ಪ್ರವಾಹ ಹಾಗೂ ಭೂ ಕುಸಿತದಿಂದ ತತ್ತರಿಸಿರುವ ಹಿಮಾಚಲ ಪ್ರದೇಶಕ್ಕೆ ಕರ್ನಾಟಕ ಆರ್ಥಿಕ ನೆರವು ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ 15 ಕೋಟಿ ರೂಪಾಯಿಯನ್ನು ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ‘ಸಂಕಷ್ಟದ ಸಮಯದಲ್ಲಿ ನಮ್ಮ ಸಹೋದರ ಸಹೋದರಿಯರೊಂದಿಗೆ ನಿಲ್ಲುವುದು ಮುಖ್ಯವಾಗಿದೆ. ಕರ್ನಾಟಕದ ಜನರು ಹಿಮಾಚಲ ಪ್ರದೇಶದ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ’ ಎಂದು ಹೇಳಿದ್ದಾರೆ.
ಪ್ರಾಕೃತಿಕ ವಿಕೋಪದ ಹಿನ್ನೆಲೆ ರಸ್ತೆ ಮತ್ತು ಸೇತುವೆಗಳ ದುರಸ್ತಿಗಾಗಿ ಕೇಂದ್ರ ಸರ್ಕಾರವು ಹಿಮಾಚಲ ಪ್ರದೇಶಕ್ಕೆ ಸುಮಾರು 2700 ಕೋಟಿ ರೂಪಾಯಿಗಳ ನೆರವನ್ನು ಘೋಷಿಸಿತ್ತು.
ಛತ್ತೀಸ್‌ಘಢ ಸರ್ಕಾರ ಕೂಡ ಹಿಮಾಚಲ ಪ್ರದೇಶಕ್ಕೆ ನೆರವು ನೀಡಿದ್ದು, ವಿಪತ್ತು ಸಂತ್ರಸ್ತರ ಪರಿಹಾರ ಮತ್ತು ಪುನವರ್ಸತಿಗಾಗಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು 11 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ. ಅದೇ ರೀತಿ ರಾಜಸ್ಥಾನ ಸರ್ಕಾರ ಕೂಡಾ 15 ಕೋಟಿ ರೂ. ಆರ್ಥಿಕ ನೆರವನ್ನು ಹಿಮಾಚಲ ಪ್ರದೇಶಕ್ಕೆ ನೀಡಿದೆ.
ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆ ವಿಪರೀತ ಅನಾಹುತ ಉಂಟು ಮಾಡಿದೆ. ಧಾರಾಕಾರ ಮಳೆ, ಭೂಕುಸಿತ ಎಲ್ಲೆಡೆ ಅವಾಂತರ ಸೃಷ್ಟಿಸಿದೆ.
ಶಿಮ್ಲಾದಿಂದ ಧರ್ಮಶಾಲಾ, ಸೋಲನ್, ಕುಲು, ಬಿಲಾಸ್‌ಪುರ್‌ಗೆ ವ್ಯಾಪಕ ಹಾನಿಯಾಗಿದೆ. ರಸ್ತೆಗಳು, ಮನೆಗಳು, ವ್ಯಾಪಾರ ಸಂಸ್ಥೆಗಳು ಇತ್ಯಾದಿಗಳು ಹಾನಿಗೊಳಗಾಗಿವೆ. ದೂರದ ಗುಡ್ಡಗಾಡು ಪ್ರದೇಶಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.