- ‘ಬೆಂಗಳೂರು ಸೇರಿ ಒಂದು ನೂರು ಕಿಮೀ ವ್ಯಾಪ್ತಿಯೊಳಗೆ ಆಡಿಟಿಂಗ್ ಆಗಲಿ’
- ‘ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿ’
ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಒಂದು ನೂರು ಕಿಮೀ ವ್ಯಾಪ್ತಿಯ ಒಳಗಿನ ರೆಸಾರ್ಟ್ ಹಾಗೂ ಅತಿಥಿ ತಂಗುದಾಣಗಳ ಭೂಮಿ ಒತ್ತುವರಿ ಕುರಿತು ಲ್ಯಾಂಡ್ ಆಡಿಟಿಂಗ್ ನಡೆಸಬೇಕು ಎಂದು ಮಾಜಿ ಎಂಎಲ್‌ಸಿ ರಮೇಶ್ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, “ತಂಗುದಾಣಗಳ ಅಕ್ರಮ ಭೂಮಿ ಸ್ವಾಧೀನ ಕುರಿತು ಲ್ಯಾಂಡ್ ಆಡಿಟಿಂಗ್ ಮಾಡಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ರಾಜ್ಯ ಸರ್ಕಾರದ ಸಂಪನ್ಮೂಲ ಕ್ರೋಡೀಕರಣದ ದೃಷ್ಟಿಯಿಂದ ಅವಶ್ಯಕವಾಗಿದ್ದು, ತಾವು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡುವುದರ ಮೂಲಕ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಪತ್ರದಲ್ಲೇನಿದೆ?
ಇತ್ತೀಚಿನ ದಿನಗಳಲ್ಲಿ ಕಂದಾಯ ಭೂಮಿಯ ಬೆಲೆ ಏರಿಕೆಯನ್ನು ನಾವು ಮನಗಂಡಿರುತ್ತೇವೆ. ವಿಶೇಷವಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಭೂಮಿಯ ಬೆಲೆಯು ಬಹಳಷ್ಟು ಏರಿಕೆಯಾಗಿದ್ದು, ಕೆಲವರು ವಾಣಿಜ್ಯ ಉದ್ದೇಶಗಳಿಗೆ ಮತ್ತು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸರ್ಕಾರಿ ಭೂಮಿಗಳನ್ನು ಒತ್ತುವರಿ ಮಾಡುತ್ತಿರುವುದನ್ನು ಮತ್ತು ಅಕ್ರಮ ದಾಖಲೆಗಳನ್ನು ನಿರ್ಮಿಸಿ ಸ್ವಾಧೀನದಲ್ಲಿರುವುದು ಅಂಕಿ ಅಂಶಗಳ ಮೂಲಕ ಬಹಿರಂಗವಾಗಿರುತ್ತದೆ. ಎ.ಟಿ.ರಾಮಸ್ವಾಮಿಯವರ ಸದನ ಸಮಿತಿ, ವಿ.ಬಾಲಸುಬ್ರಮಣ್ಯನ್‍ರವರ ಸಮಿತಿ ನೀಡಿರುವ ವರದಿಗಳಲ್ಲಿ ದಾಖಲೆಯ ಸಮೇತ ಇಂತಹ ಭೂ ಕಬಳಿಕೆ ಪ್ರಕರಣಗಳನ್ನು ಬಹಿರಂಗಪಡಿಸಲಾಗಿದೆ.
ಬೆಂಗಳೂರು ನಗರ ಮತ್ತು ಇದರ ಸುಮಾರು ಒಂದು ನೂರು ಕಿಮೀ ವ್ಯಾಪ್ತಿಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೆಸಾರ್ಟ್‍ಗಳು (ತಂಗುದಾಣಗಳು) ಮತ್ತು ಸ್ಟೇ ಹೋಮ್‍ಗಳು ತಲೆಯೆತ್ತಿವೆ. ವಿಶೇಷವಾಗಿ ಬಹುತೇಕ ಇಂತಹ ತಂಗುದಾಣಗಳು ಸರ್ಕಾರಿ ಕಂದಾಯ ಭೂಮಿಯ ಒತ್ತುವರಿ ಅಥವಾ ಅಕ್ರಮ ದಾಖಲೆಯ ಮೂಲಕ ಸ್ವಾಧೀನವನ್ನು ಹೊಂದಿರುತ್ತವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಸಮಾಧಾನದ ಕಿಡಿ ಜ್ವಾಲೆಯಾಗಿ ಸರ್ಕಾರವನ್ನು ಸುಡದಿರಲಿ
ದಾಖಲೆಗಳಲ್ಲಿ ಇರುವ ವಿಸ್ತೀರ್ಣಕ್ಕೂ ಅವರು ಸ್ವಾಧೀನದಲ್ಲಿರುವ ವಿಸ್ತೀರ್ಣಕ್ಕೂ ಬಹಳಷ್ಟು ವ್ಯತ್ಯಾಸ ಇರುತ್ತದೆ. ರೆವಿನ್ಯೂ ದಾಖಲೆಗಳನ್ನು ತಿದ್ದುವ ಮೂಲಕ ಸರ್ಕಾರಿ ಭೂಮಿಯಲ್ಲಿ ವಿಲಾಸಿ ತಂಗುದಾಣಗಳನ್ನು ಹೊಂದಿರುವ ಮತ್ತು ನಡೆಸುತ್ತಿರುವ ಅನೇಕ ದೂರುಗಳು ಸರ್ಕಾರದಲ್ಲಿ ದಾಖಲಾಗಿರುತ್ತವೆ. ರಾಜ್ಯ ಸರ್ಕಾರವು ಇಂತಹ ಅನುಮಾನಿತ ಮತ್ತು ಆರೋಪಿತ ರೆಸಾರ್ಟ್‍ಗಳ/ ತಂಗುದಾಣಗಳ ಭೂಮಿ ಲೆಕ್ಕ ಪರಿಶೋಧನೆಯನ್ನು (ಲ್ಯಾಂಡ್ ಆಡಿಟಿಂಗ್) ಮಾಡುವುದರ ಮೂಲಕ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿ ಅಂತಹ ಭೂಮಿಯನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಿದರೆ ಸಾವಿರಾರು ಕೋಟಿ ರೂಪಾಯಿಗಳ ಆದಾಯ ಸರ್ಕಾರಕ್ಕೆ ಬರಲಿದೆ.
ಬೆಂಗಳೂರು ನಗರ, ನಗರ ಜಿಲ್ಲೆ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 75 ಸಾವಿರ ಎಕರೆ ಭೂಮಿಯನ್ನು ಒತ್ತುವರಿ ಮಾಡಿರುವ ಮಾಹಿತಿಯು ಲಭ್ಯವಿರುತ್ತದೆ. ಅದೇ ರೀತಿ ಬೆಂಗಳೂರು ಮತ್ತು ಇದರ ಸುತ್ತಮುತ್ತಲಿನ ಬಹುತೇಕ ತಂಗುದಾಣಗಳು ಸುಮಾರು 5 ರಿಂದ 6 ಸಾವಿರ ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಸ್ವಾಧೀನ ಪಡೆದಿರುವ ಮಾಹಿತಿ ಇರುತ್ತದೆ.