇದೆ. ಮೋದಿಯೂ ಮೌನವಾಗಿದ್ದಾರೆ. ಈ ಮೌನ ಪ್ರಶ್ನಿಸಿದರೆ, ದೇಶದ್ರೋಹಿ ಎಂಬ ಪಟ್ಟ ಲಭಿಸುತ್ತದೆ.

ಚೀನಾವನ್ನು ಪ್ರಶ್ನೆ ಮಾಡಿದರೆ ಆಪ್ತ ಗೆಳೆಯರ ಚೀನಾ ಸಹಭಾಗಿತ್ವದಲ್ಲಿ ಉದ್ಯಮಕ್ಕೆ ಹೊಡೆತ ಬೀಳಬಹುದಾದ ಭಯವೂ ಇರಬಹುದೇನೋ