- ‘ಬಿಜೆಪಿ ಹಗರಣ ತನಿಖೆ ಮಾಡಿಸುವುದಾಗಿ ಚುನಾವಣೆ ಪೂರ್ವದಲ್ಲೇ ಹೇಳಿದ್ದೆವು’
- ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಸರ್ಕಾರದ ತಪ್ಪುಗಳ ಬಗ್ಗೆ ಬಿಜೆಪಿಗೆ ಚಾರ್ಜ್ ಶೀಟ್ ತರಲು ಆ ಪಕ್ಷಕ್ಕೆ ನೈತಿಕ ಹಕ್ಕಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ತನಿಖೆ ಆರಂಭವಾಗುತ್ತಿವೆ. ತನಿಖೆ ಕೈಗೊಂಡಿರುವ ಬಗ್ಗೆ ಮೊದಲು ಉತ್ತರಿಸಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸರ್ಕಾರದ 100 ದಿನಗಳ ತಪ್ಪುಗಳನ್ನು ಚಾರ್ಜ್ ಶೀಟ್ ಮಾದರಿಯಲ್ಲಿ ಹೊರತರುವುದಾಗಿ ಬಿಜೆಪಿ ಹೇಳಿರುವ ಬಗ್ಗೆ ಮಂಗಳವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದರು.
ಬಿಜೆಪಿಯವರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, “ಈ ಬಗ್ಗೆ ನಾವು ಮೊದಲೇ ಹೇಳಿದ್ದೆವು. ಅಧಿಕಾರಕ್ಕೆ ಬರುವ ಮುನ್ನವೇ ಅವರ ಎಲ್ಲ ಹಗರಣಗಳ ಬಗ್ಗೆ ತನಿಖೆ ಮಾಡಿಸುವುದಾಗಿ ಹೇಳಿದ್ದೆವು” ಎಂದರು.
“ಪಿಎಸ್ಐ ಹಗರಣವನ್ನು ನಿವೃತ್ತ ನ್ಯಾ. ಬಿ ವೀರಪ್ಪ ಅವರು, 40% ಹಗರಣವನ್ನು ನಿವೃತ್ತ ನ್ಯಾ. ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗ ತನಿಖೆ ಮಾಡಲಿದೆ, ಕೋವಿಡ್ ಕಾಲದ ಹಗರಣವನ್ನು ನಿವೃತ್ತ ನ್ಯಾ. ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ತನಿಖೆ ನಡೆಯುತ್ತಿದೆ. ಇದರಲ್ಲಿ ದ್ವೇಷ ಎಲ್ಲಿದೆ? ರಾಜ್ಯದ ಜನರ ಹಿತಾಸಕ್ತಿ ಇದರಲ್ಲಿದೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೇ ಈ ಎಲ್ಲದರ ಬಗ್ಗೆ ತನಿಖೆ ಮಾಡಿಸಿ ಎಂದು ನಾವು ಒತ್ತಾಯ ಮಾಡಿದ್ದೆವು” ಎಂದು ಸಮರ್ಥಿಸಿಕೊಂಡರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ನೂರು, ಸಮಸ್ಯೆ ನೂರಾರು
ದ್ವೇಷದ ರಾಜಕಾರಣ ಮಾಡುತ್ತಿಲ್ಲ
“ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಅವರು ಅಧಿಕಾರದಲ್ಲಿದ್ದಾಗ 40 ಪರ್ಸೆಂಟ್ ಗೆ ಒತ್ತಾಯ ಮಾಡಿರಲಿಲ್ಲವೇ? ತನಿಖೆಗೆ ನಾವು ಆಗಲೇ ಒತ್ತಾಯ ಮಾಡಿದ್ದೆವು. ಅಧಿಕಾರಕ್ಕೆ ಬಂದ ನಂತರ ತನಿಖೆಗೆ ಕ್ರಮ ಕೈಗೊಂಡಿದ್ದೇವೆ. ಹಾಗಾದರೆ ಜನರ ದುಡ್ಡನ್ನು ತಿಂದುಕೊಂಡು ಹೋಗಿ ಎಂದು ಬಿಡಬೇಕಿತ್ತೆ” ಎಂದು ಪ್ರಶ್ನಿಸಿದರು.
ಸಿಎಂ, ಡಿಸಿಎಂ ಸಂಬಂಧ ಉತ್ತಮ
ವಿರೋಧ ಪಕ್ಷಗಳು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸಂಬಂಧದ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಹೇಳಿದಷ್ಟೂ ನಮ್ಮ ಸಂಬಂಧ ಉತ್ತಮಗೊಳ್ಳುತ್ತಿದೆ ಎಂದು ತಿಳಿ ಹೇಳಿ ಅವರಿಗೆ (ಬಿಜೆಪಿ) ಎಂದರು.