ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾರರಿಗೆ ಚುನಾವಣೆಗೆ ಕುಕ್ಕರ್, ಇಸ್ತ್ರಿ ಪೆಟ್ಟಿಗೆ ಹಂಚಿಕೆ ಮಾಡಿದ್ದಾರೆಂಬ ಅರೋಪ ಸಂಬಂಧ ರಾಜ್ಯ ಚುನಾವಣಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ, ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಎಂಬವರು ರಾಜ್ಯ ಚುನಾವಣಾಧಿಕಾರಿ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ವರುಣಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾರರಿಗೆ ಕುಕ್ಕರ್, ಐರನ್ ಬಾಕ್ಸ್ ಹಂಚಿದ್ದಾರೆ ಎಂದು ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಆ ಬಗ್ಗೆ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆರೋಪ ಸಂಬಂಧ ಸ್ಪಷ್ಟನೆ ನೀಡಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, “ವಿಧಾನಸಭೆ ಚುನಾವಣೆ ನೀತಿಸಂಹಿತೆ ಜಾರಿಗೂ ಮುನ್ನವೇ ಕುಕ್ಕರ್ ವಿತರಣೆ ಮಾಡಲಾಗಿತ್ತು. ಅಲ್ಲದೆ, ಜನವರಿ 26ರಂದು ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಅವರ ಹುಟ್ಟುಹಬ್ಬದ ಪ್ರಯಕ್ತ ಅವುಗಳನ್ನು ಹಂಚಿಕೆ ಮಾಡಲಾಗಿತ್ತು” ಎಂದು ಹೇಳಿದ್ದರು. ಇದನ್ನು ನಂಜಪ್ಪ ಕೂಡ ಸಮ್ಮತಿಸಿದ್ದರು.
ಆದರೆ, ಇದೀಗ ಆ ಆರೋಪ ಮತ್ತೆ ಮುನ್ನೆಲೆಗೆ ಬಂಧಿದೆ. ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಚುನಾವಣಾಧಿಕಾರಿ ವಿರುದ್ಧ ದೂರು ನೀಡಲಾಗಿದೆ.
ತಾವು ದೂರು ದಾಖಲಿಸಿರುವ ಬಗ್ಗೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಭೀಮಪ್ಪ ಗಡಾದ್, “ದಾಖಲೆ ಸಮೇತ ದೂರು ನೀಡಿದರೂ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕ್ರಮ ಕೈಗೊಂಡಿಲ್ಲ. ಅವರ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ಆಯೋಗ ಕೂಡ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ನಡೆಸುತ್ತೇನೆ” ಎಂದು ಹೇಳಿದ್ದಾರೆ.
“ಐರನ್ ಬಾಕ್ಸ್, ಕುಕ್ಕರ್ ಹಂಚಿದ್ದರಿಂದ ನಮ್ಮ ತಂದೆ ಗೆದ್ದಿದ್ದರು ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದರು. ಅವರ ಹೇಳಿಕೆಯ ವಿಡಿಯೋ ವೈರಲ್ ಆಗಿದೆ. ಇದು ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆಯಾಗಿದೆ. ಹೀಗಾಗಿ, ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೆವು. ದೂರು ಅರ್ಜಿ ಬಗ್ಗೆ ಕೇಂದ್ರ ಚುನಾವಣೆ ಆಯೋಗದ ಮಾರ್ಗದರ್ಶನ ಕೇಳಿದ್ದೇವೆಂದು ಚುನಾವಣಾಧಿಕಾರಿ ಹೇಳಿದ್ದಾರೆ. ಮಾರ್ಗದರ್ಶನ ಕೋರಿ ಬರೆದ ಪತ್ರದ ನಕಲು ಪ್ರತಿ ನೀಡುವಂತೆ ಡಿಸೆಂಬರ್ 1ರಂದು ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಆದರೆ, ಆ ಪತ್ರದ ಪ್ರತಿ ಇನ್ನೂ ಸ್ವೀಕೃತವಾಗಿಲ್ಲ. ಸ್ವೀಕೃತವಾದ ಬಳಿಕ ಮಾಹಿತಿ ನೀಡುವುದಾಗಿ ಉತ್ತರಿಸಿದ್ದಾರೆ” ಎಂದು ತಿಳಿಸಿದ್ದಾರೆ.