ಚಿತ್ರದುರ್ಗ ಲೋಕಸಭಾ ಕ್ಷೇತ್ರ | ಪರಿಶಿಷ್ಟ ಮೀಸಲು ಕ್ಷೇತ್ರದಲ್ಲಿ ಯಾರಿಗೆ ಮತದಾರರ ಮಣೆ

Date:

Advertisements

ಐತಿಹಾಸಿಕವಾಗಿ ಕೋಟೆ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗದಲ್ಲಿ 1952ರಿಂದ ನಡೆದಿರುವ ಲೋಕಸಭಾ ಚುನಾವಣೆಗಳ ಇತಿಹಾಸವನ್ನು ಗಮನಿಸಿದಾಗ ಅತ್ಯಂತ ತುರುಸಿನ ಪೈಪೋಟಿ ಮತ್ತು ವಿಶೇಷಗಳು ನಡೆದಿರುವುದು ಕಂಡುಬರುತ್ತದೆ. ಹೇಳಿಕೇಳಿ ಚಿತ್ರದುರ್ಗ ಬಿಸಿಲ ನಾಡು, ಬಯಲು ಪ್ರದೇಶ. ಇಂತಹ ಬಯಲು ಪ್ರದೇಶದಲ್ಲಿ ಬೇಸಿಗೆ ಬಿಸಿ ಹೆಚ್ಚಾಗುತ್ತಿರುವಂತೆಯೇ ಚುನಾವಣೆಯ ಬಿಸಿ ಕೂಡ ಕಾವೇರುತ್ತಿದೆ.

ಪ್ರಸ್ತುತ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಚಿತ್ರದುರ್ಗ, ಹೊಸದುರ್ಗ, ಹಿರಿಯೂರು, ಮೊಳಕಾಲ್ಕೂರು, ಚಳ್ಳಕೆರೆ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳೊಂದಿಗೆ ತುಮಕೂರು ಜಿಲ್ಲೆಯ ಸಿರಾ ಹಾಗೂ ಪಾವಗಡ ಒಳಗೊಂಡು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪುರುಷ ಮತದಾರರು 9,19,064, ಮಹಿಳಾ ಮತದಾರರು 9,22,769 ಇದ್ದು ಇತರೆ-104 ಸೇರಿದಂತೆ ಒಟ್ಟು 18,41,937 ಮತದಾರರಿದ್ದಾರೆ. 2019 ರಲ್ಲಿ ಜರುಗಿದ ಚುನಾವಣೆ ಸಂದರ್ಭದಲ್ಲಿ 17,60,111 ಮತದಾರರಿದ್ದರು. 18 ವರ್ಷ ವಯಸ್ಸು ಪೂರ್ಣಗೊಂಡ ಎಲ್ಲರೂ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸುವಂತೆ ಚುನಾವಣಾ ಆಯೋಗ ಉತ್ತೇಜನ ನೀಡಲು ಕೈಗೊಂಡ ಹಲವು ಕ್ರಮಗಳಿಂದಾಗಿ ಯುವ ಮತದಾರರ ಸಂಖ್ಯೆಯಲ್ಲಿ ಈ ಬಾರಿ 81,886 ಮತದಾರರು ಹೆಚ್ಚಳವಾಗಿದ್ದಾರೆ. ಮಹಿಳಾ ಮತದಾರರು ಪುರುಷ ಮತದಾರರಿಗಿಂತ ಕೊಂಚ ಹೆಚ್ಚಿರುವುದು ವಿಶೇಷ.

Advertisements

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ರಾಷ್ಟ್ರ ನಾಯಕ ಎಸ್.ನಿಜಲಿಂಗಪ್ಪನವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ರಾಜ್ಯಕ್ಕೆ ಮುಖ್ಯಮಂತ್ರಿಯೊಬ್ಬರನ್ನು ಕೊಡುಗೆಯಾಗಿ ನೀಡಿದ ಕೀರ್ತಿ ಚಿತ್ರದುರ್ಗಕ್ಕೆ ಇದೆ.

ಸ್ವಾತಂತ್ರ್ಯ ಭಾರತ ಗಣತಂತ್ರ ಅಳವಡಿಸಿಕೊಂಡು ಪ್ರಜಾಪ್ರಭುತ್ವ ದೇಶವಾದ ನಂತರ 1952ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ನೆಡೆದ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್. ನಿಜಲಿಂಗಪ್ಪ ಅವರು ಕಿಸಾನ್ ಮದ್ದೂರ್ ಪ್ರಜಾ ಪಾರ್ಟಿ (ಕೆಎಂಪಿಪಿ) ಅಭ್ಯರ್ಥಿ ಜಿ. ಮರುಳಪ್ಪ ಅವರನ್ನು 79,152 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು. ಪಕ್ಷೇತರ ಅಭ್ಯರ್ಥಿಯಾಗಿದ್ದ ಎಚ್.ಎಸ್. ವೆಂಕಟಾಚಲಯ್ಯ ಅವರು 44,211 ಮತಗಳನ್ನು ಗಳಿಸಿದ್ದರು. 1957ರಲ್ಲಿ ನಡೆದ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾ ಸೋಶಿಯಲಿಸ್ಟ್ ಪಕ್ಷ (ಪಿಎಸ್‌ಪಿ)ದಿಂದ ಸ್ಪರ್ಧಿಸಿದ್ದ ಮೊಹ್ಮದ್ ಇಮಾಮ್ ಅವರು ಕಾಂಗ್ರೆಸ್ ಪಕ್ಷದ ಎಸ್. ರಂಗರಾವ್ ಅವರಿಗಿಂತ 11,459 ಹೆಚ್ಚು ಮತಗಳನ್ನು ಪಡೆದು ವಿಜಯಿಯಾದರು.

ಆದರೆ, 1962ರಲ್ಲಿ ನೆಡೆದ ಚುನಾವಣೆಯಲ್ಲಿ ವೀರಬಸಪ್ಪ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಬಸಪ್ಪ ಅವರನ್ನು 44,849 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು.

1967ರ ಚುನಾವಣೆಯಲ್ಲಿ ಮತ್ತೇ ಸ್ವತಂತ್ರ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಜೆ.ಎಂ. ಮಹ್ಮದ್ ಇಮಾಮ್ ಅವರು ಕಾಂಗ್ರೆಸ್‌ನ ಎಸ್. ವೀರಬಸಪ್ಪ ಅವರಿಗಿಂತ 31,932 ಹೆಚ್ಚು ಮತಗಳನ್ನುಗಳಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಸಿ. ರಂಗಯ್ಯ ಹಾಗೂ ಪಿ.ಎಚ್. ಜಯದೇವಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

1971ರ ಚುನಾವಣೆಯಲ್ಲಿ ಎನ್.ಪಿ.ಜೆ. ಪಕ್ಷದಿಂದ ಸ್ಪರ್ಧಿಸಿದ ಕೊಂಡಜ್ಜಿ ಬಸಪ್ಪ ಅವರು ಸ್ವತಂತ್ರ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆ.ಎಂ. ಮಹ್ಮದ್ ಇಮಾಮ್ ಅವರನ್ನು ಪರಾಭವಗೊಳಿಸಿ ವಿಜಯಶಾಲಿಯಾದರು. ಗೆಲುವಿನ ಅಂತರ 1,69,702 ಮತಗಳಾಗಿದ್ದು, ಅಂದು ಭಾರತದಲ್ಲಿ ಬೃಹತ್ ಅಂತರ ಎಂದು ಚರ್ಚೆಯಾಗಿತ್ತು. ಕಳೆದ ಚುನಾವಣೆಗಳಲ್ಲಿ ಸತತವಾಗಿ ಪಕ್ಷೇತರರಾಗಿ ಸ್ಪರ್ಧಿಸಿದ ಸಿ. ರಂಗಯ್ಯ ಅವರು ಮೂರನೇ ಸ್ಥಾನ ಪಡೆದರು.

ತುರ್ತು ಪರಿಸ್ಥಿತಿ ನಂತರ ನೆಡೆದ 1977ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ. ಮಲ್ಲಣ್ಣ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾದರು. ಈ ಚುನಾವಣೆಯಲ್ಲಿ ಅವರು ಭಾರತೀಯ ಲೋಕದಳ ಪಕ್ಷದ ಹುರಿಯಾಳು ಎಚ್.ಸಿ. ಬೋರಯ್ಯ ಅವರಿಗಿಂತ 86,654 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದರು. ಪಕ್ಷೇತರ ಅಭ್ಯರ್ಥಿ ಚಂದ್ರಶೇಖರಯ್ಯ ಮೂರನೇ ಸ್ಥಾನ ಪಡೆದರು. ಈ ಸಂದರ್ಭದಲ್ಲಿ ದೇಶದಲ್ಲಿ ಕಾಂಗ್ರೆಸ್ಸೇತರ ಗಾಳಿ ಬೀಸಿ ಜನತಾ ಪಕ್ಷ, ಜನತಾದಳ, ಲೋಕದಳ ಇತರ ಪಕ್ಷಗಳ ಉದಯವಾಗಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರವೊಂದು ಅಸ್ಥಿತ್ವಕ್ಕೆ ಬಂದು ಮೊರಾರ್ಜಿ ದೇಸಾಯಿ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾದರು.

ಇಲ್ಲಿಂದ ಭಾರತದಲ್ಲಿ ಅನೇಕ ರಾಜಕೀಯ ಸ್ಥಿತ್ಯಂತರಗಳು ಪ್ರಾರಂಭವಾಗಲು 1975-1977ರವರೆಗಿನ ತುರ್ತು ಪರಿಸ್ಥಿತಿ ಕಾರಣವಾಯಿತು. 1980ರ ಸಾರ್ವತ್ರಿಕ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕೆ. ಮಲ್ಲಣ್ಣ ಅವರು ಜನತಾ ಪಕ್ಷದ ಅಭ್ಯರ್ಥಿ ಬಿ.ಎಲ್. ಗೌಡ ಅವರನ್ನು 1,09,361 ಮತಗಳಿಂದ ಸೋಲಿಸಿ ಪುನರಾಯ್ಕೆಯಾದರು. ಈ ಚುನಾವಣೆಯಲ್ಲಿ ಕಾಂಗ್ರೆಸ್(ಯು) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ಸಿ. ಬೋರಯ್ಯ ಮೂರನೇ ಸ್ಥಾನ ಹಾಗೂ ಜನತಾ (ಎಸ್)ನ ಸಿ.ಆರ್. ಬಸಪ್ಪ ನಾಲ್ಕನೇ ಸ್ಥಾನ ಗಳಿಸಿದರು.

1984ರ ಚುನಾವಣೆಯಲ್ಲಿ ಕೆ.ಎಚ್. ರಂಗನಾಥ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜನತಾ ಪಕ್ಷದ ಅಭ್ಯರ್ಥಿ ಬಿ.ಎಲ್. ಗೌಡ ಅವರನ್ನು 56,811 ಮತಗಳಿಂದ ಪರಾಭವಗೊಳಿಸಿ ಆಯ್ಕೆಯಾದರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಮೂಡಲಗಿರಿಯಪ್ಪ ಅವರು ತಮ್ಮ ಪ್ರತಿಸ್ಪರ್ಧಿಯಾದ ಜನತಾದಳ ಪಕ್ಷದ ಅಭ್ಯರ್ಥಿ ಸಣ್ಣ ಚಿಕ್ಕಪ್ಪ ಅವರನ್ನು 1,42,193 ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿ ವಿಜಯಿಯಾದರು.

1991ರ ಚುನಾವಣೆಯಲ್ಲಿ ಮತ್ತೆ ಸಿ.ಪಿ. ಮೂಡಲಗಿರಿಯಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ತಮ್ಮ ಸಮೀಪದ ಎದುರಾಳಿ ಬಿಜೆಪಿ ಪಕ್ಷದ ಎಲ್.ಜಿ. ಹಾವನೂರು ಅವರನ್ನು 82,512 ಮತಗಳ ಅಂತರದಿಂದ ಸೋಲಿಸಿ ಎರಡನೇ ಬಾರಿಗೆ ಆಯ್ಕೆಯಾದರು. ಬಾರಿ ಪೈಪೋಟಿ ಇದ್ದ 1996ರ ಚುನಾವಣೆಯಲ್ಲಿ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪಿ. ಕೋದಂಡರಾಮಯ್ಯ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಸಿ.ಪಿ. ಮೂಡಲಗಿರಿಯಪ್ಪ ಅವರನ್ನು 19,382 ಮತಗಳ ಅಂತರದಿಂದ ಸೋಲಿಸಿ ವಿಜಯಿಯಾದರು.

1998ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂಡಲಗಿರಿಯಪ್ಪ ಅವರು ಲೋಕಶಕ್ತಿ ಪಕ್ಷದ ಅಭ್ಯರ್ಥಿ ಕೋದಂಡರಾಮಯ್ಯ ಅವರನ್ನು 58,321 ಮತಗಳಿಂದ ಪರಾಭವಗೊಳಿಸಿ ಮೂರನೇ ಬಾರಿ ಲೋಕಸಭೆ ಪ್ರವೇಶಿಸಿದರು. 1999 ಚುನಾವಣೆಯಲ್ಲಿ ನಡೆದ ತುರುಸಿನ ಸ್ಪರ್ಧೆಯಲ್ಲಿ ಕನ್ನಡ ಚಲನ ಚಿತ್ರರಂಗದ ನಟ ಶಶಿಕುಮಾರ್ ಅವರು ಜನತಾದಳ (ಯು) ಪಕ್ಷದಿಂದ ಸ್ಪರ್ಧಿಸಿ, ಕಾಂಗ್ರೆಸ್ ಪಕ್ಷದ ಸಿ.ಪಿ. ಮೂಡಲಗಿರಿಯಪ್ಪ ಅವರನ್ನು ಕೇವಲ 11,178 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು.

2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಅವರು ಜನತಾದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ಪಿ. ಕೋದಂಡರಾಮಯ್ಯ ಅವರಿಗಿಂತ 37, 460 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು.2009 ರಲ್ಲಿ ನೆಡೆದ ಚುನಾವಣೆಯಲ್ಲಿ ಬಿಜೆಪಿಯ ಜನಾರ್ಧನಸ್ವಾಮಿ ಅವರು, ಕಾಂಗ್ರೆಸ್‌ ಬಿ. ತಿಪ್ಪೇಸ್ವಾಮಿ ಅವರಿಗಿಂತ 135656 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

2014ರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಎನ್. ಚಂದ್ರಪ್ಪ ಅವರು ಬಿಜೆಪಿ ಪಕ್ಷದ ಜನಾರ್ಧನಸ್ವಾಮಿ ಅವರನ್ನು 1,01,291 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು. 2019ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಎ. ನಾರಾಯಣಸ್ವಾಮಿ ಅವರು ಕಾಂಗ್ರೆಸ್‌ನ ಬಿ.ಎನ್. ಚಂದ್ರಪ್ಪ ಅವರಿಗಿಂತ 80,178 ಹೆಚ್ಚು ಮತಗಳಿಂದ ಗೆಲುವು ಸಾಧಿಸಿದರು. ಪ್ರಸ್ತುತ ಕೇಂದ್ರದಲ್ಲಿ ಸಬಲೀಕರಣ ಖಾತೆ ಸಚಿವರಾಗಿ ಕ್ಷೇತ್ರದ ಮೊದಲ ಕೇಂದ್ರ ಸಚಿವರಾಗಿದ್ದಾರೆ.

1952ರಿಂದ 17ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 9ಬಾರಿ ಗೆಲುವು ಸಾಧಿಸಿದರೆ, ಪ್ರಜಾ ಸೋಷಿಯಲಿಸ್ಟ್, ಜನತಾದಳ ಎಸ್, ಜನತಾದಳ ಸಂಯುಕ್ತ, ಬಿಜೆಪಿ ಸೇರಿದಂತೆ ಇತರ ಪಕ್ಷಗಳು 8 ಬಾರಿ ಹಿಡಿತ ಸಾಧಿಸಿವೆ. ಪಕ್ಷಗಳು ಸೇರಿದಂತೆ ಕ್ಷೇತ್ರದ ಜನತೆ ಬಹುಪಾಲು ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕಿರುವುದು ಕಂಡು ಬರುತ್ತದೆ. ಗೆಲುವು ಸಾಧಿಸಿರುವ ಬಹುತೇಕ ಅಭ್ಯರ್ಥಿಗಳಲ್ಲಿ ಜಿಲ್ಲೆಯ ಹೊರಗಿನವರೇ ಹೆಚ್ಚಾಗಿದ್ದಾರೆ.

ವಾಣಿವಿಲಾಸ್ ಸಾಗರ, ಭದ್ರಾ ಮೇಲ್ದಂಡೆ, ಹೊರತುಪಡಿಸಿ ಯಾವುದೇ ನೀರಾವರಿ ಸೌಲಭ್ಯ ಇಲ್ಲದಿರುವುದು ಜಿಲ್ಲೆಯ ಬಹುತೇಕ ಬರದನಾಡಾಗಿ ಉಳಿಯಲು ಕಾರಣವಾಗಿದೆ. ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಮಾತ್ರ ಹರಿಯುವ ವೇದಾವತಿ ನದಿಯು ವಾಣಿವಿಲಾಸ ಸಾಗರವನ್ನು ಸೇರಿ, ಒಂದಷ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದರು ಕೂಡ ಕ್ಷೇತ್ರದ ಬಹುತೇಕ ಬಯಲು ಸೀಮೆ ಮತ್ತು ಬರದ ನಾಡಾಗಿ ನೀರಾವರಿಯಿಂದ ವಂಚಿತವಾಗಿದೆ.

ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ ಭದ್ರ ಮೇಲ್ದಂಡೆ ಯೋಜನೆಯು ಕೂಡ ಸುಮಾರು 20 ವರ್ಷಗಳಿಂದಲೂ ಕೂಡ ಕುಂಟುತ್ತ ಸಾಗುತ್ತಿರುವುದು, ಅದರ ಪ್ರಯೋಜನ ರೈತರಿಗೆ ಹಾಗೂ ಕ್ಷೇತ್ರದ ಜನರಿಗೆ ದೊರೆಯದಿರುವುದು ಮತ್ತು ಇದರ ಬಗ್ಗೆ ಯಾವುದೇ ಸಂಸದರು ಗಮನಹರಿಸದೆ ನೀರಾವರಿಯನ್ನು ಅನುಷ್ಠಾನಗೊಳಿಸಲು ಯತ್ನಿಸದಿರುವುದು ಜಿಲ್ಲೆಗೆ ಶಾಪವಾಗಿ ಉಳಿದಿದೆ.

ಜಿಲ್ಲೆಯು ಈ ಮುಂಚೆ ಹತ್ತಿ, ರಾಗಿ, ಜೋಳ, ಈರುಳ್ಳಿ, ಶೇಂಗಾ ಹೆಚ್ಚು ಬೆಳೆಯುವ ಪ್ರದೇಶವಾಗಿ ಗುರುತಿಸಿಕೊಂಡಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆ, ನೀರಾವರಿಯ ಸೌಲಭ್ಯ ಇಲ್ಲದಿರುವ ಕಾರಣ ಹತ್ತಿ ಮತ್ತು ಶೇಂಗಾ ಹಿನ್ನೆಲೆಗೆ ಸರಿದು ಮಳೆಯಾಶ್ರಿತ ಪ್ರದೇಶದಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದೆ.‌

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಎಣ್ಣೆ ಗಿರಣಿಗಳಿದ್ದು ಆಯಿಲ್ ಸಿಟಿ ಎಂದೇ ಖ್ಯಾತವಾಗಿತ್ತು. ಆದರೆ, ಇತ್ತೀಚಿಗೆ ಶೇಂಗಾ ಬೆಳೆಯುವ ಪ್ರದೇಶ ಕಡಿಮೆ ಯಾದಾಗಿನಿಂದ ಅಲ್ಲಿನ ವಹಿವಾಟು ಕಡಿಮೆಯಾಗಿದ್ದು ಕಾರ್ಮಿಕರು ವ್ಯಾಪಾರಸ್ಥರು ಮತ್ತು ರೈತರು ಬೇರೆ ಬೇರೆ ಉದ್ಯೋಗಗಳತ್ತ, ಬೆಳೆಗಳತ್ತ ಮುಖ ಮಾಡಿದ್ದಾರೆ.

ಜಿಲ್ಲೆಯು ಒಂದು ಸುಂದರ ಭೌಗೋಳಿಕ ಪ್ರದೇಶವಾಗಿದ್ದು, ಉತ್ತಮ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಜಿಲ್ಲೆಯ ಐತಿಹಾಸಿಕ ಪಾಳೇಗಾರರ ಕೋಟೆ ಚಿತ್ರದುರ್ಗಕ್ಕೆ ಹೊಂದಿಕೊಂಡಿದ್ದು ಸುಮಾರು 32 ಮೈಲು ಉದ್ದದ ವ್ಯಾಪ್ತಿಯ ಕೋಟೆ, ಕೊತ್ತಲ ಇದ್ದು ಏಷ್ಯಾದಲ್ಲಿ 2ನೇ ಅತಿದೊಡ್ಡ ಕೋಟೆ ಎನಿಸಿದೆ. ಇಲ್ಲಿಗೆ ಪ್ರತಿನಿತ್ಯ ದೇಶದ ವಿವಿಧ ಭಾಗಗಳಿಂದ ಮತ್ತು ಹೊರದೇಶಗಳಿಂದಲೂ ಬಹುತೇಕ ಯಾತ್ರಿಕರು ಭೇಟಿ ನೀಡುತ್ತಾರೆ. ಇತಿಹಾಸದಲ್ಲಿ ಬಹು ಪ್ರಸಿದ್ದ ಪಾಳೆಗಾರರ ಸಂಸ್ಥಾನವಾಗಿದ್ದ ಚಿತ್ರದುರ್ಗ, ದೇಶದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿತ್ತು. ಮತ್ತಿ ತಿಮ್ಮಣ್ಣನಾಯಕ, ಬಿಚ್ಚುಗತ್ತಿ ಭರಮಣ್ಣನಾಯಕ, ರಾಜ ವೀರ ಮದಕರಿನಾಯಕ ಹಾಗೂ ಇನ್ನಿತರರು ಈ ಸಂಸ್ಥಾನವನ್ನು ಆಳಿದ ಪ್ರಸಿದ್ದ ಪಾಳೇಗಾರರು.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಜಟಲಿಂಗೇಶ್ವರ, ಜಟಂಗಿರಾಮೇಶ್ವರ, ಆಡು ಮಲ್ಲೇಶ್ವರ, ಜೋಗಿಮಟ್ಟಿ ಅರಣ್ಯ, ಚಂದ್ರವಳ್ಳಿ, ಅಶೋಕ ಶಾಸನದ ಸಿದ್ದಾಪುರ, ಹೊಸದುರ್ಗದ ಹಾಲು ರಾಮೇಶ್ವರ, ನಗರದ ಉಚ್ಚಂಗಿ ಏಕನಾತೇಶ್ವರ, ಕೋಟೆಯ ಸಂಪಿಗೆ ಸಿದ್ದೇಶ್ವರ ಮತ್ತು ಅಂಕಲಿಮಠ ವಿಶೇಷ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಚಿತ್ರದುರ್ಗದ ಲೋಕಸಭಾ ಕ್ಷೇತ್ರವು ಪ್ರಸಿದ್ಧ ವೀರಶೈವ, ಲಿಂಗಾಯಿತ, ವಿರಕ್ತ ಮಠಗಳು ಸೇರಿದಂತೆ ರಾಜ್ಯದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಮತ್ತು ಹಿಂದುಳಿದ ವರ್ಗದ ಅನೇಕ ಮಠದ ಸಂಸ್ಥಾನಗಳನ್ನು ಹೊಂದಿರುವ ಕೀರ್ತಿ ಹೊಂದಿದೆ.

ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಪರಿಶಿಷ್ಟ ಜಾತಿಯ ಮತಗಳಿರುವ ಕ್ಷೇತ್ರ ಇದಾಗಿದ್ದು ಸದ್ಯ ಪರಿಶಿಷ್ಟ ಮೀಸಲು ಕ್ಷೇತ್ರವಾಗಿದೆ. 18ನೇ ಲೋಕಸಭಾ ಚುನಾವಣೆಯ ಬಿಸಿ ಬಿಸಿಲಿನ ಜೊತೆಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ಈ ಬಾರಿ ಮತದಾರ ಯಾವ ಅಭ್ಯರ್ಥಿಯ ಗೆಲುವಿಗೆ ಮತ ಚಲಾಯಿಸಲಿದ್ದಾನೆ ಎನ್ನುವುದು ವಿಶೇಷ.‌

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಬಿಹಾರದಲ್ಲಿ ಒಂದು ಮತವನ್ನೂ ಕದಿಯಲು ನಾವು ಬಿಡಲ್ಲ: ರಾಹುಲ್ ಗಾಂಧಿ

ಮತಗಳನ್ನು ಕದಿಯಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿದೆ ಎಂದು...

Download Eedina App Android / iOS

X