ರಾಜ್ಯ ಕಾಂಗ್ರೆಸ್‌ನ ವಿವಿಧ ನಾಯಕರು ವರಿಷ್ಠರೊಂದಿಗೆ ಚರ್ಚೆ ಮಾಡುವುದು ಸಹಜ. ಮುಖ್ಯಮಂತ್ರಿ ಬದಲಾವಣೆ ಎಂಬುದು ಊಹಾಪೋಹವಷ್ಟೇ. ವಿರೋಧಪಕ್ಷಗಳು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ರಾಜೀನಾಮೆ ಬೇಡಿದರೆ, ರಾಜೀನಾಮೆ ಕೊಡಲು ಸಾಧ್ಯವಿಲ್ಲ. ಅವರು ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ವಸ್ತುಸ್ಥಿತಿಯನ್ನು ಜನರ ಮುಂದಿಡುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿ.ಟಿ ದೇವೇಗೌಡರು ತಮ್ಮ ಪರವಾಗಿ ಮಾತನಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅವರು ಜೆಡಿಎಸ್ ಪಕ್ಷದ ಕೋರ್ ಕಮಿಟಿಯ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಮುಡಾದ ಸದಸ್ಯರೂ ಆಗಿದ್ದಾರೆ. ಅವರು ಸತ್ಯ ಹೇಳಿರುವುದರಲ್ಲಿ ತಪ್ಪಿಲ್ಲ. ಈ ಪ್ರಕರಣದ ವಿರುದ್ದ, ವಿರೋಧ ಪಕ್ಷದವರ ಪಾದಯಾತ್ರೆಯನ್ನು ನಡೆಸುವುದು ಬೇಡ ಎಂದವರಲ್ಲಿ ಜಿ.ಟಿ ದೇವೇಗೌಡರು ಒಬ್ಬರು” ಎಂದಿದ್ದಾರೆ.
ಜಾತಿಗಣತಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, “ಜಾತಿಗಣತಿ ವರದಿಯನ್ನು ಈಗಾಗಲೇ ಸ್ವೀಕರಿಸಲಾಗಿದೆ. ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಆದೇಶವಾಗಿದೆ. ಒಳ ಮೀಸಲಾತಿ ಬಗ್ಗೆ ಸರ್ಕಾರಕ್ಕೆ ವಿರೋಧವಿಲ್ಲ. ಜಾತಿಗಣತಿ ಮತ್ತು ಒಳಮೀಸಲಾತಿ ಜಾರಿಯ ಬಗ್ಗೆ ವರಿಷ್ಠರೊಂದಿಗೆ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು” ಎಂದು ಹೇಳಿದ್ದಾರೆ.
“ತುಂಗಭದ್ರಾ ಜಲಾಶಯ ಹಾಗೂ ನವಲೆ ಜಲಾಶಯದ ಬಗ್ಗೆ ಶಾಶ್ವತ ಪರಿಹಾರ ಒದಗಿಸುವ ಕುರಿತು ಪತ್ರಕರ್ತರ ಪ್ರಶ್ನೆಗೆ ಬಗ್ಗೆ ಉತ್ತರಿಸಿ, ಜಲಾಶಯದಲ್ಲಿ 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಪ್ರಸ್ತುತ 102 ಟಿಎಂಸಿ ನೀರು ಸಂಗ್ರಹವಿದೆ. ಸುಮಾರು 30 ಟಿಎಂಸಿ ನೀರಿಗೆ ಆಗುವಷ್ಟು ಹೂಳು ತುಂಬಿರುವುದರಿಂದ ಕೆಳಭಾಗದ ರೈತರಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. 19 ನೇ ಗೇಟ್ ದುರಸ್ತಿಯನ್ನು ಐದು ದಿನಗಳೊಳಗೆ ದುರಸ್ತಿ ಮಾಡಿ ಬಾಗಿನ ಅರ್ಪಿಸಲಾಗಿದೆ. ಸರ್ಕಾರ ಕೆಳಭಾಗದ ರೈತರಿಗೆ ನೀರು ಒದಗಿಸಲು ಅನುಕೂಲವಾಗುವಂತಹ ಕ್ರಮವನ್ನು ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.