ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಕುರಿತು ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ಕುರಿತು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಮೋದಿಯನ್ನು ಹೊಣೆ ಮಾಡಿದರೂ ಜೋಶಿ, ಸಂತೋಷರನ್ನು ಹೊಣೆ ಮಾಡುವ ಧೈರ್ಯ ಬಿಜೆಪಿಗರಿಗಿಲ್ಲ ಏಕೆ ಎಂದು ಪ್ರಶ್ನಿಸಿದೆ.
ವಲಸಿಗರಿಂದಲೇ ಬಿಜೆಪಿ ಈ ಬಾರಿ ಸೋಲು ಅನುಭವಿಸಿತ್ತು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನೀಡಿದ್ದ ಹೇಳಿಕೆ, ಬಿಜೆಪಿಯ ಆಂತರಿಕ ಚರ್ಚೆಗೆ ಕಾರಣವಾಗಿತ್ತು. ಈ ಹೇಳಿಕೆಗೆ ಎಂ ಪಿ ರೇಣುಕಾಚಾರ್ಯ ಕೂಡ ದನಿಗೂಡಿಸಿ, ಡಾ. ಕೆ ಸುಧಾಕರ್ ವಿರುದ್ಧ ಹರಿಹಾಯ್ದಿದ್ದರು. ಮುಂದುವರಿದು ‘ಪ್ರಧಾನಿ ಮೋದಿಯನ್ನು ಬೀದಿಬೀದಿ ಸುತ್ತಿಸಿದ್ದೇ ಬಿಜೆಪಿ ಸೋಲಿಗೆ ಕಾರಣ’ ಎಂದು ಹೇಳಿದ್ದರು
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಬಿಜೆಪಿಯ ಹೀನಾಯ ಸೋಲಿಗೆ ಮೋದಿಯೇ ಕಾರಣ ಎಂಬ ವಾಸ್ತವ ಸತ್ಯ ಒಪ್ಪಿಕೊಳ್ಳುವಲ್ಲಿಗೆ ಆತ್ಮಾವಲೋಕನ ಬಂದಿದೆ. ಗೆಲುವಿಗಷ್ಟೇ ಅಲ್ಲ, ಸೋಲಿಗೂ ಮೋದಿಯೇ ಕಾರಣ ಎಂಬ ಸತ್ಯ ಒಪ್ಪಿಕೊಂಡಿದ್ದಕ್ಕೆ ಕರ್ನಾಟಕ ಬಿಜೆಪಿಯನ್ನು ಅಭಿನಂದಿಸಲೇಬೇಕು. ಮೋದಿಯನ್ನು ಹೊಣೆ ಮಾಡಿದರೂ ಜೋಶಿ, ಸಂತೋಷರನ್ನು ಹೊಣೆ ಮಾಡುವ ಧೈರ್ಯ ಬಿಜೆಪಿಗರಿಗಿಲ್ಲ ಏಕೆ?” ಎಂದು ಕುಟುಕಿದೆ.
“ವಲಸಿಗರಿಂದಲೇ ಬಿಜೆಪಿ ಸೋತಿತು ಎನ್ನುವವರ ಕೂಗಿಗೆ ಈಶ್ವರಪ್ಪನವರ ನಂತರ ರೇಣುಕಾಚಾರ್ಯ ಕೂಡ ದನಿಗೂಡಿಸಿದ್ದಾರೆ. ಪ್ರಣಾಳಿಕೆಯ ಹೊಣೆಯನ್ನು ವಲಸಿಗ ಸುಧಾಕರ್ ಅವರಿಗೆ ಹೊರಿಸಿದ್ದು, ಮತ್ತೊಂದು ಬಣಕ್ಕೆ ಅಸಹನೆ ತರಿಸಿದೆ. ವಲಸಿಗರ ಭವಿಷ್ಯ ಮುಗಿಸಲು ಬಿಜೆಪಿಯಲ್ಲೇ ದೊಡ್ಡ ಪಡೆ ಹೊಂಚು ಹಾಕಿದೆ, ಯಶಸ್ವಿಯೂ ಆಗಿದೆ. ಚುನಾವಣೆಗೂ ಮುಂಚೆ ಕರ್ನಾಟಕ ಬಿಜೆಪಿ ಸ್ಥಿತಿ ಮನೆಯೊಂದು ಮುನ್ನೂರು ಬಾಗಿಲಾಗಿತ್ತು, ಚುನಾವಣೆ ನಂತರ ಮೂರು ಸಾವಿರ ಬಾಗಿಲಾಗಿದೆ” ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಸುದ್ದಿ ಓದಿದ್ದೀರಾ? ವಿದ್ಯಾರ್ಥಿನಿ ಬರೆದ ಸಾಮಾಜಿಕ ಕಳಕಳಿ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ