ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಕರ್ನಾಟಕದಲ್ಲಿ ಮದ್ಯದಂಗಡಿ ಮಾಲೀಕರಿಂದ 700 ಕೋಟಿ ರೂ. ಸಂಗ್ರಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ಅಕೋಲಾದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪರ ಚುನಾವಣಾ ಪ್ರಚಾರವನ್ನು ನಡೆಸಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮೇಲೆ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
“ಮಹಾರಾಷ್ಟ್ರ ಚುನಾವಣೆ ನೆಪದಲ್ಲಿ ಕರ್ನಾಟಕದಲ್ಲಿ ವಸೂಲಿ ಹೆಚ್ಚಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಕಾಂಗ್ರೆಸ್ ಕರ್ನಾಟಕದ ಮದ್ಯದಂಗಡಿ ಮಾಲೀಕರಿಂದ 700 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಎಂಬ ಆರೋಪವಿದೆ” ಎಂದು ಹೇಳಿದ್ದಾರೆ.
“ಚುನಾವಣೆ ಇರುವುದು ಮಹಾರಾಷ್ಟ್ರದಲ್ಲಿ, ಆದರೆ ವಸೂಲಿ ದುಪ್ಪಟ್ಟಾಗಿರುವುದು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಮತ್ತು ತೆಲಂಗಾಣದಲ್ಲಿ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್ ನಾಯಕರಿಂದ ವಕ್ಫ್ ಆಸ್ತಿ ಲೂಟಿ, ಹೀಗಾಗಿ ಆಸ್ತಿ ಸಂರಕ್ಷಿಸುತ್ತೇವೆ ಎಂದಿದ್ದೆವು: ಪ್ರಲ್ಹಾದ್ ಜೋಶಿ
“ಕಾಂಗ್ರೆಸ್ ಎಲ್ಲೇ ಸರ್ಕಾರ ರಚಿಸಿದರೂ ಕೂಡಾ ಆ ರಾಜ್ಯವು ಕಾಂಗ್ರೆಸ್‌ನ ಶಾಹಿ ಪರಿವಾರ (ರಾಜವಂಶ) ಎಟಿಎಂ ಆಗುತ್ತದೆ. ಇತ್ತೀಚೆಗೆ ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಕಾಂಗ್ರೆಸ್‌ನ ಈ ರಾಜವಂಶದ ಎಟಿಎಂಗಳಾಗಿವೆ” ಎಂದು ಗಾಂಧಿ ಕುಟುಂಬದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಇನ್ನು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಮಿತ್ರ ಪಕ್ಷಗಳಾದ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ವಿರುದ್ಧವೂ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.
“ಮಹಾ ಅಘಾಡಿ ಎಂದರೆ ಭ್ರಷ್ಟಾಚಾರ, ಬಹುಕೋಟಿ ಹಗರಣ, ಸುಲಿಗೆ ಮತ್ತು ಟೋಕನ್ ಹಣ ಎಂದು ಇಡೀ ದೇಶಕ್ಕೆ ತಿಳಿದಿದೆ” ಎಂದು ಟೀಕಿಸಿದರು.
