ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯನವರು ಮಾತನಾಡಿರುವ ವಿಡಿಯೋ ದಾಖಲೆ ಇಟ್ಟುಕೊಂಡು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾಡಿರುವ ‘ಹಣಕ್ಕಾಗಿ ವರ್ಗಾವಣೆ ದಂಧೆ’ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ್ದ ಬಳಿಕ ಸಿಎಂ ಸಿದ್ದರಾಮಯ್ಯ, ಯತೀಂದ್ರ ಸಂಭಾಷಣೆಯ ದಾಖಲೆಯನ್ನು ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆಗೊಳಿಸಿದ್ದಾರೆ.
ತಮ್ಮ ಪುತ್ರ ಯತೀಂದ್ರ ಮಾತನಾಡಿದ್ದು ಶಾಲಾ ಕಟ್ಟಡಗಳನ್ನು ಸಿಎಸ್ಆರ್ ನಿಧಿಯಿಂದ ನಿರ್ಮಿಸಲಾಗುತ್ತಿರುವ ವಿಚಾರದ ಬಗ್ಗೆ ಎಂಬುದನ್ನು ಸ್ಪಷ್ಟಪಡಿಸಿದ ಬಳಿಕ ದಾಖಲೆಯನ್ನೂ ಕೂಡ ಬಿಡುಗಡೆಗೊಳಿಸಿದ್ದಲ್ಲದೇ, ಸುದೀರ್ಘವಾದ ಪೋಸ್ಟ್ ಅನ್ನು ಕೂಡ ಹಂಚಿಕೊಂಡು, ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ, ‘ತಾ ಕಳ್ಳ, ಪರರ ನಂಬ’ ಎಂಬ ಗಾದೆ ಮಾತನ್ನು ಒಬ್ಬ ಮಾಜಿ ಮುಖ್ಯಮಂತ್ರಿ ಬಗ್ಗೆ ಬಳಸಬೇಕಾಗಿ ಬಂದದ್ದಕ್ಕೆ ನನಗೆ ವಿಷಾದ ಇದೆ. ಡಾ.ಯತೀಂದ್ರ ಅವರ ಜೊತೆಗಿನ ಫೋನ್ ಸಂಭಾಷಣೆಯ ಹಿನ್ನೆಲೆಯನ್ನು ಸ್ಪಷ್ಟಪಡಿಸಿದ ನಂತರವೂ ಎಚ್.ಡಿ.ಕುಮಾರಸ್ವಾಮಿಯವರು ಮತ್ತೆ ತಮ್ಮ ಸಡಿಲ ನಾಲಿಗೆಯಲ್ಲಿ ಸುಳ್ಳುಗಳನ್ನು ಹರಿಯಬಿಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.
‘’ತಾ ಕಳ್ಳ ಇತರರ ನಂಬ’’ ಎಂಬ ಗಾದೆ ಮಾತನ್ನು ಒಬ್ಬಮಾಜಿ ಮುಖ್ಯಮಂತ್ರಿ ಬಗ್ಗೆ ಬಳಸಬೇಕಾಗಿ ಬಂದದ್ದಕ್ಕೆ ನನಗೆ ವಿಷಾದ ಇದೆ. ಡಾ.ಯತೀಂದ್ರ ಅವರ ಜೊತೆಗಿನ ಪೋನ್ ಸಂಭಾಷಣೆಯ ಹಿನ್ನೆಲೆಯನ್ನು ಸ್ಪಷ್ಟಪಡಿಸಿದ ನಂತರವೂ @hd_kumaraswamy ಅವರು ಮತ್ತೆ ತಮ್ಮ ಸಡಿಲ ನಾಲಿಗೆಯಲ್ಲಿ ಸುಳ್ಳುಗಳನ್ನು ಹರಿಯಬಿಟ್ಟಿದ್ದಾರೆ.
ಪೋನ್ ಸಂಭಾಷಣೆಯಲ್ಲಿ… pic.twitter.com/xli6QJZ5DJ
— Siddaramaiah (@siddaramaiah) November 16, 2023
‘ಫೋನ್ ಸಂಭಾಷಣೆಯಲ್ಲಿ ಡಾ.ಯತೀಂದ್ರ ಹೆಸರಿಸಿದ ವಿವೇಕಾನಂದ ಅವರು ವರುಣ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ). ವರುಣ ಕ್ಷೇತ್ರಕ್ಕೆ ಸೇರಿರುವ ಹಾರೋಹಳ್ಳಿ, ಕೀಳನಪುರ, ದೇವಲಾಪುರ ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಐದು ಸರ್ಕಾರಿ ಶಾಲೆಗಳ ರಿಪೇರಿಯಾಗಬೇಕಾಗಿರುವ ಕೊಠಡಿಗಳ ವಿವರದ ಪಟ್ಟಿಯನ್ನು ಬಿಇಒ ಅವರೇ ನನ್ನ ಕಚೇರಿಯ ಜಂಟಿ ಕಾರ್ಯದರ್ಶಿಗಳಿಗೆ ಕಳಿಸಿದ್ದರು. ಇದರ ಬಗ್ಗೆಯೇ ನಾನು ಡಾ.ಯತೀಂದ್ರ ಅವರ ಜೊತೆಯಲ್ಲಿ ಮಾತನಾಡಿದ್ದು. ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಇಲ್ಲಿ ಲಗತ್ತಿಸಿದ್ದೇನೆ’ ಎಂದು ದಾಖಲೆಯನ್ನು ಬಿಡುಗಡೆಗೊಳಿಸಿದ್ದಾರೆ.
‘ಸುಳ್ಳುಕೋರರ ನಂಜಿನ ಆರೋಪಗಳಿಗೆ ವಿವರಣೆ ನೀಡಬೇಕಾದ ಅಗತ್ಯ ಖಂಡಿತ ಇಲ್ಲ. ಆದರೆ ಮಾಧ್ಯಮಗಳಲ್ಲಿ ಪ್ರಸಾರ, ಪ್ರಕಟವಾಗುತ್ತಿರುವ ಸುಳ‍್ಳು ಸುದ್ದಿಗಳನ್ನು ಅಮಾಯಕ ಜನ ನಂಬಿ ತಪ್ಪು ತಿಳಿದುಕೊಳ್ಳಬಾರದು ಎನ್ನುವ ಕಾರಣಕ್ಕೆ ಈ ವಿವರವನ್ನು ನೀಡಿದ್ದೇನೆ. ಸುಳ್ಳು, ಮೋಸ, ದ್ರೋಹ, ವಚನಭ್ರಷ್ಟತೆಗಳನ್ನೇ ಅಸ್ತ್ರ ಮಾಡಿಕೊಂಡು ಗಳಿಸಿದ ಅಧಿಕಾರವನ್ನು ಕೇವಲ ಹಣದ ಲೂಟಿಗಾಗಿ ದುರ್ಬಳಕೆ ಮಾಡಿಕೊಂಡ ಕುಮಾರಸ್ವಾಮಿಯವರಿಗೆ ಅಭಿವೃದ್ದಿಯ ವಿಚಾರ ಅರ್ಥವಾಗುವಂತಹದ್ದಲ್ಲ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾಡಿರುವ ‘ಹಣಕ್ಕಾಗಿ ವರ್ಗಾವಣೆ ದಂಧೆ’ ಆರೋಪಕ್ಕೆ ಖಡಕ್ ಆಗಿ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.
ಪೆನ್ ಡ್ರೈವ್ ನಾಟಕ ಠುಸ್ ಆಯ್ತು,
ಸೋಫಾ ಸೆಟ್ ಸುಳ್ಳು ಬಯಲಾಯ್ತು,
ಈಗ ವರ್ಗಾವಣೆ ವಿಡಿಯೋ ಎನ್ನುವ ಮತ್ತೊಂದು ಸುಳ್ಳಿನ ನಾಟಕ ಶುರು ಮಾಡಿದ್ದಾರೆ @hd_kumaraswamy.ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದೆಂದರೆ ನೀರು ಕುಡಿದಷ್ಟೇ ಸಲೀಸು.
ರಾಜ್ಯದ ಜನತೆ ಈಗಾಗಲೇ ಪೆನ್ ಡ್ರೈವ್ ಸ್ವಾಮಿಯ ಮಾನವನ್ನು ಮೂರು ಕಾಸಿಗೆ ಕಳೆದಿದ್ದಾರೆ, ಆದರೂ…
— Karnataka Congress (@INCKarnataka) November 16, 2023
ಈ ನಡುವೆ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದ್ದು, ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದೆಂದರೆ ನೀರು ಕುಡಿದಷ್ಟೇ ಸಲೀಸು ಎಂದು ಕಾಲೆಳೆದಿದೆ.