ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭ ಇಡೀ ದೇಶಾದ್ಯಂತ ಸುದ್ದಿಯಾಗಿದ್ದ ಹಿಜಾಬ್ ನಿಷೇಧ ವಿಚಾರದ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆ” ಎಂದು ಹೇಳಿಕೆ ನೀಡಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಕವಲಂದೆ, ಅಂತರಸಂತೆ, ಜಯಪುರ ಪೊಲೀಸ್ ಠಾಣೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ವೇಳೆ ಅವರು ಈ ಮಹತ್ವದ ಹೇಳಿಕೆ ನೀಡಿದ್ದಾರೆ.
‘ಬಟ್ಟೆ ಹಾಕೋದು, ಊಟ ಮಾಡೋದು, ಅವರವರಿಗೆ ಬಿಟ್ಟ ವಿಚಾರ. ಅದನ್ನು ನಾನ್ಯಾಕೆ ಅಡ್ಡಿಪಡಿಸಲಿ. ನಾನು ಧೋತಿ ಮತ್ತು ಜುಬ್ಬಾ ಹಾಕಿಕೊಳ್ಳುತ್ತೇನೆ. ಅದು ನನ್ನ ಇಷ್ಟ. ಇನ್ನೊಬ್ಬ ಪ್ಯಾಂಟು-ಶರ್ಟ್ ಹಾಕಿಕೊಳ್ಳುತ್ತಾನೆ. ಅದು ಅವನ ಇಷ್ಟ. ಅದರಲ್ಲಿ ತಪ್ಪೇನಿದೆ? ಹಿಜಾಬ್ ನಿಷೇಧದ ಆದೇಶ ವಾಪಸ್ ತಗೊಳ್ಳಿ ಎಂದು ತಿಳಿಸಿದ್ದೇನೆ. ನಮ್ಮ ಸರ್ಕಾರವು ಎಲ್ಲ ಬಡವರು, ಅಲ್ಪಸಂಖ್ಯಾತರು, ದಲಿತರಿಗೆ ನ್ಯಾಯ ನೀಡಲು ಶ್ರಮಿಸುತ್ತಿದೆ. ಇದರಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.
“ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಕೇವಲ ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಜಾಬ್ ನಿಷೇಧವನ್ನು ವಾಪಾಸ್ ಪಡೆಯಲು ಹೇಳಿದ್ದೇನೆ” ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬಿಜೆಪಿಯವರು ಗ್ಯಾರಂಟಿ ಯೋಜನೆಗಳ ಲಾಭ ಪಡೀತಿಲ್ವಾ?
ನಾವು ಎಲ್ಲ ಜಾತಿ, ಎಲ್ಲ ಧರ್ಮದವರಿಗೆ ಮಾತ್ರವಲ್ಲ ಎಲ್ಲ ಪಕ್ಷದವರಿಗೂ ಅನುಕೂಲ ಆಗುವ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಬಿಜೆಪಿಯವರು 10 ಕೆಜಿ ಅಕ್ಕಿ ಪಡೆಯುತ್ತಿಲ್ಲವಾ? ಬಿಜೆಪಿಯವರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿಲ್ಲವೇ? ಬಿಜೆಪಿಯವರು ಗೃಹಜ್ಯೋತಿ, ಗೃಹಲಕ್ಷ್ಮಿಯ ಹಣ ಪಡೆಯುತ್ತಿಲ್ಲವೇ ? ನಮ್ಮ ಗ್ಯಾರಂಟಿ ಸ್ಕೀಂಗಳ ಲಾಭ ಪಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, “ಸುಳ್ಳು ಹೇಳುವವರ, ನಮ್ಮ ಸರ್ಕಾರದ ಲಾಭ ಪಡೆದೂ ನಕ್ರಾ ಆಡುವವರ ಜತೆ ಹೋಗಬೇಡಿ. ನಿಮ್ಮ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಸದಾ ಇರಲಿ” ಎಂದು ವಿನಂತಿಸಿದರು.