ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಸಂಬಂಧಿಸಿ ಚರ್ಚೆಯಲ್ಲಿ ಶನಿವಾರ ಲೋಕಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ಶನಿವಾರ (ಫೆಬ್ರವರಿ 10) ಆಡಳಿತ ಪಕ್ಷದ ಸಂಸದರು ಅಯೋಧ್ಯೆಯಲ್ಲಿ ರಾಮ ದೇವರ ಪ್ರತಿಷ್ಠಾಪನೆಗೆ ಸಂಬಂಧಿಸಿ ಚರ್ಚೆಯಲ್ಲಿ ರಾಮಮಂದಿರ ಉದ್ಘಾಟನೆಯನ್ನು ‘ಐತಿಹಾಸಿಕ’ ಎಂದು ಕರೆದಿದ್ದಾರೆ. ಬಿಜೆಪಿ ರಾಮರಾಜ್ಯದ ಸ್ಥಾಪನೆಯ ಬಗ್ಗೆ ಮಾತನಾಡಿದರೆ, ವಿಪಕ್ಷಗಳು ರಾಮರಾಜ್ಯದ ನಿಜವಾದ ಅರ್ಥವೇನು ಎಂದು ಆಡಳಿತ ಪಕ್ಷಕ್ಕೆ ತಿಳಿ ಹೇಳಿವೆ.
ಎಡಪಕ್ಷ ಚರ್ಚೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿಸಲಿಲ್ಲ. “ರಾಜಕೀಯ ಚಿತ್ರಣವನ್ನು ಕೋಮುವಾದಿಯಾಗಿಸುವ ಪ್ರಯತ್ನದಲ್ಲಿ ಭಾಗಿಯಾಗುವುದಿಲ್ಲ” ಎಂದು ತಿಳಿಸುವ ಮೂಲಕ ಎಡಪಕ್ಷಗಳು ಚರ್ಚೆಯಿಂದ ಹೊರಗುಳಿದವು. ತಮಿಳುನಾಡಿನ ಮೀನುಗಾರರ ವಿಚಾರವನ್ನು ಮುಂದಿಟ್ಟು ಡಿಎಂಕೆ ಪ್ರತಿಭಟಿಸುತ್ತಿದ್ದಂತೆ, ಆಡಳಿತ ಪಕ್ಷ ರಾಮಮಂದಿರ ಚರ್ಚೆಯನ್ನು ಆರಂಭಿಸಿತ್ತು.
ಆಡಳಿತ ಮತ್ತು ವಿಪಕ್ಷದ ಸದಸ್ಯರು ರಾಮ ದೇವರನ್ನು ಹೊಗಳುತ್ತಲೇ ಪರಸ್ಪರರ ಮೇಲೆ ವಾಗ್ದಾಳಿ ಮುಂದುವರಿಸಿದರು. ಜನವರಿ 22ರಂದು ರಾಮಮಂದಿರ ಉದ್ಘಾಟನೆಯ ದಿನದಂದು ಅಸ್ಸಾಂ ಸರ್ಕಾರ ರಾಹುಲ್ ಗಾಂಧಿ ಅವರಿಗೆ ಶಂಕರದೇವ ಮಂದಿರಕ್ಕೆ ಭೇಟಿ ನೀಡಲು ಅವಕಾಶ ಕೊಡದಿರುವ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದರೆ, ಬಿಜೆಪಿಯ ಸಂಸದ ನಿಶಿಕಾಂತ್ ದುಬೆ, “ಮೆಕ್ಕಾಗೆ ನಮಗೆ ಪ್ರವೇಶವಿಲ್ಲದಂತೆಯೇ, ಹಿಂದೂಯೇತರರಿಗೆ ಶಂಕರದೇವ ಮಂದಿರಕ್ಕೆ ಪ್ರವೇಶವಿಲ್ಲ” ಎಂದು ಪ್ರತ್ಯುತ್ತರ ನೀಡಿದರು.
ಕಾಂಗ್ರೆಸ್ ರಾಮನನ್ನು ಅಲಕ್ಷಿಸುತ್ತಾ ಬಂದಿರುವುದರಿಂದ ಇಂದಿನ ದುಸ್ಥಿತಿಯಲ್ಲಿದೆ ಎಂದು ಬಿಜೆಪಿ ಸಂಸದರು ಆಕ್ರೋಶ ವ್ಯಕ್ತಪಡಿಸಿದರು. “ರಾಮಮಂದಿರ ನಿರ್ಮಾಣದಿಂದ ರಾಮಭಕ್ತರ ನಿರೀಕ್ಷೆ ಮತ್ತು ಆಶೋತ್ತರಗಳು ಈಡೇರಿವೆ” ಎಂದು ಅಮಿತ್ ಶಾ ಸ್ವಯಂ ಬೆನ್ನು ತಟ್ಟಿಕೊಂಡರು. ಕೆಲವು ಬಿಜೆಪಿ ಸಂಸದರು, “ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ರಾಮಮಂದಿರ ನಿರ್ಮಾಣವಾಗುತ್ತಿರಲಿಲ್ಲ” ಎಂದೂ ಧೂಷಿಸಿದರು.
ಪ್ರಧಾನಿ ಮೋದಿ ರಾಮರಾಜ್ಯದ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ ಎನ್ನುವ ಬಿಜೆಪಿ ಸಂಸದರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ವಿಪಕ್ಷಗಳ ಪರವಾಗಿ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್, “ಮಹಾತ್ಮಾ ಗಾಂಧಿ ಹೇಳಿರುವ ರಾಮರಾಜ್ಯದಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ಯಾರ ವಿರುದ್ಧವೂ ತಾರತಮ್ಯ ತೋರಬಾರದು ಎಂದು ಅಭಿಪ್ರಾಯಪಟ್ಟಿದ್ದರು” ಎನ್ನುವ ಮೂಲಕ ರಾಮರಾಜ್ಯದ ನಿಜವಾದ ಅರ್ಥವನ್ನು ವಿವರಿಸಲು ಪ್ರಯತ್ನಿಸಿದರು.
“ಬಿಜೆಪಿ ನಾಯಕರು ‘ಜೈಶ್ರೀರಾಂ’ ಎನ್ನುವ ಘೋಷಣೆ ಮೂಲಕ ‘ಅನುಭೂತಿ’ ತೋರುವ ಬದಲಾಗಿ ‘ಕಠೋರ ಮತ್ತು ಹಿಂಸಾತ್ಮಕ’ ರೂಪದಲ್ಲಿ ಕೂಗುತ್ತಿದ್ದಾರೆ” ಎಂದು ಅವರು ಟೀಕಿಸಿದರು. “ಭಕ್ತಿ, ನಂಬಿಕೆ ಮತ್ತು ಸೌಹಾರ್ಧಕ್ಕೆ ಹೆಸರಾದ ದೇಶ ನಮ್ಮದು. ಸೇವಾಭಾವದಿಂದ ನಾವು ಸಮಾಜಕ್ಕೆ ಸೇವೆ ಸಲ್ಲಿಸುತ್ತೇವೆ. ಮಾನವತೆ ನಮ್ಮ ದೊಡ್ಡ ಗುರುತು. ನಮ್ಮ ದೇಶದ ಜನರು ಧಾರ್ಮಿಕ ಮನೋಭಾವದಲ್ಲಿ ಬದುಕುತ್ತಾರೆ. ಅವರಿಗೆ ಧರ್ಮ ಎಂದರೆ ಅಳವಡಿಸಿಕೊಂಡು ಅನುಭವಿಸುವುದು. ಮಾನವ ಧರ್ಮ ಸತ್ಯದ ದಾರಿಯಲ್ಲಿ ನಡೆಯುವುದು. ದೇದವರ ದರ್ಶನ ಅಥವಾ ದೇವಿಯ ದರ್ಶನ ನಮಗೆ ಸತ್ಯ ಮತ್ತು ನ್ಯಾಯದ ಹಾದಿಯಲ್ಲಿ ಸಾಗುವಂತೆ ತಿಳಿಸುತ್ತದೆ. ರಾಮ ಎಲ್ಲರಿಗೂ ಸೇರಿದವರು. ಅವರು ನಮ್ಮ ಕಣಕಣದಲ್ಲಿದ್ದಾರೆ. ಸತ್ಯ, ಸೇವೆ, ನ್ಯಾಯ ಮತ್ತು ಅನುಭೂತಿ ನಮ್ಮ ಸಂವಿಧಾನದ ಮೂಲ ಕಲ್ಪನೆಗಳು. ಮಹಾತ್ಮಾ ಗಾಂಧಿ ಎಲ್ಲರೂ ಎಲ್ಲರ ಸಂತೋಷ ಮತ್ತು ಯಾರಿಗೂ ದುಃಖವಿಲ್ಲದ ಆಡಳಿತವನ್ನು ರಾಮರಾಜ್ಯ ಎಂದು ಕರೆದಿದ್ದರು” ಎಂದು ಗೊಗೊಯ್ ಹೇಳಿದರು.
ಚರ್ಚೆಯ ಕೊನೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಸುಧಾರಣೆ, ಕಾರ್ಯಪ್ರದರ್ಶನ ಮತ್ತು ಬದಲಾವಣೆಯ ಐದು ವರ್ಷಗಳು” ಎಂದು ತಮ್ಮ ಆಡಳಿತವನ್ನು ಬಣ್ಣಿದಿಸರು. “ಎಲ್ಲರ ಜೊತೆಗೆ, ಎಲ್ಲರ ವಿಶ್ವಾಸ (ಸಬ್‌ಕಾ ಸಾಥ್, ಸಬ್‌ಕಾ ವಿಶ್ವಾಸ್) ಜೊತೆಗೆ ಮುಂದೆ ಸಾಗುವ ಸಂಕಲ್ಪದ ಜೊತೆಗೆ ಆಡಳಿತ ನಡೆಸಿ ರಾಮ ಮಂದಿರ ನಿರ್ಮಾಣದ ಮೂಲಕ ಇತಿಹಾಸ ಸೃಷ್ಟಿಸಿದ್ದೇವೆ” ಎನ್ನುವ ಇಬ್ಬಗೆಯ ಮಾತನ್ನೂ ಆಡಿದರು.
ರಾಮ ಮಂದಿರ ನಿರ್ಮಾಣದಿಂದ ಸಾಮೂಹಿಕ ಸಂಕಲ್ಪದ ಯೋಜನೆ ಪೂರ್ಣಗೊಂಡಿದೆ ಎಂದೂ ಘೋಷಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮತ್ತು ರಾಮ ದೇವರ ಪ್ರತಿಮೆ ಪ್ರತಿಷ್ಠಾಪನೆ ಕುರಿತ ಚರ್ಚೆಯನ್ನು ಮುಂದಿಡುವ ಮೂಲಕ ಬಿಜೆಪಿ ಶನಿವಾರ (ಫೆಬ್ರವರಿ 10) 17ನೇ ಲೋಕಸಭೆಯ ಕೊನೆಯ ದಿನವನ್ನು ಮುಗಿಸಲು ಮೊದಲೇ ನಿರ್ಧರಿಸಿತ್ತು. ರಾಜ್ಯಸಭೆಯಲ್ಲೂ ಇದೇ ವಿಷಯದ ಬಗ್ಗೆ ಚರ್ಚೆ ನಡೆದಿದೆ. ಹೀಗಾಗಿ, ಕೊನೆಯ ಮೂರು ದಿನಗಳ ಕಾಲ ಸಂಸತ್ ಅಧಿವೇಶನಗಳಲ್ಲಿ ಭಾಗವಹಿಸುವಂತೆ ಬಿಜೆಪಿ ತಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಿತ್ತು. ಚರ್ಚೆಯ ಕೊನೆಯಲ್ಲಿ ಸಂಸತ್ತು ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿ ನಿರ್ಣಯ ಹೊರಡಿಸಲಾಗಿದೆ.