ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ದೇಶದಾದ್ಯಂತ ಇಂದು (ಮಂಗಳವಾರ- ಡಿಸೆಂಬರ್ 24) ‘ಅಂಬೇಡ್ಕರ್ ಸಮ್ಮಾನ್ ಮಾರ್ಚ್’ ನಡೆಸಲಿದೆ. ಎಲ್ಲಾ ಜಿಲ್ಲೆಗಳಲ್ಲಿ ಮಾರ್ಚ್ ನಡೆಯಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಲ್ ಕಳೆದ ಭಾನುವಾರ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದ ಕೇಂದ್ರ ಸಚಿವ ಅಮಿತ್ ಶಾ, “ಇತ್ತೀಚೆಗೆ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್…. ಎನ್ನುವುದು ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ನಾಮ ಜಪಿಸಿದ್ದರೆ ಸ್ವರ್ಗಕ್ಕಾದರೂ ಹೋಗುತ್ತಿದ್ದಿರಿ” ಎಂದು ಹೇಳಿದ್ದರು. ಈ ಹೇಳಿಕೆಯನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿದೆ. ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ಮದ್ದೂರು | ಅಮಿತ್ ಶಾ ರಾಜೀನಾಮೆ ನೀಡಿ ಜನರ ಕ್ಷಮೆಯಾಚಿಸಬೇಕು: ಜನ ಸಂಘಟನೆಗಳ ಆಗ್ರಹ
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ವೇಣುಗೋಪಾಲ್, “ಶಾ ರಾಜೀನಾಮೆ ಕೋರಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಲಾಗುವುದು” ಎಂದು ತಿಳಿಸಿದ್ದರು. “ಶಾ ಅವರ ಹೇಳಿಕೆಗಳು ಅಂಬೇಡ್ಕರ್ ಅವರನ್ನು ಕೀಳಾಗಿಸಿವೆ, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವವರಿಗೆ ತೀವ್ರ ನೋವುಂಟು ಮಾಡಿದೆ” ಎಂದು ಹೇಳಿದರು.
“ಹೇಳಿಕೆಗೆ ಇಷ್ಟು ವಿರೋಧ ವ್ಯಕ್ತವಾದರೂ ಕೂಡಾ ಶಾ ಆಗಲಿ, ಪ್ರಧಾನಿಯಾಗಲಿ ಅಥವಾ ಬಿಜೆಪಿಯಾಗಲಿ ವಿಷಾದ ವ್ಯಕ್ತಪಡಿಸಿಲ್ಲ. ಬದಲಾಗಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಅಂಬೇಡ್ಕರ್ ಅವರ ಚಿತ್ರವನ್ನು ಜಾರ್ಜ್ ಸೊರೊಸ್ ಅವರ ಚಿತ್ರವನ್ನಾಗಿ ಬದಲಾಯಿಸಿ ಅಂಬೇಡ್ಕರ್ ಅವರನ್ನು ಮತ್ತಷ್ಟು ಅಗೌರವಿಸಿದ್ದಾರೆ” ಎಂದು ತಿಳಿಸಿದರು.
