- ‘ಬಿಜೆಪಿ ಜೊತೆ ವಿಲೀನವಾಗಲಿ ಅಥವಾ ಮೈತ್ರಿಯಾಗಲಿ ಮಾಡಿಕೊಳ್ಳುವುದಿಲ್ಲ’
- ‘ಮಣಿಪುರ ಬೆಂಕಿಯಲ್ಲಿ ಸುಡುತ್ತಿದ್ದರೂ ಬಿಜೆಪಿ ಇಲ್ಲಿ ಕ್ಯಾಮೆರಾ ಎನ್ನುತ್ತಿದೆ’
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಉರುಳಿಸಲು ಸಿಂಗಾಪುರದಲ್ಲಿ ತಯಾರಿ ನಡೆಯುತ್ತಿದೆ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ‘ಅದೆಲ್ಲ ಕಾಂಗ್ರೆಸ್‌ನವರ ಊಹೆ’ ಎಂದು ಕುಮಾರಸ್ವಾಮಿ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ ಇಬ್ರಾಹಿಂ, “ಸರ್ಕಾರ ಉರುಳಿಸಲು ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿಂಗಾಪುರದಲ್ಲಿ ತಯಾರಿ ನಡೆಸಿದ್ದಾರೆ ಎಂಬುದು ಕಾಂಗ್ರೆಸ್ ಅವರ ಊಹೆ. ಕುಮಾರಸ್ವಾಮಿಯವರು ಕುಟುಂಬದ ಜೊತೆಗೆ ಸಿಂಗಾಪೂರಕ್ಕೆ ತೆರಳಿದ್ದಾರೆ. ಕಾಂಗ್ರೆಸ್‌ನವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ” ಎಂದು ಸ್ಪಷ್ಟನೆ ನೀಡಿದರು.
“ಕಾಂಗ್ರೆಸ್‌ನವರಿಗೆ ಸರ್ಕಾರ ನಡೆಸಲು ಆಗುತ್ತಿಲ್ಲ. ಅದಕ್ಕೆ ಹೀಗೆ ಜೆಡಿಎಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾದರೆ, ಅತ್ತೆ-ಸೊಸೆ ನಡುವೆ ಜಗಳ ಶುರುವಾಗಲಿದೆ. ಕರೆಂಟ್ ಬಿಲ್ 200 ಯೂನಿಟ್ ಫ್ರೀ ಎಂದು ಹೇಳಿ ಡಬಲ್ ರೇಟ್ ಮಾಡಿದ್ದಾರೆ. ಹೀಗಾದರೆ ಜನ ಬೀದಿಗೆ ಬರುತ್ತಾರೆ” ಎಂದರು.
“ಕುಮಾರಸ್ವಾಮಿ ಬಿಜೆಪಿ ಪತ್ರದಲ್ಲಿ ಸಹಿ ಹಾಕಿದ ವಿಚಾರಕ್ಕೆ ಕಾಂಗ್ರೆಸ್ ಟೀಕಿಸಿದೆ. ಶಾಸಕರಾಗಿ ಪರಸ್ಪರವಾಗಿ ವಿಪಕ್ಷವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ನವರು ಆಫೀಸ್ ಗೆ ಬಂದಿದ್ದರು. ಅವರು ಮಾಡಿದರೆ ತಪ್ಪಲ್ಲ. ಜನತಾದಳ ಮಣ್ಣಿನ ಪಕ್ಷ, ರೈತರ ಪಾರ್ಟಿ ಏನಾದರೂ ಮಾಡಿದರೆ ಟೀಕಿಸುತ್ತೀರಿ. ಮಮತಾ ಹಾಗೂ ನಿತೀಶ್ ಇಬ್ಬರೂ ಬಿಜೆಪಿ ಜೊತೆಗೆ ಹೋಗಿ ಬಂದವರೇ ಆಗಿದ್ದಾರೆ. ನಿಮ್ಮದು ಬಿಳಿ ಬಟ್ಟೆ, ಹಳೇ ಪಾರ್ಟಿ” ಎಂದು ವ್ಯಂಗ್ಯವಾಡಿದರು.
‘ಬಿಜೆಪಿ ಜೊತೆಗೆ ಮೈತ್ರಿ ಅಥವಾ ವಿಲೀನ ಇಲ್ಲ‘
“ಬಿಜೆಪಿ ಜೊತೆ ವಿಲೀನವಾಗಲಿ ಅಥವಾ ಮೈತ್ರಿ ಆಗಲಿ ಮಾಡಿಕೊಳ್ಳುವುದಿಲ್ಲ. ನಾವು ಯಾರ ಜೊತೆಗೂ ಇಲ್ಲ ಎಂದು ದೇವೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆ. ಇಷ್ಟು ದೊಡ್ಡ ಪಕ್ಷವಾಗಿ ಬಿಜೆಪಿಗೆ ವಿಪಕ್ಷ ನಾಯಕರ ಆಯ್ಕೆ ಮಾಡಲು ಆಗಿಲ್ಲ. ಆದರೂ ಇನ್ನೂ ನಮಗೆ ಬುದ್ದಿ ಹೇಳುತ್ತಾರೆ ಎಂದು ಕುಟುಕಿದರು.
“ಬಿಜೆಪಿಗರಿಗೆ ವೋಟ್ ಬ್ಯಾಂಕ್ ಮಧ್ಯದಲ್ಲಿ ಶಿಕಾರಿ ನಾವು. ಇಬ್ಬರೂ ನಮ್ಮನ್ನು ತೋರಿಸಿ ವೋಟು ಮಾಡಿದ್ರು. ಭಯೋತ್ಪಾದನೆ ಶುರುವಾಗುತ್ತಿದೆ ಎನ್ನುವುದೇ ಇವರಿಗೆ ಲೋಕಸಭಾ ಚುನಾವಣೆ ವಿಷಯವಾಗಿದೆ. ಮಣಿಪುರ ಬೆಂಕಿಯಲ್ಲಿ ಸುಡುತ್ತಿದ್ದರೂ ಅದರ ಬಗ್ಗೆ ಮಾತನಾಡುತ್ತಿಲ್ಲ. ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಆಗಿದೆ. ಇಲ್ಲಿ ಕ್ಯಾಮೆರಾ ಎನ್ನುತ್ತಿದ್ದೀರಾ?” ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾತಿಯಲ್ಲಿದೆ: ಮಾಜಿ ಸಚಿವ ಬಿ.ಸಿ ನಾಗೇಶ್
ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಪ್ರಕರಣದ ಬಗ್ಗೆ ತನ್ವೀರ್ ಸೇಠ್ ಪತ್ರದ ವಿಚಾರವಾಗಿ ಮಾತನಾಡಿ, “ನ್ಯಾಯಾಂಗ ತನಿಖೆ ಆಗಬೇಕು. ಇದು ಮತೀಯ ಗಲಭೆಯಲ್ಲ ಎಂದು ವರದಿ ಬಂದಿತ್ತು. ಎರಡು ತಂಡಗಳು ಡ್ರಗ್ಸ್ ಮಾಫಿಯಾ ನಡೆಸುತ್ತಿತ್ತು. ಡ್ರಗ್ಸ್ ಮಾರಾಟ ಮಾಡಲು ಆಗದವರು ಆ ದಿನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ” ಎಂದು ಹೇಳಿದರು.
“ಪ್ರಕರಣವನ್ನು ಅಂದಿನ ಬಿಜೆಪಿ ಸರ್ಕಾರ ಎನ್‍ಐಎ ತನಿಖೆಗೆ ವಹಿಸಿದ್ದರು. ಯಾಕೆ ಅದನ್ನು ಎನ್‍ಐಎ ತನಿಖೆಗೆ ಕೊಟ್ಟಿದ್ದು? ಅಲ್ಲೇನಾದರೂ ಕೊಲೆ ನಡೆದಿತ್ತಾ? ಹುಬ್ಬಳ್ಳಿ ವಿಚಾರವನ್ನು ಸಹ ಎನ್‍ಐಎಗೆ ವಹಿಸಿದ್ದೀರಿ. ಹುಬ್ಬಳ್ಳಿಯಲ್ಲಿ ಎಸ್‍ಪಿಗೆ ಧಿಕ್ಕಾರ ಕೂಗಿದರೆ ಕೇಸ್ ಹಾಕಲಾಗಿದೆ. ಗೃಹ ಸಚಿವರು ಇದನ್ನು ನ್ಯಾಯಾಂಗ ತನಿಖೆ ಮಾಡಿಸಲಿ. ತಪ್ಪು ಎಂದು ಗೊತ್ತಾದರೆ ಗಲ್ಲಿಗೆ ಹಾಕಲಿ. ಈಗ ಅಮಾಯಕರನ್ನು ಒಳಗೆ ಹಾಕಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.