ಜಾತಿ ಗಣತಿ ಜೊತೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ: ಸಿದ್ದರಾಮಯ್ಯ ಕೇಂದ್ರಕ್ಕೆ ಮನವಿ

Date:

Advertisements

ಜನ ಗಣತಿ ಜೊತೆಯಲ್ಲಿ ಜಾತಿ ಗಣತಿಯನ್ನೂ ನಡೆಸುವ ಕೇಂದ್ರ ಸರ್ಕಾರದ ತೀರ್ಮಾನವನ್ನು ನಮ್ಮ ಸರ್ಕಾರ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ. ಇದೇ ಸಂದರ್ಭದಲ್ಲಿ ಜಾತಿ ಗಣತಿ ಜೊತೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಬೇಕು ಎಂದು ಕೇಂದ್ರ ಸರ್ಕಾರವನ್ನು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ.

ದೇಶದಲ್ಲಿ ಜಾತಿ‌ ಗಣತಿ ನಡೆಸುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಘೋಷಿಸಿದ ಬೆನ್ನಲ್ಲೇ ಎಕ್ಸ್‌ ತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, “ಕರ್ನಾಟಕದಲ್ಲಿ ನಾವು ಕೇವಲ ಜಾತಿ ಗಣತಿ ನಡೆಸದೆ ಅದರ ಜೊತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ನಡೆಸಿದ್ದೇವೆ. ಈ ದತ್ತಾಂಶಗಳ ಆಧಾರದಲ್ಲಿ ಈಗಿನ ಮೀಸಲಾತಿ ನೀತಿಯನ್ನು ಪರಿಷ್ಕರಿಸಿ ಅದರ ಮಿತಿಯನ್ನು ಹೆಚ್ಚಿಸುವ ಪ್ರಯತ್ನ ಕೂಡಾ ನಡೆದಿದೆ. ಜಾತಿ ಗಣತಿಯ ಜೊತೆಯಲ್ಲಿ ಈ ಪ್ರಕ್ರಿಯೆಯನ್ನು ಕೂಡಾ ಕೇಂದ್ರ ಸರ್ಕಾರ ಪೂರ್ಣಗೊಳಿಸಲಿದೆ ಎಂದು ನಂಬಿದ್ದೇನೆ” ಎಂದಿದ್ದಾರೆ.

“ವೈಜ್ಞಾನಿಕವಾದ ಮೀಸಲಾತಿ ನೀತಿಯನ್ನು ರೂಪಿಸುವುದೇ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೂಲ ಉದ್ದೇಶವಾಗಿದೆ. ಪ್ರತಿ ಬಾರಿ ಮೀಸಲಾತಿಗೆ ಸಂಬಂಧಿಸಿದ ಪ್ರಕರಣಗಳು ವಿಚಾರಣೆಗೆ ಬಂದಾಗೆಲ್ಲ ಸುಪ್ರೀಂಕೋರ್ಟ್ ಇಂತಹದ್ದೊಂದು ಸಮೀಕ್ಷೆ ನಡೆಸುವ ಅಗತ್ಯವನ್ನು ಒತ್ತಿ ಒತ್ತಿ ಹೇಳುತ್ತಾ ಬಂದಿದೆ ಎನ್ನುವುದನ್ನು ಕೇಂದ್ರ ಸರ್ಕಾರ ಗಮನಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

Advertisements

“ನಾನು ಧರ್ಮಸಿಂಗ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಜಾತಿಯ ಜೊತೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿದ್ದೆ. ಕಾರಣಾಂತರಗಳಿಂದ ಅನುಷ್ಠಾನಗೊಳ್ಳದೆ ನೆನೆಗುದಿಗೆ ಬಿದ್ದ ಆ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ಮತ್ತೆ ನಾನು ರಾಜ್ಯದ ಮುಖ್ಯಮಂತ್ರಿ ಆಗಬೇಕಾಯಿತು. ಜಾತಿ ಗಣತಿ ಜೊತೆಯಲ್ಲಿ ಮೀಸಲಾತಿ ಮಿತಿ ಏರಿಕೆಯ ನಿರ್ಧಾರವನ್ನು ಸಂಪೂರ್ಣ ಬೆಂಬಲಿಸಿ ಅದನ್ನು ನಮ್ಮ ಪಕ್ಷದ ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ರೂಪಿಸಿ ದೇಶಾದ್ಯಂತ ಪ್ರಚಾರ ಮಾಡುತ್ತಾ ಬಂದ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಅವರ ಅವಿರತ ಪ್ರಯತ್ನದ ಒತ್ತಡದಿಂದಾಗಿಯೇ ಇಂದು ಪ್ರಧಾನಿ ನರೇಂದ್ರ ಮೋದಿಯವರು ಜಾತಿ ಗಣತಿ ನಡೆಸುವ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನುವುದನ್ನು ಅವರು ಒಪ್ಪಿಕೊಳದೆ ಇರಬಹುದು, ಆದರೆ ದೇಶ ಖಂಡಿತಾ ಒಪ್ಪುತ್ತದೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಜಾತಿಗಣತಿಗೆ ಮೋದಿ ಸರ್ಕಾರ ಒಪ್ಪಿಗೆ; ರಾಹುಲ್ ಗಾಂಧಿ ಹೋರಾಟದ ಫಲ ಎಂದ ನೆಟ್ಟಿಗರು

“ಜಾತಿ ಗಣತಿ ನಡೆಸುವುದರಿಂದ ಜಾತಿ ಸಂಘರ್ಷಗಳು ಹೆಚ್ಚಾಗಿ ಸಮಾಜ ಒಡೆದುಹೋಗುತ್ತದೆ, ಜಾತಿ ಗಣತಿ ಎನ್ನುವುದು ಹಿಂದೂ ಸಮಾಜವನ್ನು ಒಡೆಯುವ ಹುನ್ನಾರ ಎಂದೆಲ್ಲ ವರ್ಷಗಳ ಕಾಲ ಟೀಕಾಪ್ರಹಾರ ಮಾಡುತ್ತಾ ಬಂದ ಭಾರತೀಯ ಜನತಾ ಪಕ್ಷ ಮತ್ತು ಅದರ ನೇತೃತ್ವದ ಸರ್ಕಾರಗಳು ಕೊನೆಗೂ ಜಾತಿ ಗಣತಿಯ ಸಾಮಾಜಿಕ ಮಹತ್ವವನ್ನು ಅರ್ಥಮಾಡಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಎನ್ನುವುದು ವಾಸ್ತವ. ಜಾತಿ ಇಲ್ಲ ಎನ್ನುವುದು ಆತ್ಮವಂಚನೆ. ಜಾತಿ ಎನ್ನುವ ವಾಸ್ತವವನ್ನು ಒಪ್ಪಿಕೊಳ್ಳುವ ಮೂಲಕವೇ ಅದರ ನಾಶಕ್ಕೆ ಪ್ರಯತ್ನಿಸಬೇಕಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಮೂಲಕವೇ ಜಾತಿನಾಶ ಸಾಧ್ಯ ಎಂದು ನಾನು ಬಲವಾಗಿ ನಂಬಿದವನು” ಎಂದು ಹೇಳಿದ್ದಾರೆ.

“ಕರ್ನಾಟಕದಲ್ಲಿ ನಾವು ನಡೆಸಿದ್ದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸಿದ್ಧ ಇದೆ. ಇದನ್ನು ಬಿಜೆಪಿಯ ರಾಜ್ಯ ಘಟಕ ನಾನಾ ಸಬೂಬುಗಳನ್ನು ಮುಂದೊಡ್ಡಿ ವಿರೋಧಿಸುತ್ತಿದೆ. ಈ ಸಮೀಕ್ಷೆಯನ್ನು ಆಧಾರವಾಗಿಟ್ಟುಕೊಂಡು ಮೀಸಲಾತಿಯನ್ನು ಪರಿಷ್ಕರಿಸಿ ಈಗಿನ ಶೇ.50ರ ಮಿತಿಯನ್ನು ಹೆಚ್ಚಿಸುವ ಪ್ರಯತ್ನ ಕೂಡಾ ನಡೆದಿದೆ. ಈ ಎಲ್ಲ ಪ್ರಯತ್ನಗಳಿಗೆ ಅಡ್ಡಗಾಲು ಹಾಕುತ್ತಿರುವ ಬಿಜೆಪಿಯ ರಾಜ್ಯಘಟಕದ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಿವಿ ಹಿಂಡಿ ಬುದ್ದಿ ಹೇಳಬೇಕು” ಎಂದು ಆಗ್ರಹಿಸಿದ್ದಾರೆ.

“ನಮ್ಮ ಪಕ್ಷದ ಪಂಚ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ ಕೊನೆಗೆ ಅದನ್ನು ತಮ್ಮ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿಕೊಂಡ ರೀತಿಯಲ್ಲಿಯೇ ಇದೀಗ ನಮ್ಮ ಜಾತಿಗಣತಿ ಕಾರ್ಯಕ್ರಮವನ್ನು ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೈಗೆತ್ತಿಕೊಂಡಿರುವುದು ಕಾಂಗ್ರೆಸ್ ಪಕ್ಷದ ನೀತಿ ಮತ್ತು ಕಾರ್ಯಕ್ರಮಗಳು ಜನಪರವಾಗಿರುವುದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕ ಸರ್ಕಾರ ನಡೆಸಿರುವ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಒಂದು ಪರಿಪೂರ್ಣ ಮಾದರಿಯಾಗಿದ್ದು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಸಲಹೆ-ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ಧ ಇದೆ” ಎಂದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X