ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವರ ಭಾವಚಿತ್ರಗಳು ಹಾಕಲಾಗುತ್ತಿದೆ. ಅವರೆಲ್ಲರ ಭಾವಚಿತ್ರ ಮತ್ತು ಹೆಸರುಗಳನ್ನು ಹಾಕದಂತೆ ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಳಗಾವಿಯ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಗ್ಯಾರಂಟಿ ಯೋಜನೆಗಳ ಜಾಹೀರಾತಿನಲ್ಲಿ ಮುಖ್ಯಮಂತ್ರಿ,ಉಪಮುಖ್ಯಮಂತ್ರಿಗಳ ಫೋಟೋ-ಭಾವಚಿತ್ರ ಹಾಕದಂತೆ ನಿರ್ಬಂಧ ಹೇರಬೇಕು ಎಂದು ಪಿಐಎಲ್ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಸ್ ಉಮಾಪತಿ, “ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರಿ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ, ಮಂತ್ರಿಗಳ ಭಾವಚಿತ್ರ ಬಳಸುವಂತಿಲ್ಲ. ಅಧಿಕಾರದಲ್ಲಿರುವವರು ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾವಚಿತ್ರ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಾದ ಆಲಿಸಿದ ಹೈಕೋರ್ಟ್, “ಸರ್ಕಾರಿ ಜಾಹೀರಾತುಗಳಲ್ಲಿ ಸರ್ಕಾರ ನಡೆಸುವವರು ಭಾವಚಿತ್ರ ಹಾಕಿಕೊಳ್ಳುವುದರಲ್ಲಿ ತಪ್ಪೇನಿದೆ? ಜನರಿಗೆ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದವರು ತಾವು ಯಾವ-ಯಾವ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂಬ ಕುರಿತು ಮತದಾರರಿಗೆ ಮಾಹಿತಿ ನೀಡುತ್ತಾರೆ. ಒಂದು ವೇಳೆ ಇದಕ್ಕೆ ನಿಮ್ಮ ಆಕ್ಷೇಪ ಇದ್ದರೆ, ಚುನಾವಣೆಯಲ್ಲಿ ಅಂಥವರನ್ನು ಆಯ್ಕೆ ಮಾಡದಿದ್ದರೆ ಆಯಿತು” ಎಂದು ಹೇಳಿದೆ. ಅರ್ಜಿಯನ್ನು ವಜಾಗೊಳಿಸಿದೆ.