- ಸ್ವಾತಂತ್ರ್ಯ ಹೋರಾಟದಲ್ಲಿ ಸೇವಾದಳದ ಪಾತ್ರ ದೊಡ್ಡದು
- ಹುತಾತ್ಮರಿಗೆ ವಂದನೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕಾಂಗ್ರೆಸ್ಸಿನ ಅಡಿಪಾಯ ಸೇವಾದಳ. ಕಾಂಗ್ರೆಸ್ ಮತ್ತು ಸೇವಾದಳ ಮಾತ್ರ ಸಾಮಾಜಿಕ ನ್ಯಾಯ, ಹೋರಾಟ, ದೇಶದ ಸಮಗ್ರತೆ ಬಗ್ಗೆ ನಂಬಿಕೆ ಇಟ್ಟಕೊಂಡು ದೇಶವನ್ನು, ಸಮಾಜವನ್ನು ಬೆಸೆಯುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಅರಮನೆ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಸೇವಾದಳ ಶತಮಾನೋತ್ಸವ ಮತ್ತು ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
“ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಚರಿತ್ರೆಯಾಗಲಿ, ಇತಿಹಾಸವಾಗಲಿ ಇಲ್ಲ. ಸೇವಾದಳ ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿತ್ತು” ಎಂದರು.
“ಗ್ರಾಮ ಸ್ವರಾಜ್ಯ ಮಹಾತ್ಮ ಗಾಂಧಿ ಅವರ ಕನಸು. ನೆಹರೂ ಮತ್ತು ಇಂದಿರಾಗಾಂಧಿ ಅವರ ಕಾಲದಲ್ಲಿ ಗ್ರಾಮಗಳ ಪ್ರಗತಿಗೆ ಹತ್ತಾರು ಕಾರ್ಯಕ್ರಮ ಹಮ್ಮಿಕೊಂಡರು. ನಮ್ಮ ಸರ್ಕಾರ ಕೂಡ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಚುನಾವಣೆಯಲ್ಲಿ ನಾವು ಕೊಟ್ಟ ಎಲ್ಲ ಭರವಸೆಗಳನ್ನು ಹಿಂದಿನ ಬಾರಿಯೂ ಈಡೇರಿಸಿದ್ದೇವೆ. ಈ ಬಾರಿಯೂ ಈಡೇರಿಸುತ್ತೇವೆ” ಎಂದು ತಿಳಿಸಿದರು.
“ಸೇವಾದಳ ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದ, ಪ್ರಾಮಾಣಿಕ ಹೋರಾಟದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಬುಡಸಮೇತ ಕಿತ್ತೊಗೆದು ಭಾರತವನ್ನು ಕಾಪಾಡಿಕೊಳ್ಳುವ ರಾಹುಲ್ ಗಾಂಧಿ ಅವರ ಗುರಿಯನ್ನು ಸಾಧಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆಗಳಿಗೆ ವಿಶೇಷ ಪೀಠ ರಚಿಸಿ: ಸುಪ್ರೀಂ ನಿರ್ದೇಶನ
ಬಿಜೆಪಿಯವರಿಗೆ ದೇಶದ ಇತಿಹಾಸ ಗೊತ್ತಿಲ್ಲ: ಡಿಕೆಶಿ
ಬಿಜೆಪಿಯವರಿಗೆ ಈ ದೇಶದ ಇತಿಹಾಸವೇ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಈ ದೇಶದ ಇತಿಹಾಸವನ್ನು ಗೌರವಿಸಿ, ಕಾಪಾಡಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
“ಈ ದೇಶದ ಇತಿಹಾಸ ಗೊತ್ತಿಲ್ಲದವರು ಈಗ ಭಾರತ ಎಂದು ಹೆಸರು ಬದಲಾಯಿಸಲು ಹೊರಟಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚಿತವಾಗಿಯೇ, ಪಕ್ಷದ ಸಂಸ್ಥೆಗೆ ‘ಭಾರತ ಸೇವಾದಳ’ ಎಂದು ಹೆಸರಿಟ್ಟವರು ನಾವು” ಎಂದು ಅಭಿಮಾನ ವ್ಯಕ್ತಪಡಿಸಿದರು.
“ಪಕ್ಷವನ್ನು ಅಧಿಕಾರಕ್ಕೆ ತರಲು ತಳಮಟ್ಟದಿಂದ ಸೇವಾದಳದ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಈ ಸಮಾಜಕ್ಕೆ ನಾವುಗಳು ಕೊಟ್ಟು ಹೋಗಬೇಕು ಅಥವಾ ಬಿಟ್ಟು ಹೋಗಬೇಕು, ನಾವು ಭಾವನೆಯ ಜೊತೆ ಆಟವಾಡಿ ಅಧಿಕಾರಕ್ಕೆ ಬಂದಿಲ್ಲ, ಜನರ ಬದುಕಿನಲ್ಲಿ ಬದಲಾವಣೆ ತರುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದೇವೆ” ಎಂದರು.
ಪ್ರಧಾನಿ ನೆಹರು ಅವರನ್ನೇ ತಡೆದಿದ್ದ ಸೇವಾದಳದ ಕಾರ್ಯಕರ್ತ
1959 ರಲ್ಲಿ ನಾಸಿಕ್‌ನಲ್ಲಿ ನಡೆದ ಸೇವಾದಳದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಪ್ರಧಾನಿ ಜವಾಹರಲಾಲ್ ನೆಹರು ಅವರು ಗುರುತಿನ ಚೀಟಿ ಇಲ್ಲದೇ ಪ್ರವೇಶ ಮಾಡಿದ್ದರು. ಆಗ ಸೇವಾದಳದ ಕಾರ್ಯಕರ್ತ ಕಮಲಾಕರ ಶರ್ಮಾ ನೆಹರು ಅವರನ್ನು ತಡೆದ ಕಾರಣ, ಸುತ್ತಲಿದ್ದ ಕಾರ್ಯಕರ್ತರು ಕೋಪಗೊಂಡು, ಇವರು ಯಾರು ಗೊತ್ತಾ? ಇವರನ್ನು ತಡೆಯಲು ಎಷ್ಟು ಧೈರ್ಯ ನಿನಗೆ ಎಂದು ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡರು.
ಆಗ ಶರ್ಮಾ ಅವರು, “ಇವರು ಯಾರೆಂದು ನನಗೆ ಚನ್ನಾಗಿ ಗೊತ್ತಿದೆ. ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಅವರು. ಅಂತಹ ಹಿರಿಯ ನಾಯಕರೇ ನಿಯಮ ಉಲ್ಲಂಘಿಸಬಾರದು ಎಂದು ಅವರನ್ನು ತಡೆದೆ” ಎಂದು ಉತ್ತರಿಸಿದರು. ಇದರಿಂದ ಪ್ರಭಾವಿತರಾದ ನೆಹರೂ ಅವರು ಅಂದಿನಿಂದ ಸೇವಾದಳದವರನ್ನು “ತಿರಂಗ ಕಾ ಪ್ರಹರಿ” ಅಂದರೆ “ತ್ರಿವರ್ಣ ಧ್ವಜದ ರಕ್ಷಕರು” ಎಂದು ಕರೆದರು ಎಂದು ಶಿವಕುಮಾರ್ ನೆನಪಿಸಿಕೊಂಡರು.