ದೇಶದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣವು ದಿನಕ್ಕೊಂದು ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯೊದಗಿಸಿದೆ.
ಈ ನಡುವೆ ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರತಿಪಕ್ಷ ನಾಯಕ ಆರ್ ಅಶೋಕ್, “ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿಎಂ ಸಿದ್ದರಾಮಯ್ಯ” ಎಂದು ಗಂಭೀರ ಆರೋಪ ಮಾಡಿದ್ದಾರೆ.
“ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೊಬೈಲ್ ಟ್ರ್ಯಾಕ್ ಮಾಡಿದರೆ ಪ್ರಜ್ವಲ್ ರೇವಣ್ಣ ಪರಾರಿಯಾಗಲು ಯಾರು ಸಹಕರಿಸಿದರು ಎಂಬುದು ಗೊತ್ತಾಗುತ್ತದೆ. ಪ್ರಜ್ವಲ್ ರೇವಣ್ಣನನ್ನು ದೇಶದಿಂದ ಪರಾರಿಯಾಗಲು ಬಿಟ್ಟವರು ಸಿದ್ದರಾಮಯ್ಯನವರು, ಆದರೆ ಪ್ರಶ್ನೆ ಮೋದಿಯವರ ಬಳಿ ಕೇಳಲಾಗುತ್ತಿದೆ. ಕರ್ನಾಟಕದಲ್ಲಿ ಪೊಲೀಸ್‌ನವರು ಇದ್ದಾರ ಅಥವಾ ಸತ್ತಿದ್ದಾರಾ? ಇಂಟೆಲಿಜೆನ್ಸ್‌ನವರು ಏನು ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಪ್ರಕರಣದಲ್ಲಿ ರಾಜ್ಯ ಸರ್ಕಾರದ ತಪ್ಪು ಕೇಂದ್ರದ ಮೇಲೆ ಹೊರಿಸುತ್ತಿರುವುದೇಕೆ? ಕಾನೂನು ಸುವ್ಯವಸ್ಥೆ ನಮ್ಮ ಜವಾಬ್ದಾರಿ ಅಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಲಿಖಿತವಾಗಿ ಬರೆದುಕೊಡಲಿ. ದೇವೇಗೌಡರಿಗೆ ಅಪಮಾನ ಮಾಡಬೇಕೆಂದು ಮಾಡಿದ ಯೋಜನೆ ಇದು” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಹಾವೇರಿ | ಪ್ರೀತಿಸಿದ ಯುವತಿ ಜೊತೆ ಹೋದ ಮಗ: ತಾಯಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ; 6 ಮಂದಿಯ ಬಂಧನ
“ಪ್ರಜ್ವಲ್ ರೇವಣ್ಣನನ್ನು ಬಂಧಿಸಲು ರಾಜ್ಯ ಸರ್ಕಾರ ಹಿಂದೇಟು ಏಕೆ ಹಾಕುತ್ತಿದೆ. ತಪ್ಪು ಮಾಡಿದರೆ ಬಂಧಿಸಬೇಕು. ಇಡೀ ಪ್ರಕರಣ ನೋಡಿದರೆ ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಸಿದ್ದರಾಮಯ್ಯನವರೇ ಕಳಿಸಿದ್ದಾರೆ” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದರು.
