ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಪತಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವ ಉದ್ದೇಶದಿಂದ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ, ಆ ಬಗ್ಗೆ ಮಾತನಾಡಿರುವ ಪೂರ್ಣಿಮಾ ಅವರು ಅಕ್ಟೋಬರ್ 20ರಂದು ಕಾಂಗ್ರೆಸ್ ಸೇರಲಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ಸರ್ಕಾರದ ಅವಧಿಯಲ್ಲಿ ಪೂರ್ಣಿಮಾ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಶಾಸಕಿಯಾಗಿದ್ದರು. ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸೋಲುಂಡಿದ್ದರು. ಇದೀಗ, ವಿಧಾನ ಪರಿಷತ್‌ಗೆ ಶಿಕ್ಷಕರ ಕ್ಷೇತ್ರದಿಂದ ಸದಸ್ಯರ ಆಯ್ಕೆಗೆ ಚುನಾವಣೆಯ ಸಮೀಪಿಸುತ್ತಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿ ಪೂರ್ಣಿಮಾ ಅವರ ಪತಿ ಡಿ.ಟಿ ಶ್ರೀನಿವಾಸ್ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ. ಶ್ರೀನಿವಾಸ್ ಅವರೊಂದಿಗೆ ಪೂರ್ಣಿಮಾ ಅವರೂ ಕಾಂಗ್ರೆಸ್ ಸೇರಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಪೂರ್ಣಿಮಾ ಶ್ರೀನಿವಾಸ್, “ಈ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರು. ನಾನು ಪ್ರತಿನಿಧಿಸಿದ್ದ ಕ್ಷೇತ್ರವನ್ನು ಬಿಡಬಾರದೆಂಬ ಕಾರಣಕ್ಕೆ ಹಿರಿಯೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಆದರೆ, ಅನಿವಾರ್ಯ ಕಾರಣಗಳಿಂದ ಸೋಲು ಕಾಣಬೇಕಾಯಿತು. ಅಂತಿಮವಾಗಿ ಅಕ್ಟೋಬರ್ 20 ರಂದು ಕಾಂಗ್ರೆಸ್ ಸೇರುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
“ಬಿಜೆಪಿಯಿಂದ ನಾನು ಶಾಸಕಿಯಾಗಿದ್ದೆ. ಅಂದಿನ ಸರ್ಕಾರ ಹಿರಿಯೂರು ಕ್ಷೇತ್ರಕ್ಕೆ ಅನುದಾನದಲ್ಲಿ ಕೊರತೆ ಮಾಡಿರಲಿಲ್ಲ. ಆದರೆ, ಗೊಲ್ಲ ಸಮುದಾಯಕ್ಕೆ ನೀಡಬೇಕಾದ ಸೌಲಭ್ಯಗಳನ್ನು ನೀಡುವಲ್ಲಿ ಸಾಕಷ್ಟು ಹಿಂದೇಟು ಹಾಕಿತ್ತು. 2020ರಲ್ಲಿ ತರಾತುರಿಯಾಗಿ ಗೊಲ್ಲ ಅಭಿವೃದ್ದಿ ನಿಗಮ ಸ್ಥಾಪಿಸಿತು. ಬಳಿಕ, ಕಾಡುಗೊಲ್ಲ ಅಭಿವೃದ್ದಿ ನಿಗಮ ಎಂದು ಹೆಸರು ಬದಲಾಯಿಸಿ ಗೊಂದಲಗಳನ್ನು ಸೃಷ್ಠಿಸಿತು. ನಿಗಮದಿಂದಲೂ ಯಾವ ಪ್ರಯೋಜನ ಆಗಲಿಲ್ಲ” ಎಂದು ದೂರಿದ್ದಾರೆ.