ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ನೀಡಿದ್ದು, ಇಬ್ಬರೂ ಮಂಗಳವಾರ ದೆಹಲಿಗೆ ತೆರಳಿದ್ದಾರೆ. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಾಗುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಅಂತಹ ಬದಲಾವಣೆಗಳನ್ನು ಪಕ್ಷದ ಮುಖಂಡರು ಅಲ್ಲಗಳೆದಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿ/ಎಸ್‌ಟಿ ಸಮುದಾಯಕ್ಕಾಗಿ ಮೀಸಲಿಟ್ಟ ಹಣ ಬಳಕೆ, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳನ್ನು ಕಾಂಗ್ರೆಸ್ ಉನ್ನತ ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಲಾಗಿದೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ನಿವೇಶನ ಹಂಚಿಕೆಯಾಗಿರುವ ಸಂಬಂಧ ಬಿಜೆಪಿ-ಜೆಡಿಎಸ್ ಭಾರೀ ಗದ್ದಲು ಸೃಷ್ಟಿಸಿದೆ. ಅದಾಗ್ಯೂ, ತಮ್ಮ ವಿರುದ್ಧದ ಆರೋಪವನ್ನು ಸಿದ್ದರಾಮಯ್ಯ ಅಲ್ಲಗಳೆದಿದ್ದಾರೆ. ಮುಡಾ ಮಂಜೂರು ಮಾಡಿದ ಭೂಮಿಯಲ್ಲಿನ ಅಕ್ರಮಗಳ ಆರೋಪಗಳನ್ನು ತನಿಖೆ ಮಾಡಲು ಏಕಸದಸ್ಯ ತನಿಖಾ ಆಯೋಗವನ್ನು ಸಹ ರಚಿಸಿದ್ದಾರೆ.
ಆಪಾದಿತ ಹಗರಣಗಳು ರಾಜ್ಯದ ಮುಂಗಾರು ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಭಾರೀ ಕಲಹ ಉಂಟು ಮಾಡಿದ್ದವು. ಜನರ ವಿಚಾರಗಳು ಚರ್ಚೆಯಾಗದೆ, ಸದನ ಮುಗಿಯಿತು. ಇದೀಗ, ಬಿಜೆಪಿ-ಜೆಡಿಎಸ್ ಒಗ್ಗೂಡಿ ಆಗಸ್ಟ್ 3 ರಿಂದ 10 ರವರೆಗೆ ಬೆಂಗಳೂರಿನಿಂದ ಮೈಸೂರಿನವರೆಗೆ ಒಂದು ವಾರದ ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ಆದರೆ, ಪಾದಯಾತ್ರೆಗೆ ಕಾಂಗ್ರೆಸ್ ಸರ್ಕಾರ ಅನುಮತಿ ನಿರಾಕರಿಸಿದೆ.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಹಿಂದ ನಾಯಕ ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದನ್ನು ಸಹಿಸುತ್ತಿಲ್ಲ. ಹೀಗಾಗಿ, ಅವರನ್ನು ಬದಲಿಸಲು ಇಲ್ಲದ ತಂತ್ರಗಳನ್ನು ಎಣೆಯಾಗುತ್ತಿದೆ. ಆದರೆ, ಅಂತಹ ಯಾವುದೇ ಬದಲಾವಣೆಗಳು ಸಾಧ್ಯವಿfಲಲ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ನೇರವಾಗಿ ಮಾಹಿತಿ ಪಡೆಯಲು ಪಕ್ಷದ ನಾಯಕರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡಿರಬಹುದು. ರಾಜ್ಯ ನಾಯಕತ್ವದಲ್ಲಿನ ಬದಲಾವಣೆ ಬಗ್ಗೆ ಯಾವುದೇ ಮಾತುಕತೆ ಇಲ್ಲ ಎಂದು ಪಕ್ಷದ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.