ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ(ಜುಲೈ 2) ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಬೆಂಗಳೂರು ಕಂದಾಯ ವಿಭಾಗದ ವಿಶೇಷ ಸಚಿವ ಸಂಪುಟ ಸಭೆ ನಡೆದಿದೆ. ಈ ಸಭೆಯಲ್ಲಿ ‘ದೇವನಹಳ್ಳಿ ಭೂಸ್ವಾಧೀನ’ ವಿಚಾರ ಪ್ರಸ್ತಾಪವಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈ ವಿಚಾರದ ಪ್ರಸ್ತಾಪವೇ ಮಾಡಿಲ್ಲ. ಬಳಿಕ ಪತ್ರಿಕಾಗೋಷ್ಠಿಯಲ್ಲಾದರೂ ದೇವನಹಳ್ಳಿ ವಿಚಾರ ಎತ್ತಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ.
ದೇವನಹಳ್ಳಿ ರೈತರ ಭೂಮಿ ಸ್ವಾಧೀನ ಕೈಬಿಡುವಂತೆ ಒತ್ತಾಯಿಸಿ ಜುಲೈ 4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ‘ನಾಡ ಉಳಿಸಿ ಸಮಾವೇಶ’ ನಡೆಯಲಿದೆ. ಈಗಾಗಲೇ ರೈತರ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳುವುದನ್ನು ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ‘ಭೂಮಿ ಸತ್ಯಾಗ್ರಹ’ ನಡೆಯುತ್ತಿದೆ. ಹೋರಾಟಗಾರರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ನಂದಿಬೆಟ್ಟದ ಸಂಪುಟ ಸಭೆಯಲ್ಲಿ ಚರ್ಚೆಗೆ ಬಾರದ ‘ದೇವನಹಳ್ಳಿ ಭೂಸ್ವಾಧೀನ’ ವಿಚಾರ
ಇವೆಲ್ಲವುದರ ನಡುವೆ ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಕೆಐಎಡಿಬಿ ಭೂಸ್ವಾಧೀನ ಕೈಬಿಡುವ ನಿರ್ಧಾರ ಪ್ರಕಟಿಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈ ನಿರ್ಧಾರ ಪ್ರಕಟಿಸುವುದು ಬಿಟ್ಟು ಈ ವಿಚಾರವೇ ಪ್ರಸ್ತಾಪಿಸಿಲ್ಲ. ಅದಾದ ಬಳಿಕ ಪತ್ರಿಕಾಗೋಷ್ಠಿಯಲ್ಲಾದರೂ ಪ್ರಸ್ತಾಪಿಸಬಹುದು ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ.
ಆದರೆ ಈ ಹಿಂದೆ ಸಿಎಂ ಚನ್ನರಾಯಪಟ್ಟಣದ ಹೋಬಳಿಯ 13 ಹಳ್ಳಿಗಳ ರೈತರು ಹಾಗೂ ಸಂಯುಕ್ತ ಹೋರಾಟ-ಕರ್ನಾಟಕ ಮುಖಂಡರ ಜೊತೆಗೆ ಜುಲೈ 4ರಂದು ಸಮಗ್ರ ಸಭೆ ನಡೆಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದ್ದಾರೆ.
ಸದ್ಯ ದೇವನಹಳ್ಳಿಯಲ್ಲಿ ರೈತರು ಉಪವಾಸ ಕುಳಿತ್ತಿದ್ದು, ಇನ್ನೊಂದೆಡೆ ಫ್ರೀಡಂ ಪಾರ್ಕಿನಲ್ಲಿ ಹೋರಾಟಗಾರರು, ಪ್ರಗತಿಪರ ಚಿಂತಕರು, ಚಿತ್ರನಟರು, ನಿರ್ದೇಶಕರು, ಸಾಹಿತಿಗಳು, ಬರಹಗಾರರು ಉಪವಾಸ ಕುಳಿತಿದ್ದಾರೆ.
