ಸೇಡಿನ ರಾಜಕೀಯದ ವಿರುದ್ಧ ಗೆಲ್ಲುತ್ತೇನೆ: ಹೈಕೋರ್ಟು ತನಿಖೆಗಷ್ಟೇ ಅನುಮತಿ ನೀಡಿದೆ, ಅಭಿಯೋಜನೆಗಲ್ಲ

Date:

Advertisements

ಮುಡಾ ಪ್ರಕರಣದಲ್ಲಿ ಬಿಜೆಪಿಯ ಸೇಡಿನ ರಾಜಕೀಯ ವಿರುದ್ಧದ ಹೋರಾಟದಲ್ಲಿ ನಾನು ಜಯಗಳಿಸುತ್ತೇನೆ. ಹೈಕೋರ್ಟ್‌ ತನಿಖೆಗಷ್ಟೇ ಅನುಮತಿ ನೀಡಿದೆ, ಅಭಿಯೋಜನೆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿರುವ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

“ಹೈಕೋರ್ಟ್ ಆದೇಶದ ಅಂಶಗಳನ್ನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ಆದೇಶ ಪ್ರತಿ ಪಡೆದು ಓದಿದ ಬಳಿಕ‌ ಪೂರ್ಣ ಪ್ರತಿಕ್ರಿಯೆ ನೀಡುತ್ತೇನೆ. ನ್ಯಾಯಾಲಯವು ಸೆಕ್ಷನ್ 218ರ ಅಡಿ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. ರಾಜ್ಯಪಾಲರ ಆದೇಶದಲ್ಲಿನ ಸೆಕ್ಷನ್ 17 ಎ ಗೆ ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿದ್ದಾರೆ” ಎಂದು ತಿಳಿಸಿದ್ದಾರೆ.

Advertisements

“ನಾನು ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ. ಕಾನೂನು ಅಡಿ ಅಂತಹ ತನಿಖೆಗೆ ಅವಕಾಶ ಇದೆಯೋ ಇಲ್ಲವೋ ಎಂಬ ಬಗ್ಗೆ ತಜ್ಞರ ಜೊತೆ ಸಮಾಲೋಚಿಸುತ್ತೇನೆ. ಕಾನೂನು ತಜ್ಞರ ಜೊತೆ ಚರ್ಚಿಸಿ, ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸುತ್ತೇನೆ” ಎಂದಿದ್ದಾರೆ.

“ದೂರುದಾರ ತನ್ನ ದೂರಿನಲ್ಲಿ ಸೆಕ್ಷನ್ 218 ಬಿಎನ್ ಎಸ್ ಎಸ್, 17 ಎ ಮತ್ತು 19 ಪಿಸಿ ಕಾಯಿದೆ ಪ್ರಕಾರ ತನಿಖೆ ಹಾಗೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದರು. ಆದರೆ, ರಾಜ್ಯಪಾಲರು ಪ್ರಾಥಮಿಕ ಹಂತದಲ್ಲಿ 19 ಪಿಸಿ ಕಾಯಿದೆ ಪ್ರಕಾರ ಕೇಳಿದ್ದ ಅಭಿಯೋಜನಾ ಅನುಮತಿ‌ ನಿರಾಕರಿಸಿದ್ದರು. ಈ ದಿನ ಘನ ನ್ಯಾಯಾಲಯ ರಾಜ್ಯಪಾಲರು 218 ಬಿಎನ್ ಎಸ್ ಎಸ್ ಪ್ರಕಾರ ನೀಡಿರುವ ಅಭಿಯೋಜನಾ ಅನುಮತಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಜೀನಾಮೆ ಯೋಚನೆ ಬೇಡ, ಸಿಎಂ ಸ್ಥಾನದಲ್ಲಿ ಮುಂದುವರಿಯಿರಿ: ಸಿದ್ದರಾಮಯ್ಯಗೆ ಹೈಕಮಾಂಡ್‌ ಸೂಚನೆ!

ಸತ್ಯಕ್ಕೆ ಜಯ ಸಿಗಲಿದೆ

“ಮುಂದಿನ ದಿನಗಳಲ್ಲಿ ಸತ್ಯ ಹೊರಬಂದು 17 ಎ ಅಡಿ ನೀಡಿರುವ ತನಿಖೆ ರದ್ದಾಗಲಿದೆ ಎಂಬ ದೃಢ ವಿಶ್ವಾಸ ನನಗಿದೆ. ಈ ರಾಜಕೀಯ ಹೋರಾಟದಲ್ಲಿ ರಾಜ್ಯದ ಜನ ನನ್ನ ಹಿಂದೆ ಇದ್ದಾರೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಕಾನೂನು ಮತ್ತು ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಇದು ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸೇಡಿನ ರಾಜಕೀಯದ ವಿರುದ್ದದ ಹೋರಾಟ. ಬಿಜೆಪಿ, ಜೆಡಿಎಸ್ ನ ಈ ಸೇಡಿನ ರಾಜಕೀಯದ ವಿರುದ್ದ ನಮ್ಮ ನ್ಯಾಯಾಂಗದ ಹೋರಾಟ ಮುಂದುವರಿಯಲಿದೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ನಮ್ಮ ಪಕ್ಷದ ಎಲ್ಲ ಶಾಸಕರು, ನಾಯಕರು ಮತ್ತು ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಹೈಕಮಾಂಡ್ ನನ್ನ ಪರವಾಗಿ ಭದ್ರವಾಗಿ ನಿಂತಿದ್ದು ಕಾನೂನಿನ ಹೋರಾಟ ಮುಂದುವರಿಸುವಂತೆ ಉತ್ತೇಜನ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

ಹೋರಾಟದಲ್ಲಿ ಗೆಲ್ಲುತ್ತೇನೆ

“ನಾನು ಬಡವರ ಪರವಾಗಿದ್ದೇನೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ ಎನ್ನುವ ಕಾರಣಕ್ಕಾಗಿ ನನ್ನ ವಿರುದ್ದ ಬಿಜೆಪಿ, ಜೆಡಿಎಸ್ ರಾಜಕೀಯ ಪ್ರತಿಕಾರಕ್ಕೆ ಇಳಿದಿದೆ. ನನ್ನ 40 ವರ್ಷಗಳ ರಾಜಕೀಯ ಜೀವನದುದ್ದಕ್ಕೂ ಇಂತಹ ಸೇಡು, ಸಂಚಿನ ರಾಜಕೀಯವನ್ನು ಎದುರಿಸಿದ್ದೇನೆ ಮತ್ತು ರಾಜ್ಯದ ಜನರ ಆಶೀರ್ವಾದ, ಹಾರೈಕೆಯ ಬಲದಿಂದ ಗೆಲ್ಲುತ್ತಾ ಬಂದಿದ್ದೇನೆ. ಈ ಹೋರಾಟವನ್ನು ಜನತೆಯ ಆಶೀರ್ವಾದದ ಬಲದಿಂದ ಗೆಲ್ಲುತ್ತೇನೆ” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

“ಮುಡಾ ಪ್ರಕರಣ ಒಂದು ನೆಪ ಅಷ್ಟೇ. ಬಡವರು ಮತ್ತು ಶೋಷಿತರ ಪರವಾಗಿರುವ ನಮ್ಮ ಸರ್ಕಾರದ ಯೋಜನೆಗಳನ್ನು ನಿಲ್ಲಿಸಬೇಕೆಂಬುದೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖ್ಯ ಉದ್ದೇಶ. ಮುಡಾ ಪ್ರಕರಣವನ್ನು ಸೃಷ್ಟಿಸಿ, ಅದರ ಮೂಲಕ ಸುಳ್ಳು ಆರೋಪಗಳನ್ನು ಮಾಡುತ್ತಿರುವವರ ಮುಖಗಳನ್ನು ಒಮ್ಮೆ ರಾಜ್ಯದ ಜನತೆ ಸರಿಯಾಗಿ ನೋಡಬೇಕು” ಎಂದು ಮನವಿ ಮಾಡಿದ್ದಾರೆ.

ನಾನು ಸಿಎಂ ಆಗಿದ್ದು ಸಹಿಸುತ್ತಿಲ್ಲ!

“ನನ್ನ ರಾಜೀನಾಮೆ ಕೇಳುತ್ತಿರುವ ಇದೇ ನಾಯಕರು ನಾನು ರಾಜ್ಯದ ಬಡವರು, ಶೋಷಿತರ ಪರವಾಗಿ ಜಾರಿಗೆ ತಂದಿದ್ದ ಯೋಜನೆಗಳನ್ನು ವಿರೋಧಿಸಿದವರೇ ಆಗಿದ್ದಾರೆ. ಇದೇ ಬಿಜೆಪಿ, ಜೆಡಿಎಸ್ ನಾಯಕರು ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರ ಭಾಗ್ಯ, ಕ್ಷೀರ ಧಾರೆ, ವಿದ್ಯಾಸಿರಿ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ವಿರೋಧಿಸಿದ್ದಾರೆ” ಎಂದಿದ್ದಾರೆ.

“ಇಂದು ನನ್ನ ವಿರುದ್ದ ರಾಜಕೀಯ ಸಂಚು ನಡೆಸುತ್ತಿರುವ ಇದೇ ನಾಯಕರು ಎಸ್ ಸಿ ಎಸ್ ಪಿ/ಟಿಎಸ್‌ ಪಿ ಕಾಯ್ದೆಯನ್ನು ವಿರೋಧಿಸಿದ್ದಾರೆ. ಕರ್ನಾಟಕದ ಜನತೆ ಇಲ್ಲಿಯ ವರೆಗೆ ಭಾರತೀಯ ಜನತಾ ಪಕ್ಷಕ್ಕೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವಷ್ಟು ಬಹುಮತ ನೀಡಿಲ್ಲ. ಇಲ್ಲಿಯ ವರೆಗೆ ಬಿಜೆಪಿ ಅನೈತಿಕವಾಗಿ, ದುಡ್ಡಿನ ಬಲದಿಂದ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದದ್ದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಆಪರೇಷನ್ ಕಮಲಕ್ಕೆ ಅವಕಾಶವೇ ಇಲ್ಲದಂತೆ ನಮ್ಮ ಪಕ್ಷಕ್ಕೆ 136 ಸದಸ್ಯರ ಬಲ ನೀಡಿ ಗೆಲ್ಲಿಸಿದರು. ಇದರಿಂದ ಹತಾಶೆಗೀಡಾಗಿರುವ ಬಿಜೆಪಿ, ಜೆಡಿಎಸ್ ನಾಯಕರು, ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ನನ್ನ ವಿರುದ್ದ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ನಮ್ಮ ಸರ್ಕಾರವನ್ನು ಡಿಸ್ಟರ್ಬ್ ಮಾಡುವ ಹುನ್ನಾರ ನಡೆಸಿದೆ” ಎಂದು ಆರೋಪಿಸಿದ್ದಾರೆ.

“ರಾಜಭವನದ ದುರ್ಬಳಕೆ ಮೂಲಕ ವಿರೋಧ ಪಕ್ಷಗಳ ಸರ್ಕಾರವನ್ನು ಹಣಿಯುವ ಸಂಚನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ದೇಶಾದ್ಯಂತ ನಡೆಸುತ್ತಿದೆ. ನನ್ನ ಪ್ರಕರಣದಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ಇದೇ ರೀತಿ ಮುಖಭಂಗ ಅನುಭವಿಸುವುದು ಖಂಡಿತ” ಎಂದು ಎಚ್ಚರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X