- ಕುಮಾರಸ್ವಾಮಿ ಅವರದು ದ್ವೇಷ ಹಾಗೂ ಅಸೂಯೆಗಳ ರಾಜಕಾರಣ
- ಬರಪರಿಹಾರದ ಮನವಿಗೆ ಕೇಂದ್ರ ಇನ್ನೂ ಸ್ಪಂದಿಸಿಲ್ಲ: ಸಿದ್ದರಾಮಯ್ಯ
ಮಾಜಿ ಮುಖ್ಯಮತ್ರಿ ಎಚ್ ಡಿ ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ? ಯಾವಾಗಲೂ ಹಿಟ್ ಅಂಡ್ ರನ್ ಕೇಸ್ ಅವರದ್ದು. ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡಲಿ. ಉತ್ತರ ಕೊಡುತ್ತೇವೆ. ಸರ್ಕಾರ ಓಡಿಹೋಗುವುದಿಲ್ಲ. ಆದರೆ, ಸುಳ್ಳನ್ನೆಲ್ಲಾ ತನಿಖೆ ಮಾಡಿಸಲು ಆಗುವುದಿಲ್ಲ. ಏನಾದರೂ ಆಧಾರ ಇದ್ದರೆ, ದಾಖಲಾತಿ ಇದ್ದರೆ ತನಿಖೆ ಮಾಡಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, “ಕುಮಾರಸ್ವಾಮಿಯಾಗಲಿ, ನಮ್ಮ ಪಕ್ಷದವರಾಗಲಿ ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು. ವಿದ್ಯುತ್ ಬಿಲ್ಲನ್ನು ಬೆಸ್ಕಾಂನವರು ನೀಡುತ್ತಾರೆ. ಕುಮಾರಸ್ವಾಮಿಯವರು ಮೊದಲು ತಪ್ಪನ್ನೇ ಮಾಡಿಲ್ಲ ಎಂದವರು. ನಂತರ ದಂಡವನ್ನು ಕಟ್ಟಿರುವುದು, ಅವರು ಅಪರಾಧ ಮಾಡಿರುವುದನ್ನು ಒಪ್ಪಿಕೊಂಡಂತಾಗಿದೆ” ಎಂದರು.
ಜೆಡಿಎಸ್‌ನಿಂದ ಮತ್ತಷ್ಟು ನಾಯಕರು ಕಾಂಗ್ರೆಸ್‌ಗೆ ಬರಲಿದ್ದಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, “ಜೆಡಿಎಸ್ ಅಥವಾ ಬಿಜೆಪಿಯ ನಾಯಕರು, ಕಾಂಗ್ರೆಸ್ ನ ಸಿದ್ದಾಂತ ಹಾಗೂ ನಾಯಕತ್ವವನ್ನು ಒಪ್ಪಿ ಬಂದಲ್ಲಿ, ಅವರನ್ನು ಸ್ವಾಗತಿಸಲಾಗುವುದು. ರಾಜ್ಯದ ಒಟ್ಟು 224 ಸ್ಥಾನದಲ್ಲಿ 136 ನ್ನು ಕಾಂಗ್ರೆಸ್ ಪಡೆದಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್ ನ ಶಕ್ತಿಯನ್ನು ವಿಸ್ತರಿಸಬೇಕಿದೆ” ಎಂದು ಹೇಳಿದರು.
“ಕೋಮುವಾದಿ ಪಕ್ಷಗಳು ಮತ್ತೆ ಅಧಿಕಾರಕ್ಕೆ ಬರಬಾರದು. ಜೆಡಿಎಸ್ ನ ಕುಮಾರಸ್ವಾಮಿಯವರು ಕೇವಲ ದ್ವೇಷ ಹಾಗೂ ಅಸೂಯೆಗಳ ರಾಜಕಾರಣ ಮಾಡುತ್ತಾರೆ. ನನ್ನ ಮಗ ಯತೀಂದ್ರ ಆಶ್ರಯ ಸಮಿತಿ ಅಧ್ಯಕ್ಷನಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೆ, ಅವರ ಮೇಲೆ ವೃಥಾ ಆರೋಪ ಮಾಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ದ್ವೇಷದ ರಾಜಕಾರಣವನ್ನು ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ತಿಳಿದಿಲ್ಲ. ಸುಳ್ಳೇ ಅವರ ಮನೆದೇವರು” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಕುಮಾರಸ್ವಾಮಿ ಹುಚ್ಚರಾಗಿದ್ದು, ತಾಳ್ಮೆ ಕಳೆದುಕೊಂಡಿದ್ದಾರೆ: ಡಿ ಕೆ ಶಿವಕುಮಾರ್ ತಿರುಗೇಟು
ರಾಮಮಂದಿರ ಕಟ್ಟಲು ನಮ್ಮದೇನು ವಿರೋಧವಿಲ್ಲ
ಜನವರಿ 22 ರಂದು ರಾಮಮಂದಿರ ಉದ್ಘಾಟನೆಗೊಳ್ಳಲಿದ್ದು ಇದರ ಲಾಭವನ್ನು ಬಿಜೆಪಿ ಪಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, “ವಿವಾದ ಬಹಳ ವರ್ಷಗಳಿಂದ ಇದ್ದು, ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ರಾಮಮಂದಿರ ಕಟ್ಟಲು ನಮ್ಮದೇನು ವಿರೋಧವಿಲ್ಲ. ಅದರಿಂದ ಮತದಾರರು ಬದಲಾಗುತ್ತಾರೆ ಎನ್ನುವುದು ಸುಳ್ಳು. ನಮ್ಮ ದೇಶದ ಜನ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡುಕೊಂಡಿದ್ದಾರೆ. ಬ್ರಿಟಿಷರ ಹಾಗೂ ಮೊಘಲರ ದಾಳಿಯಾದರೂ ಒಂದು ದೇಶವಾಗಿ ನಾವು ಉಳಿದುಕೊಂಡಿದ್ದೇವೆ. ಈ ದೇಶದಲ್ಲಿ ಅನೇಕ ಜಾತಿ, ಭಾಷೆಗಳು ಹಾಗೂ ಧರ್ಮಗಳಿದ್ದರೂ ದೇಶವಾಗಿ ಒಂದಾಗಿದ್ದು, ಐಕ್ಯತೆ, ಒಗ್ಗಟ್ಟಿನಿಂದ. ಉಳಿದುಕೊಂಡು ಬಂದಿದ್ದೇವೆ. ಒಳಗೊಳ್ಳುವಿಕೆಯಲ್ಲಿ ನಂಬಿಕೆ ಇಟ್ಟವರು ದೇಶದಲ್ಲಿ ಹೆಚ್ಚಿದ್ದಾರೆ” ಎಂದರು.
ಬರಪರಿಹಾರದ ಮನವಿಗೆ ಕೇಂದ್ರ ಇನ್ನೂ ಸ್ಪಂದಿಸಿಲ್ಲ
ರಾಜ್ಯ ಸರ್ಕಾರ ಬರಪರಿಹಾರ ನೀಡುವ ಸಂಬಂಧ ಕೇಂದ್ರಕ್ಕೆ ಒಂದು ವಾರದ ಗಡುವು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, “ಕೇಂದ್ರದಿಂದ 17900 ಕೋಟಿ ರೂ.ಗಳ ಬರಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಾಗೂ ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ನಡೆಸಿ ಒಂದು ತಿಂಗಳಾದರೂ ಕೂಡ ವರದಿಯನ್ನು ನೀಡಿಲ್ಲ ಹಾಗೂ ಸರ್ಕಾರದ ಮನವಿಗೆ ಕೇಂದ್ರ ಇದುವರೆಗೂ ಸ್ಪಂದಿಸಿಲ್ಲ. ಬರಪರಿಹಾರ ರಾಜ್ಯಕ್ಕೆ ನೀಡುವ ಭಿಕ್ಷೆಯಲ್ಲ. ಎನ್ ಡಿ ಆರ್ ಎಫ್ ನಡಿ ಪರಿಹಾರವನ್ನು ನೀಡಬೇಕಿದ್ದು, ಅದನ್ನು ರಾಜ್ಯ ನೀಡಿರುವ ತೆರಿಗೆಯ ಮೊತ್ತವೇ ಆಗಿದೆ. ಬರಪರಿಹಾರಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆಗಳನ್ನು ನಡೆಸಲಾಗಿದೆ” ಎಂದು ಹೇಳಿದರು.
ಹಗರಣಗಳ ತನಿಖೆ
“ಹಿಂದಿನ ಸರ್ಕಾರದ ಹಗರಣಗಳ ತನಿಖೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, 40% ಕಮಿಷನ್, ಕೋವಿಡ್, ಬಿಟ್ ಕಾಯಿನ್ ಸೇರಿದಂತೆ ಇತರೆ ಹಗರಣಗಳ ತನಿಖೆಗೆ ಆಯೋಗಗಳನ್ನು ರಚಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ” ಎಂದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.