“ಬೆಂಗಳೂರಿನಲ್ಲಿ ಕನ್ನಡವನ್ನು, ಕನ್ನಡಿಗರನ್ನು ತಿರಸ್ಕಾರದಿಂದ ನೋಡುತ್ತಿದ್ದವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ಪಷ್ಟ ಸಂದೇಶ ನೀಡಿದೆ. ಕನ್ನಡಿಗರ ತಾಳ್ಮೆಯನ್ನು ಕೆಣಕಿದರೆ ಏನಾಗುತ್ತದೆ ಎಂಬುದಕ್ಕೆ ಇವತ್ತಿನ ಪ್ರತಿಭಟನೆ ಉದಾಹರಣೆ” ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ 60% ಕನ್ನಡಕ್ಕೆ ಸರ್ಕಾರದ ಸೂಚನೆ ಇದ್ದರೂ ನಿರ್ಲಕ್ಷ್ಯ ಮಾಡುತ್ತಿರುವವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಡಿ.27ರಂದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಬೃಹತ್ ಜಾಹೀರಾತು ಫಲಕ ಏರಿ, ಇಂಗ್ಲಿಷ್‍ನಲ್ಲಿದ್ದ ಬೋರ್ಡ್ ಅನ್ನು ಹರಿದು ಹಾಕಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕರವೇ ರಾಜ್ಯಾಧ್ಯಕ್ಷ, “ಇಂದು ಬೆಂಗಳೂರು ಮಹಾನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ನಾಮಫಲಕ ಜಾಗೃತಿ ಆಂದೋಲನ ಅಭೂತಪೂರ್ವ ಯಶಸ್ಸು ಕಂಡಿದೆ. ಇದಕ್ಕಾಗಿ ನನ್ನೆಲ್ಲ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ” ಎಂದು ತಿಳಿಸಿದ್ದಾರೆ.
“ಕರ್ನಾಟಕ ರಕ್ಷಣಾ ವೇದಿಕೆಯ ಸಹಸ್ರಾರು ಕಾರ್ಯಕರ್ತರು ರಾಜ್ಯದ ಮೂಲೆಮೂಲೆಯಿಂದ ಹರಿದು ಬಂದು ಕನ್ನಡಿಗರ ಶಕ್ತಿಯನ್ನು ತೋರಿಸಿದ್ದಾರೆ. ಸಾವಿರಾರು ಕನ್ನಡೇತರ ನಾಮಫಲಕಗಳನ್ನು ಕಿತ್ತುಹಾಕಿದ್ದಾರೆ. ನಮ್ಮ ಪ್ರತಿಭಟನೆ ಶಾಂತಿಯುತವಾಗಿಯೇ ನಡೆದಿದೆ. ಕಾರ್ಯಕರ್ತರ ಗುರಿ ಕೇವಲ ಕನ್ನಡೇತರ ನಾಮಫಲಕಗಳೇ ಆಗಿದ್ದವೇ ವಿನಃ ವ್ಯಕ್ತಿಗಳು, ಸಂಸ್ಥೆಗಳು ಆಗಿರಲಿಲ್ಲ. ಹೀಗಾಗಿ ಯಾವುದೇ ರೀತಿಯ ಹಿಂಸಾತ್ಮಕ ಚಳವಳಿ ನಾವು ನಡೆಸಿರುವುದಿಲ್ಲ” ಎಂದು ನಾರಾಯಣಗೌಡ ತಿಳಿಸಿದ್ದಾರೆ.
Yes, I also support Kannada language should be give priority but this is complete Goondagardi on the streets of Bengaluru.BBMP has given time till 28th Feb ,still KRV created rucks..Today’s vandalism shows failure of govt & also when police is not given freedom this happens.. pic.twitter.com/7pIf0gUZx7
— Yasir Mushtaq (@path2shah) December 27, 2023
“ರಾಜ್ಯ ಸರ್ಕಾರ ಫೆ.28ರೊಳಗೆ ನಾಮಫಲಕಗಳನ್ನು ಕನ್ನಡೀಕರಿಸಲು ಆದೇಶಿಸಿದೆ. ಹೀಗಾಗಿ ನಾವು ಫೆ.28ರವರೆಗೆ ಕಾಯುತ್ತೇವೆ. ಆಗಲೂ ಈ ನೆಲದ ಕಾನೂನಿಗೆ, ಈ ನೆಲದ ಭಾಷೆಗೆ ಗೌರವ ನೀಡದವರ ವಿರುದ್ಧ ನಾವು ಇನ್ನೂ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ಇವತ್ತಿನ ಚಳವಳಿಯ ಸಂದರ್ಭದಲ್ಲಿ ಬೆಂಗಳೂರಿನ ನಾಗರಿಕರಿಗೆ ಆಗಿರಬಹುದಾದ ಸಣ್ಣಪುಟ್ಟ ತೊಂದರೆಗಳಿಗೆ ನಮಗೆ ಬೇಸರವಿದೆ. ಆದರೆ ಬೆಂಗಳೂರಿನಲ್ಲಿ ಕನ್ನಡವನ್ನು, ಕನ್ನಡಿಗರನ್ನು ಉಳಿಸಿಕೊಳ್ಳಲು ಇಂಥ ದೊಡ್ಡ ಪ್ರಮಾಣದ ಚಳವಳಿ ಅಗತ್ಯವಿತ್ತು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ” ಎಂದು ತಿಳಿಸಿದ್ದಾರೆ.
“ಪೊಲೀಸ್ ಇಲಾಖೆ ಇವತ್ತಿನ ಹೋರಾಟದ ಹಿನ್ನೆಲೆಯಲ್ಲಿ ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆ ಹೂಡುವುದು, ಕಿರುಕುಳ ನೀಡುವುದನ್ನು ಮಾಡಕೂಡದು. ಅಂಥದ್ದೇನಾದರೂ ನಡೆದರೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ. ಕನ್ನಡ ನಾಮಫಲಕ ಜಾಗೃತಿ ಆಂದೋಲನವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಸ್ತರಿಸಲು ನಿರ್ಧರಿಸಿದ್ದು, ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಿಗೆ ದೊಡ್ಡ ಮಟ್ಟದ ‘ಕನ್ನಡ ಯಾತ್ರೆ’ಯನ್ನು ನಡೆಸಲಿದ್ದೇನೆ. ರಾಜ್ಯದ ಪ್ರತಿಯೊಂದು ನಾಮಫಲಕವೂ ಕನ್ನಡೀಕರಣಗೊಳ್ಳುವವರೆಗೆ ನಮ್ಮ ಆಂದೋಲನ ಮುಂದುವರೆಯಲಿದೆ” ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.