‘ಏಕರೂಪ ನಾಗರಿಕ ಸಂಹಿತೆ’ಯನ್ನು ಜಾರಿಗೊಳಿಸುವುದಾಗಿ ಧೀರ್ಘಾವಧಿಯಿಂದ ಹೇಳುತ್ತಲೇ ಇದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೀವ್ರ ವಿರೋಧಕ್ಕೆ ಗುರಿಯಾಗಿತ್ತು. ಇದೀಗ, ‘ಏಕರೂಪ ನಾಗರಿಕ ಸಂಹಿತೆ’ಯನ್ನು ‘ಜಾತ್ಯತೀತ ನಾಗರಿಕ ಸಂಹಿತೆ’ ಎಂದು ಬದಲಿಸಿದೆ. ಹೆಸರು ಬದಲಾಗಿದೆಯೇ ಹೊರತು, ಸಂಹಿತೆಯೊಳಗಿನ ನೀತಿ, ಮಾರ್ಗಸೂಚಿ, ಮಾನದಂಡಗಳು ಬದಲಾಗಿಲ್ಲ. ಹೀಗಾಗಿ, ಈಗಲೇ ಈ ಸಂಹಿತೆಯು ವಿರೋಧದ ಸುಳಿಯಲ್ಲಿಯೇ ಇದೆ. ಇನ್ನು, ಸಿವಿಲ್ ಕೋಡ್ ಬಗ್ಗೆ ಅಸಮಾಧಾನ ಹೊಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರಪಕ್ಷಗಳು ಕೂಡ, ಸಂಹಿತೆಯ ಬಗ್ಗೆ ಸಮಾಲೋಚನೆ ನಡೆಸಬೇಕು ಎಂದು ಹೇಳುತ್ತಿವೆ.
ಎನ್‌ಡಿಎ ಭಾಗವಾಗಿರುವ ಪ್ರಮುಖ ಮಿತ್ರಪಕ್ಷಗಳಾದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ‘ಸಿವಿಲ್ ಕೋಡ್’ ಬಗ್ಗೆ ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿವೆ. ಚುನಾವಣೆಗೂ ಮುಂಚೆಯೂ ಕೂಡ ಈ ಎರಡೂ ಪಕ್ಷಗಳು ಬಿಜೆಪಿ ಪ್ರಸ್ತಾಪಿಸುತ್ತಿದ್ದ ‘ಏಕರೂಪ ನಾಗಕರಿ ಸಂಹಿತೆ’ಯನ್ನು ಬೆಂಬಲಿಸಿರಲಿಲ್ಲ. ಈಗಲೂ, ಅದನ್ನು ಬೆಂಬಲಿಸಲು ಹಿಂದೇಟು ಹಾಕುತ್ತಿವೆ. ಹೀಗಾಗಿ, ಜಾತ್ಯತೀತತೆಯ ಹೆಸರಿನಲ್ಲಿ ‘ನಾಗರಿಕ ಸಂಹಿತೆ’ಗೆ ಬೆಂಬಲ ಪಡೆಯಲು ಬಿಜೆಪಿ ವಂಚುಹಾಕುತ್ತಿದೆ.
ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಲ್ಲಿ ನಿಂತು ಭಾಷಣ ಮಾಡಿದ್ದ ಪ್ರಧಾನಿ ಮೋದಿ, “ದೇಶವು ‘ಕೋಮು ಸಂಹಿತೆ’ಯೊಂದಿಗೆ 75 ವರ್ಷಗಳನ್ನು ಕಳೆದಿದೆ. ಇದೀಗ, ಜಾತ್ಯತೀತ ನಾಗರಿಕ ಸಂಹಿತೆಯತ್ತ ಸಾಗಲು ಸಮಯ ಬಂದಿದೆ. ಇದು ಧಾರ್ಮಿಕ ತಾರತಮ್ಯದಿಂದ ಸ್ವಾತಂತ್ರ್ಯ ಪಡೆಯಲು ಕಾರಣವಾಗುತ್ತದೆ” ಎಂದು ಭಾರೀ ಭಾಷಣ ಮಾಡಿದ್ದಾರೆ.
“ನಮ್ಮ ದೇಶದಲ್ಲಿ ಸುಪ್ರೀಂ ಕೋರ್ಟ್ ‘ಏಕರೂಪ ನಾಗರಿಕ ಸಂಹಿತೆ’ಯ ಬಗ್ಗೆ ಪದೇ ಪದೇ ಚರ್ಚಿಸಿದೆ. ಹಲವು ನಿರ್ದೇಶನಗಳನ್ನು ನೀಡಿದೆ. ಈಗ ಇರುವ ನಾಗರಿಕ ಸಂಹಿತೆಯು ಒಂದು ರೀತಿಯ ಕೋಮು ನಾಗರಿಕ ಸಂಹಿತೆಯಾಗಿದೆ. ಸಂವಿಧಾನ ರಚನೆಕಾರರ ಕನಸನ್ನು ನನಸು ಮಾಡಲು ಜಾತ್ಯತೀತ ನಾಗರಿಕ ಸಂಹಿತೆಯ ಅಗತ್ಯವಿದೆ” ಎಂದು ಮೋದಿ ಹೇಳಿದ್ದಾರೆ.
ಮೋದಿ ಅವರು ಹೆಸರು ಬದಲಾವಣೆಯೊಂದಿಗೆ ಪ್ರಸ್ತಾಪಿಸಿರುವ ‘ಜಾತ್ಯತೀತ ನಾಗರಿಕ ಸಂಹಿತೆ’ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಡಿಪಿ ನಾಯಕರು, “ನಾವು ಯಾವಾಗಲೂ ಮುಸ್ಲಿಂ ಸಮುದಾಯದೊಂದಿಗೆ ಇದ್ದೇವೆ. ಮುಂದೆಯೂ ಇರುತ್ತೇವೆ. ಈಗ ಬಿಜೆಪಿ ತನ್ನ ಪ್ರಸ್ತಾಪಿತ ‘ನಾಗರಿಕ ಸಂಹಿತೆ’ಯ ಹೆಸರು ಬದಲಿಸಿರಬಹುದು. ಅದೇನೇ ಆಗಿದ್ದರೂ, ನಾವು ಅದರ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ನಂತರ ಮಾತ್ರವೇ, ನಾವು ನಿಲುವು ತೆಗೆದುಕೊಳ್ಳಲು ಸಾಧ್ಯ” ಎಂದು ಹೇಳಿದ್ದಾರೆ.
ಕಳೆದ ವಾರ, ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಪರಾಮರ್ಶೆಗೆ ನೀಡಲಾದ’ವಕ್ಫ್ ತಿದ್ದುಪಡಿ ಮಸೂದೆ’ಯನ್ನು ಟಿಡಿಪಿ ಬೆಂಬಲಿಸಿದ್ದರೂ, ಅದನ್ನು ಜೆಪಿಸಿಗೆ ಕಳುಹಿಸಲು ಪ್ರತಿಪಾದಿಸಿತ್ತು. ಅದೇ ರೀತಿ, ಏಕರೂಪ ನಾಗರಿಕ ಸಂಹಿತೆಗೆ ವಿರೋಧವಿಲ್ಲ ಎಂದಿರುವ ಜೆಡಿಯು ಕೂಡ, ಅದರ ಬಗ್ಗೆ ವಿಸ್ತೃತ ಸಮಾಲೋಕಚನೆಗಳ ಅಗತ್ಯವಿದೆ ಎಂದು ಹೇಳಿದೆ.
ಏಕರೂಪ ನಾಗರಿಕ ಸಂಹಿತೆ ಕುರಿತು ನಿತೀಶ್ ಕುಮಾರ್ ಅವರು 2017ರಲ್ಲಿ ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದರು. ಕೇಂದ್ರ ಅಥವಾ ರಾಜ್ಯ ಮಟ್ಟದಲ್ಲಿ ಸಂಹಿತೆ ಬಗ್ಗೆ ನಮಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ, ಈ ವಿಷಯದ ಬಗ್ಗೆ ವಿಸ್ತಾರವಾಗಿ ಸಮಾಲೋಚನೆ ಮತ್ತು ಒಮ್ಮತ ಪಡೆಯುವ ಅಗತ್ಯವಿದೆ” ಎಂದು ಹೇಳಿದ್ದರು. ಅವರ ಮಾತನನ್ನು ಈಗಲೂ ಜೆಡಿಯು ರಾಜಕೀಯ ಸಲಹೆಗಾರ ಮತ್ತು ರಾಷ್ಟ್ರೀಯ ವಕ್ತಾರ ಕೆ.ಸಿ. ತ್ಯಾಗಿ ಪುನರುಚ್ಚರಿಸಿದ್ದಾರೆ.
“ವಿವಿಧ ಧಾರ್ಮಿಕ ಗುಂಪುಗಳು, ವಿಶೇಷವಾಗಿ ಅಲ್ಪಸಂಖ್ಯಾತರ ನಡುವೆ ಒಮ್ಮತವಿಲ್ಲದೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು ಸಾಮಾಜಿಕ ಅಪಶ್ರುತಿಯ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಧಾರ್ಮಿಕ ಸ್ವಾತಂತ್ರ್ಯದ ಸಾಂವಿಧಾನಿಕ ಖಾತರಿಯಲ್ಲಿ ಮೇಲಿನ ನಂಬಿಕೆಯನ್ನು ಕ್ಷೀಣಿಸುವಂತೆ ಮಾಡುತ್ತದೆ” ಎಂದು 2017ರ ಪತ್ರದಲ್ಲಿ ನಿತೀಶ್ ಹೇಳಿದ್ದರು.
ಈ ವರ್ಷದ ಆರಂಭದಲ್ಲಿ ‘ಇಂಡಿಯಾ’ ಮೈತ್ರಿಕೂಟವನ್ನು ತೊರೆದು ಎನ್‌ಡಿಎಗೆ ನಿತೀಶ್ ಮರಳಿದಾಗ ಮತ್ತೊಂದು ಹೇಳಿಕೆ ನೀಡಿದ್ದ ತ್ಯಾಗಿ, “ಏಕರೂಪ ನಾಗರಿಕ ಸಂಹಿತೆಯನ್ನು ತರಾತುರಿಯಲ್ಲಿ ಜಾರಿಗೊಳಿಸದಂತೆ ಬಿಜೆಪಿಗೆ ಜೆಡಿಯು ಸಲಹೆ ನೀಡುತ್ತದೆ” ಎಂದು ಹೇಳಿದ್ದರು.
1996ರಿಂದ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿಯ ಪ್ರಣಾಳಿಕೆಗಳಲ್ಲಿ ಏಕರೂಪ ನಾಗರಿಕ ಸಂಹಿತೆಯ ಭರವಸೆ ಪ್ರಮುಖವಾಗಿದೆ. ಆದರೆ, ಅಂತಹ ಕಾನೂನನ್ನು ಇನ್ನೂ ಅಂಗೀಕರಿಸಲಾಗಿಲ್ಲ. ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಎನ್‌ಡಿಎ ಭಾಗವಾಗಿರುವ ಬಿಜೆಪಿ ಮಿತ್ರಪಕ್ಷಗಳೂ ಕೂಡ ಏಕರೂಪ ನಾಗರಿಕ ಸಂಹಿತೆಯನ್ನು ನಿರಂತರವಾಗಿ ವಿರೋಧಿಸುತ್ತಲೇ ಇವೆ.
ಏಕರೂಪ ನಾಗರಿಕ ಸಂಹಿತೆಯಿಂದ ಜಾತ್ಯತೀತ ನಾಗರಿಕ ಸಂಹಿತೆಯತ್ತ ಸಾಗುವುದು ಜಾತ್ಯತೀತತೆಯ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ ಎಂದು ಬಿಜೆಪಿ ಹೇಳಿಕೊಂಡಿದೆ.
“ಪ್ರಧಾನಿ ಯಾವಾಗಲೂ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಬಗ್ಗೆ ಮಾತನಾಡುತ್ತಾರೆ. ಅವರು ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದಾಗ ಅವರನ್ನು ಅವರ ಧರ್ಮದ ಬಗ್ಗೆ ಕೇಳಲಾಯಿತು. ಅವರು ತಮ್ಮ ಧರ್ಮ ಸಂವಿಧಾನ ಎಂದು ಹೇಳಿದ್ದರು. ಅಂದರೆ ಜಾತ್ಯತೀತತೆಯ ಮೇಲೆ ನಡೆಯುವ ದೇಶದಲ್ಲಿ ಸಂವಿಧಾನವೇ ಸರ್ವಶ್ರೇಷ್ಠ. ಆದ್ದರಿಂದಲೇ ಪ್ರಧಾನಿಯವರು ಯಾವುದೇ ಗೊಂದಲವಿಲ್ಲದೆ, ಏಕರೂಪ ನಾಗಕರಿ ಸಂಹಿತೆಯನ್ನು ಜಾತ್ಯತೀತ ಎಂದು ಬಣ್ಣಿಸಿದ್ದಾರೆ” ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಹೇಳಿದ್ದಾರೆ.
ಎನ್‌ಡಿಎ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಿದ್ಧಿಕಿ, “ಪ್ರಧಾನಿ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮೋದಿ ಯಾವಾಗಲೂ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯನ್ನು ಎತ್ತಿಹಿಡಿದಿದ್ದಾರೆ. ಪ್ರಜಾಪ್ರಭುತ್ವದ ಕೇಂದ್ರವಾಗಿ ಚರ್ಚೆಗಳನ್ನು ನಡೆಸುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಅವರು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ | ಗೋಕಾಕ್ ಮಾದರಿ ಚಳವಳಿಗೆ ಸಜ್ಜಾಗುವ ಕಾಲ ಬಂದಿದೆ
2018ರ ಪತ್ರಿಕೆಯಲ್ಲಿ 21ನೇ ಕಾನೂನು ಆಯೋಗವು ‘ಏಕರೂಪ ನಾಗರಿಕ ಸಂಹಿತೆ’ಯನ್ನು ‘ಅಗತ್ಯವೂ ಅಲ್ಲ -ಅಪೇಕ್ಷಣೀಯವೂ ಅಲ್ಲ’ ಎಂದು ಕರೆದಿತ್ತು. ಬಳಿಕ, ಹೊಸ ಅಭಿಪ್ರಾಯಗಳನ್ನು ಕೋರಿ 22ನೇ ಕಾನೂನು ಆಯೋಗದ ಅಧಿಸೂಚನೆ ಬಂದಿದೆ.
ಏತನ್ಮಧ್ಯೆ, ‘ಜಾತ್ಯತೀತ ನಾಗರಿಕ ಸಂಹಿತೆ’ಗೆ ಕರೆ ನೀಡಿದ್ದ ಮೋದಿ, ಪ್ರಸ್ತುತ ಜಾರಿಯಲ್ಲಿರುವ ನಾಗರಿಕ ಸಂಹಿತೆಯನ್ನು ‘ಕೋಮು ಸಂಹಿತೆ’ ಎಂದು ಕರೆದಿದ್ದು, ಅವರ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.
“ಮೋದಿ ‘ಕೋಮು ಸಂಹಿತೆ’ ಎಂದು ಕರೆಯುತ್ತಿರುವ ಸಂಹಿತೆಯನ್ನು ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಬರೆದಿದ್ದಾರೆ. ಬಾಬಾ ಸಾಹೇಬರು ಬರೆದಿರುವ ಸಂಹಿತೆಯನ್ನು ಯಾರಾದರೂ ಕೆಂಪು ಕೋಟೆಯಲ್ಲಿ ನಿಂತು ಅವಮಾನಿಸಿದರೆ, ನಾವು ಅದನ್ನು ಸಹಿಸುವುದಿಲ್ಲ” ಎಂದು ಕಾಂಗ್ರೆಸ್‌ನ ಪವನ್ ಖೇರಾ ಹೇಳಿದ್ದಾರೆ.
“ಜಾತ್ಯತೀತತೆ ಮತ್ತು ನಾಗರಿಕತೆ ಇಂದಿನ ಅಗತ್ಯವಾಗಿದೆ. ಆದರೆ, ಕಳೆದ 10 ವರ್ಷಗಳಲ್ಲಿ ಬಿಜೆಪಿ ಜಾತ್ಯತೀತವಾಗಿ ನಡೆದುಕೊಂಡಿಲ್ಲ” ಎಂದು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.