ನಕಲಿ ಪತ್ರದ ಕುರಿತು ಸಮಗ್ರ ತನಿಖೆ ನಡೆಸಿ ಸುಳ್ಳು ಸುದ್ದಿ ಸೃಷ್ಠಿಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಎಸ್‌ಪಿಗೆ ಸಲ್ಲಿಸಿದ ದೂರಿನಲ್ಲಿ, “ಶಾಸಕನಾದ ನನ್ನ ಹೆಸರಿನಲ್ಲಿ ಹಳೆ ಲೆಟರ್ ಹೆಡ್ ಉಪಯೋಗಿಸಿ ಇಲ್ಲಸಲ್ಲದ ವಿಷಯವನ್ನು ಪ್ರಸ್ತಾಪ ಮಾಡಿ ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಿ ಅದರ ರಾಜಕೀಯ ಲಾಭ ಪಡೆಯಲು ಕೆಲವರು ಹುನ್ನಾರ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ನಕಲಿ ಪತ್ರದಲ್ಲಿ ಸಹಿ ಮಾಡಿದ್ದು, ನನ್ನ ಹಸ್ತಾಕ್ಷರದ ಪ್ರತಿಯನ್ನು ಪೇಸ್ಟ್ ಮಾಡಿದ್ದಾರೆ. ಕಳೆದ ಬಾರಿ ನಾನು ಶಾಸಕನಾಗಿದ್ದಾಗ ಕಲಬುರಗಿ ಶಾಂತಿ ನಗರದಲ್ಲಿ ವಾಸವಿದ್ದೆ. ಅದೇ ವಿಳಾಸವಿರುವ ಲೆಟರ್ ಹೆಡ್ ಕಲರ್ ಜೆರಾಕ್ಸ್ ತೆಗೆದು ಸುದ್ದಿ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಾನು ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದು, ಈಗ ಬಳಸುವ ಲೆಟರ್‌ಹೆಡ್‌ನಲ್ಲಿ ಹೊಸ ವಿಳಾಸವಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
“ಜುಲೈ 24ರಂದು ಮುಖ್ಯಮಂತ್ರಿಗೆ ಪತ್ರ ನೀಡಿರುವುದಾಗಿ ದಿನಾಂಕ ನಮೂದಿಸಲಾಗಿದೆ. ಆದರೆ, ನಾನು ಜುಲೈ 23ರಂದು ಬೆಂಗಳೂರಿನಿಂದ ರಾತ್ರಿ ರೈಲಿನಲ್ಲಿ ಹೊರಟು ಜು. 24ರ ಬೆಳಗ್ಗೆ ಕಲಬುರಗಿಗೆ ತಲುಪಿರುತ್ತೆನೆ” ಎಂದು ತಿಳಿಸಿದ್ದಾರೆ.
“ಪತ್ರದಲ್ಲಿ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳೀಯ ಶಾಸಕರು ನಾವಾಗಿದ್ದರೂ ಅನುದಾನಕ್ಕಾಗಿ ಮೂರನೇ ವ್ಯಕ್ತಿಯ ಮೊರೆ ಹೋಗಬೇಕಾಗಿದೆ ಎಂಬ ಆರೋಪ ಹೊರಿಸಿ ಈ ರೀತಿ ಸುಳ್ಳು ಸುದ್ದಿಗಳನ್ನು ಮಾಧ್ಯಮಗಳಲ್ಲಿ ಹರಿಬಿಟ್ಟಿರುವುದು ತನಿಖೆ ಆಗಬೇಕು. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಬಯಲಿಗೆ ಬರಬೇಕು. ಅಂತವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಿಯಾಂಕ್ ಖರ್ಗೆ ಮತ್ತು ನನ್ನ ನಡುವೆ ಮನಸ್ಥಾಪ ಮೂಡಿಸಲು ನಕಲಿ ಪತ್ರ ಸೃಷ್ಟಿ: ಬಿ ಆರ್ ಪಾಟೀಲ್
‘ಬಿಜೆಪಿ ನಕಲಿ ಸೃಷ್ಟಿಯ ಮೊರೆ ಹೋಗಿದೆ‘
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ನಮ್ಮ ಸರ್ಕಾರವನ್ನು ವಿರೋಧಿಸಲು, ಆಪಾದಿಸಲು ಬಿಜೆಪಿಗೆ ಈಗ ವಾಸ್ತವ ವಿಷಯಗಳೇ ಇಲ್ಲದಾಗಿದೆ, ಹಾಗಾಗಿ ನಕಲಿ ಸೃಷ್ಟಿಯ ಮೊರೆ ಹೋಗಿದೆ. ಬಿಜೆಪಿಯ ಫೇಕ್ ಫ್ಯಾಕ್ಟರಿಯಲ್ಲಿ ತಯಾರಾದ ನಕಲಿ ಪತ್ರದ ಕುರಿತು ನಮ್ಮ ಶಾಸಕ ಬಿ ಆರ್ ಪಾಟೀಲ್ ಅವರು ಕಲಬುರಗಿ ಎಸ್‌ಪಿ ಅವರನ್ನು ಭೇಟಿಯಾಗಿ ನಕಲಿ ಪತ್ರದ ಕುರಿತು ಸಮಗ್ರ ತನಿಖೆಯಾಗಬೇಕೆಂದು ದೂರು ಸಲ್ಲಿಸಿದರು” ಎಂದು ತಿಳಿಸಿದೆ.