ಧರ್ಮಸ್ಥಳ ವ್ಯಾಪ್ತಿಯಲ್ಲಿನ ಸಾವು ಮತ್ತು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್ಐಟಿ) ರಚನೆ ಸದ್ಯಕ್ಕೆ ಇಲ್ಲ. ಈ ವಿಚಾರದಲ್ಲಿ ಯಾರ ಒತ್ತಡವೂ ಇಲ್ಲ, ಯಾರ ಒತ್ತಡಕ್ಕೂ ನಾವು ಮಣಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರು ಆಗಲಿ ಯಾರೇ ಆಗಲಿ, ನಾವು ಯಾರು ಹೇಳುವುದಕ್ಕೂ ಪರವೂ ಇಲ್ಲ ವಿರೋಧವೂ ಇಲ್ಲ. ಕಾನೂನು ಪ್ರಕಾರವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಕಾನೂನು ಪ್ರಕಾರವಾಗಿ ಸರ್ಕಾರಕ್ಕೆ ಎಸ್‌ಐಟಿ ಮಾಡಬೇಕು ಎಂದನಿಸಿದರೆ ಮಾಡುತ್ತೇವೆ. ಆದರೆ ಸದ್ಯಕ್ಕೆ ಎಸ್‌ಐಟಿ ರಚನೆಯಿಲ್ಲ. ಪೊಲೀಸ್ ಇಲಾಖೆ ಆಧಾರದ ಮೇಲೆ ಮಾಡಲಾಗುವುದು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ವಿಶೇಷ ತನಿಖಾ ತಂಡ ರಚನೆ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ
“ದೂರು ನೀಡಿದ ವ್ಯಕ್ತಿ ಹತ್ತು ವರ್ಷ ಪರಾರಿಯಾಗಿದ್ದ. ಪೊಲೀಸರಿಗೆ ಹೇಳಿಕೆ ನೀಡಿದ್ದು ತಾನೇ ಮೃತದೇಹ ಹೂತಿ ಹಾಕಿರುವುದಾಗಿ ಹೇಳಿದ್ದಾನೆ. ಸ್ಥಳ ತೋರಿಸುವುದಾಗಿಯೂ ಹೇಳಿದ್ದಾನೆ. ಪೊಲೀಸರು ಈ ಬಗ್ಗೆ ವರದಿ ನೀಡಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಈ ವಿಚಾರದಲ್ಲಿ ಎಸ್‌ಐಟಿ ರಚಿಸುವಂತೆ ಸರ್ಕಾರದ ಮೇಲೆ ಒತ್ತಡವಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ “ಸರ್ಕಾರದ ಮೇಲೆ ಯಾವ ಒತ್ತಡವೂ ಇಲ್ಲ. ಒತ್ತಡ ಹಾಕಿದರೂ ನಾವು ಯಾರ ಮಾತನ್ನೂ ಕೇಳಲ್ಲ. ಕಾನೂನು ರೀತಿಯಲ್ಲಿ ಏನು ಮಾಡಬೇಕೊ ಅದನ್ನು ಮಾಡುತ್ತೇವೆ” ಎಂದು ಸ್ಪಷ್ಪಪಡಿಸಿದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚಿಸುವಂತೆ ಹಲವು ರಾಜಕೀಯ ಪಕ್ಷಗಳು, ಸಂಘಟನೆಗಳು ಆಗ್ರಹಿಸಿದೆ. ಈ ಸಂಬಂಧ ಮಹಿಳಾ ಆಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ. ಹಾಗೆಯೇ ಹಿರಿಯ ವಕೀಲರಾದ ಸಿಎಸ್ ದ್ವಾರಕನಾಥ್ ಮತ್ತು ಎಸ್ ಬಾಲನ್ ಅವರೂ ಸಿಎಂ ಭೇಟಿಯಾಗಿ ಎಸ್‌ಐಟಿ ರಚನೆ ಮನವಿ ಮಾಡಿದ್ದಾರೆ. ಈ ಸಂಬಂಧ ನಿನ್ನೆ(ಜುಲೈ 17) ಪತ್ರಿಕಾಗೋಷ್ಠಿಯನ್ನೂ ನಡೆಸಲಾಗಿದೆ. ಆದರೆ ಸದ್ಯ ಎಸ್‌ಐಟಿ ರಚನೆಯಿಲ್ಲ ಎಂದು ಸಿಎಂ ಹೇಳಿದ್ದಾರೆ.
