2010ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆಯೋಜನೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಲಾಗಿದ್ದ ಪ್ರಕರಣವನ್ನು ಮುಕ್ತಾಯಗೊಳಿಸಲು (ರದ್ದು) ದೆಹಲಿ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ (ಇಡಿ) ವರದಿ ಸಲ್ಲಿಸಿದೆ. ಕೋರ್ಟ್ ವರದಿ ಸ್ವೀಕರಿಸಿದ ಬೆನ್ನಲ್ಲೇ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಹಗರಣ ಆರೋಪ ಮಾಡಿದ್ದ ಹಾಲಿ ಪ್ರಧಾನಿ ಮೋದಿ ಮತ್ತು ಮಾಜಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ.
2010ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜಿಸುವ ಹೊಣೆಯನ್ನು ಭಾರತ ಹೊತ್ತುಕೊಂಡಿತ್ತು. ಆ ಕ್ರೀಡಾಕೂಟದ ಸಂಘಟನಾ ಸಮಿತಿಯ ಮಾಜಿ ಮುಖ್ಯಸ್ಥ ಸುರೇಶ್ ಕಲ್ಮಾಡಿ ಮತ್ತು ಆಗಿನ ಪ್ರಧಾನ ಕಾರ್ಯದರ್ಶಿ ಲಲಿತ್ ಭಾನೋಟ್ ಹಾಗೂ ಇತರರು ಕ್ರೀಡಾಕೂಟದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣವನ್ನೂ ದಾಖಲಿಸಲಾಗಿತ್ತು.
ಆಗ ಕೇಜ್ರಿವಾಲ್ ಭಾಗವಾಗಿದ್ದ ಅಣ್ಣಾ ಹಜಾರೆ ನೇತೃತ್ವದ ಭಾರತ ಭ್ರಷ್ಟಾಚಾರ ವಿರೋಧಿ ಆಂದೋಲನ ಯುಪಿಎ ಸರ್ಕಾರದ ಭ್ರಷ್ಟಾಚಾರ, ಹಗರಣಗಳ ವಿರುದ್ಧ ಹುಟ್ಟಿಕೊಂಡಿತು. ಬಿಜೆಪಿ ಕೂಡ ಇದೇ ಭ್ರಷ್ಟಾಚಾರ ಮತ್ತು ಹಗರಣಗಳನ್ನೇ ಚುನಾವಣಾ ದಾಳವನ್ನಾಗಿ ಮಾಡಿಕೊಂಡಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರವೇ ಚುನಾವಣಾ ವಿಷಯವಾಗಿತ್ತು. ಭ್ರಷ್ಟಾಚಾರ ವಿರೋಧಿ ಹೋರಾಟ ಮತ್ತು ವಾಗ್ದಾಳಿಗಳು ಚುನಾವಣೆಯಲ್ಲಿ ಯುಪಿಎ ಸರ್ಕಾರವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದವು.
ಆಪಾದಿತ ಕಾಮನ್‌ವೆಲ್ತ್ ಹಗರಣದಲ್ಲಿ ಹಲವರನ್ನು ಆರೋಪಿಗಳನ್ನಾಗಿ ಮಾಡಿದ್ದರೂ, ಕಲ್ಮಾಡಿ ಮತ್ತು ಭಾನೋಟ್ ಅವರು ಕ್ರೀಡಾಕೂಟ ಆಯೋಜನೆಯಲ್ಲಿ ಎರಡು ಪ್ರಮುಖ ಒಪ್ಪಂದಗಳನ್ನು ನೀಡುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ದುಷ್ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಪ್ರಕರಣವನ್ನು ಸುದೀರ್ಘ ತನಿಖೆ ನಡೆಸಿಸಿದ್ದ ಸಿಬಿಐ, ಈ ಹಿಂದೆಯೇ ಭ್ರಷ್ಟಾಚಾರ ಸಾಬೀತು ಮಾಡಲು ಯಾವುದೇ ಪುರಾವೆಗಳಿಲ್ಲ ಎಂದು ಹೇಳಿತ್ತು. ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಇದೀಗ, ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸಿರುವ ಇಡಿ ಕೂಡ ಆರೋಪಗಳನ್ನು ಸಾಬೀತುಪಡಿಸಲು ಸಾಕ್ಷ್ಯಗಳನ್ನು ಕಲೆಹಾಕಲು ಸಾಧ್ಯವಾಗಿಲ್ಲ. ಹೀಗಾಗಿ, ಪ್ರಕರಣವನ್ನು ಮುಕ್ತಾಯಗೊಳಿಸಲು ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ವರದಿಯನ್ನು ಸ್ವೀಕರಿಸಿರುವ ವಿಶೇಷ ನ್ಯಾಯಾಧೀಶ ಸಂಜೀವ್ ಅಗರ್ವಾಲ್, “ತನಿಖೆಯ ಸಮಯದಲ್ಲಿ, PMLA ಸೆಕ್ಷನ್ 3 (ಹಣ ಅಕ್ರಮ ವರ್ಗಾವಣೆ) ಅಡಿಯಲ್ಲಿ ಅಪರಾಧವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ… EDಯ ವಿವೇಚನಾಯುಕ್ತ ತನಿಖೆಗಳ ಹೊರತಾಗಿಯೂ PMLA ಸೆಕ್ಷನ್ 3ರ ಅಡಿಯಲ್ಲಿ ಯಾವುದೇ ಅಪರಾಧ ನಡೆದಿದೆ ಎಂಬುದನ್ನು ಸಾಬೀತು ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಪ್ರಸ್ತುತ ECIRಅನ್ನು ಮುಂದುವರಿಸಲು ಯಾವುದೇ ಕಾರಣಗಳಿಲ್ಲ. ಪರಿಣಾಮವಾಗಿ, ED ಸಲ್ಲಿಸಿದ ಮುಕ್ತಾಯ ವರದಿಯನ್ನು ಅಂಗೀಕರಿಸಲಾಗಿದೆ” ಎಂದು ಹೇಳಿದ್ದಾರೆ.
ಇಡಿ ಪ್ರಕರಣದ ಮುಕ್ತಾಯ ವರದಿ ಸಲ್ಲಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಕಾಮನ್‌ವೆಲ್ತ್ ಹಗರಣದ ಆರೋಪವನ್ನು ತಮ್ಮ ವಿರುದ್ದದ ‘ರಾಜಕೀಯ ಕಿರುಕುಳ’ ಎಂದು ಕರೆದಿದೆ. ಆರೋಪಗಳನ್ನು ಮಾಡಿ, ತಮಗೆ ಕಿರುಕುಳ ನೀಡಿದ ಪ್ರಧಾನಿ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.
ಈ ವರದಿ ಓದಿದ್ದೀರಾ?: ರೈತರ ಭೂಮಿ ಕಸಿಯಲೆಂದೇ ಬಂದ ಸ್ಮಾರ್ಟ್ ಸಿಟಿ ಯೋಜನೆ: ಹೆಚ್‌ಡಿಡಿ-ಡಿಕೆಶಿ ಪಾತ್ರವೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದ ಜೈರಾಮ್ ರಮೇಶ್, “2014ಕ್ಕೂ ಮೊದಲು ಯುಪಿಎ ಸರ್ಕಾರದ ವಿರುದ್ಧ 2ಜಿ ಮತ್ತು ಕಾಮನ್‌ವೆಲ್ತ್ ಹಗರಣ ಆರೋಪಗಳನ್ನು ರೂಪಿಸಲು ಕೇಜ್ರಿವಾಲ್ ಮತ್ತು ಬಿಜೆಪಿ ಪರಸ್ಪರ ಕೈಜೋಡಿಸಿದ್ದರು. ಅವರು ಇಬ್ಬರು ಅತ್ಯಂತ ಪ್ರಾಮಾಣಿಕ ಮತ್ತು ಸಮರ್ಪಿತ ನಾಯಕರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಮೇಲೆ ಸುಳ್ಳು ಆರೋಪ ಹೊರಿಸಿದರು” ಎಂದು ಬಿಜೆಪಿ, ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“2G ಹಗರಣದಲ್ಲಿ ಆರೋಪವು ಸುಳ್ಳು ಎಂಬ ಸತ್ಯವು ಈಗಾಗಲೇ ನ್ಯಾಯಾಲಯದ ಮೂಲಕ ಹೊರಬಂದಿದೆ. ಈಗ, ಕಾಮನ್‌ವೆಲ್ತ್ ಪ್ರಕರಣದಲ್ಲಿ ED ಸಲ್ಲಿಸಿದ ಮುಕ್ತಾಯ ವರದಿಯನ್ನು ನ್ಯಾಯಾಲಯ ಸ್ವೀಕರಿಸಿದೆ ಮತ್ತು ಅಂಗೀಕರಿಸಿದೆ. ಸ್ಪಷ್ಟವಾಗಿ, ಎರಡೂ ಆರೋಪಗಳು ಸುಳ್ಳು! ದೇಶವನ್ನು ದಾರಿ ತಪ್ಪಿಸಿದ್ದಕ್ಕಾಗಿ ನರೇಂದ್ರ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ – ಇಬ್ಬರೂ ಕಾಂಗ್ರೆಸ್ ಮತ್ತು ಭಾರತದ ಜನರ ಬಳಿ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ಪವನ್ ಖೇರಾ, “ಪ್ರಕರಣಗಳಲ್ಲಿ ನಮಗೆ ನ್ಯಾಯ ದೊರೆತಿದೆ. ಆದರೆ, ಇದು ನ್ಯಾಯದ ವಿಚಾರ ಮಾತ್ರವಲ್ಲ, ಕಾಂಗ್ರೆಸ್ ಮೇಲಿನ ರಾಜಕೀಯ ಕಿರುಕುಳದ ವಿಚಾರವೂ ಆಗಿದೆ. ದುರುದ್ದೇಶದಿಂದ ರೂಪಿಸಲಾದ ಈ ಭ್ರಷ್ಟಾಚಾರ ಪ್ರಕರಣಗಳು ಬಿದ್ದುಹೋಗಿವೆ. ಇದು ಕೇವಲ ಕಾನೂನು ವಿಜಯವಲ್ಲ, ಬಿಜೆಪಿಯ ಸುಳ್ಳು ನಿರೂಪಣೆಯ ವಿರುದ್ಧದ ಜಯವೂ ಆಗಿದೆ. ಕಾಂಗ್ರೆಸ್‌ಗೆ ಕಿರುಕುಳ ನೀಡಿದ್ದಕ್ಕಾಗಿ, ದೇಶದ ಜನರನ್ನು ದಾರಿ ತಪ್ಪಿಸಿದ್ದಕ್ಕಾಗಿ ಮೋದಿ ಮತ್ತು ಕೇಜ್ರಿವಾಲ್ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದ್ದಾರೆ.