ಕೇರಳದ ಸಿಎಂಆರ್‌ಎಲ್ (Cochin Minerals and Rutile Limited) ಸಂಸ್ಥೆಗೆ ಸಂಬಂಧಿಸಿದ ಅಕ್ರಮ ಹಣಕಾಸು ವ್ಯವಹಾರ ಪ್ರಕರಣದಲ್ಲಿ ಗಮನಾರ್ಹ ಬೆಳವಣಿಗೆಯೊಂದು ನಡೆದಿದೆ. ಪ್ರಕರಣ ಸಂಬಂಧ ಅಲ್ಲಿನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ವಿಜಯನ್ ಹಾಗೂ ಅಳಿಯ, ಮಾಜಿ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಕೇರಳ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಜಾರಿ ನಿರ್ದೇಶನಾಲಯ (ಇಡಿ) ಪತ್ರ ಬರೆದಿದೆ.
“ವಿಜಯನ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ, ವೀಣಾ ವಿಜಯನ್ ಮಾಲೀಕತ್ವದ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್’ ಸಂಸ್ಥೆ ಮತ್ತು ಖಾಸಗಿ ಖನಿಜ ಕಂಪನಿ ಸಿಎಂಆರ್‌ಎಲ್ ನಡುವೆ ಅನುಮಾನಾಸ್ಪದ ಹಣಕಾಸು ವಹಿವಾಟು ನಡೆಸಿದೆ. ಆದಾಯ ತೆರಿಗೆ ಇಲಾಖೆ ಮತ್ತು ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ಈ ಹಿಂದೆ ನಡೆಸಿದ್ದ ಪ್ರಾಥಮಿಕ ತನಿಖೆಗಳ ಪ್ರಕಾರ, ಸಿಎಂಆರ್‌ಎಲ್ ಕಂಪನಿಯು ಎಕ್ಸಾಲಾಜಿಕ್ ಸಂಸ್ಥೆಗೆ ಸುಮಾರು 1.72 ಕೋಟಿ ರೂಪಾಯಿ ಪಾವತಿಸಿತ್ತು. ಆದರೆ, ಈ ಬೃಹತ್ ಮೊತ್ತಕ್ಕೆ ತಕ್ಕಂತೆ ಕಂಪನಿಯು ಯಾವುದೇ ಸಮರ್ಪಕ ಸೇವೆಯನ್ನು ಒದಗಿಸಿಲ್ಲ” ಎಂದು ಇಡಿ ಆರೋಪಿಸಿದೆ.
ಅಧಿಕಾರ ಬಳಸಿಕೊಂಡು, ಸರ್ಕಾರದಿಂದ ಕಂಪನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ‘ಕ್ವಿಡ್ ಪ್ರೊ ಕೊ’ ರೂಪದ ಹಣ ವಹಿವಾಟು ನಡೆದಿದೆ ಎಂಬ ಆರೋಪದ ಕುರಿತು ಇಡಿ ತನಿಖೆ ನಡೆಸುತ್ತಿದೆ.
ಈ ಪ್ರಕರಣದಲ್ಲಿ ಕೇವಲ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಪುತ್ರಿ ಮಾತ್ರವಲ್ಲದೆ, ವಿಜಯನ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರೂ ಆಗಿದ್ದ ಅಳಿಯ ಮೊಹಮ್ಮದ್ ರಿಯಾಸ್ ಅವರ ಹೆಸರನ್ನು ಸೇರಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಜೆಡಿಎಸ್‌ನಿಂದ ಜಿಟಿಡಿ ದೂರ ದೂರ; ಕಾಂಗ್ರೆಸ್‌ನಲ್ಲಿ ಹೊಸ ನೆಲೆ ಹುಡುಕಾಟವೇ?
ಇಡಿ ನಿಯಮಾವಳಿಗಳ ಪ್ರಕಾರ, ಹಣ ಅಕ್ರಮ ವರ್ಗಾವಣೆ ನಿರೋಧಕ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತನಿಖೆ ನಡೆಸಲು ಸ್ಥಳೀಯ ಪೊಲೀಸರು ಅಥವಾ ತನಿಖಾ ಸಂಸ್ಥೆಗಳು ಮೊದಲು ‘ಮೂಲ ಅಪರಾಧ’ಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವುದು ಕಡ್ಡಾಯ. ಆದ್ದರಿಂದ, ಈ ಮೂವರ ವಿರುದ್ಧವೂ ಎಫ್‌ಐಆರ್ ದಾಖಲಿಸುವಂತೆ ಡಿಜಿಪಿಗೆ ಇಡಿ ಪತ್ರ ಬರೆದಿದೆ ಎಂದು ಹೇಳಲಾಗಿದೆ.
ಈ ಹಠಾತ್ ಬೆಳವಣಿಗೆಯಿಂದಾಗಿ ಕೇರಳದ ಪ್ರಮುಖ ವಿಪಕ್ಷ ಸಿಪಿಐ(ಎಂ)ಗೆ ದೊಡ್ಡ ಆಘಾತ ಎದುರಾಗಿದೆ. ಅಧಿಕಾರದಲ್ಲಿದ್ದ ವಿಜಯನ್ ಕುಟುಂಬವು ಅಧಿಕಾರ ದುರುಪಯೋಗಪಡಿಸಿಕೊಂಡು ಸ್ವಜನಪಕ್ಷಪಾತ ಎಸಗಿದೆ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಾಗ್ದಾಳಿ ನಡೆಸುತ್ತಿದೆ. ಆದಾಗ್ಯೂ, ಸಿಪಿಐ(ಎಂ) ನಾಯಕರು, ಮೋದಿ ಸರ್ಕಾರವು ತನ್ನ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿಜಯನ್ ಅವರನ್ನು ಹಣಿಯಲು ಯತ್ನಿಸುತ್ತಿರುವ ‘ರಾಜಕೀಯ ಪ್ರೇರಿತ ಪಿತೂರಿ’ ಎಂದು ಆರೋಪಿಸಿದ್ದಾರೆ.




