ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಮಾಜಿ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಅವರ ವ್ಯಕ್ತಿತ್ವಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸಿದ್ದಾರೆ. ಆದ್ದರಿಂದ ಸುಳ್ಳು ಹೇಳಿಕೆ ನೀಡಿರುವ ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಪೊಲೀಸ್ ದೂರು ನೀಡಿದ್ದಾರೆ.
ಯತ್ನಾಳ್ ಮಹಾತ್ಮ ಗಾಂಧಿಯವರ ಹತ್ಯೆಗೆ ಮಾಜಿ ಪ್ರಧಾನಿ ನೆಹರೂ ಕಾರಣ ಎಂದು ಅಪಪ್ರಚಾರದ ಮತ್ತು ಸುಳ್ಳು ಹೇಳಿಕೆ ನೀಡಿ ನೆಹರು ಅವರ ವ್ಯಕ್ತಿತ್ವಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡಿದ್ದಾರೆ. ಪ್ರತೀ ಬಾರಿಯೂ ಅವರು ರಾಜ್ಯದ ಜನತೆಗೆ ತಪ್ಪು ಸಂದೇಶಗಳನ್ನು ರವಾನಿಸಿ ಸುಳ್ಳು ಪ್ರಚಾರ ಮಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸುತ್ತಿದ್ದಾರೆ ಎಂದು ನಗರದ ಹೈಗ್ರೌಂಡ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಮನೋಹರ್ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಸಿಯುತ್ತಿರುವ ಸಾಮ್ರಾಜ್ಯದ ಹೊಸ ಅಧಿಪತಿ ಡೊನಾಲ್ಡ್ ಟ್ರಂಪ್
ಇತ್ತೀಚೆಗೆ ಮಹಾತ್ಮ ಗಾಂಧಿಯವರನ್ನು ಕೊಂದಿದ್ದು ಗೋಡ್ಸೆ ಎಂಬ ವಿಷಯದ ಕುರಿತು ಹೇಳಿಕೆ ನೀಡಿರುವ ಯತ್ನಾಳ್, ಗಾಂಧಿಯ ದೇಹದಲ್ಲಿ ಒಂದು ಗುಂಡು ಗೋಡ್ಸೆ ಹೊಡೆದಿದ್ದು ಎಂದು ಸಾಬೀತಾಗಿದೆ. ಇನ್ನೆರಡು ಗೋಲಿಯನ್ನು (ಗುಂಡುಗಳನ್ನು) ನೆಹರೂ ಹೊಡೆಸಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ನೆಹರೂ ಸರ್ವಾಧಿಕಾರಿ ಆಗಬೇಕೆಂದು ಮಹಾತ್ಮ ಗಾಂಧಿಯವರನ್ನು ಕೊಲ್ಲಿಸಿದರು ಎಂದು ಹೇಳಿರುವ ಯತ್ನಾಳ್ ಅವರ ಆಧಾರಹಿತ ಹೇಳಿಕೆ ದೇಶದ ಹಾಗೂ ರಾಜ್ಯದ ಜನರಲ್ಲಿ ತಪ್ಪು ಕಲ್ಪನೆ ಉಂಟಾಗುತ್ತಿದೆ. ಆದ್ದರಿಂದ ದೇಶಕ್ಕಾಗಿ ಹೋರಾಡಿ ಜೈಲುವಾಸ ಅನುಭವಿಸಿದ್ದ ಮಾಜಿ ಪ್ರಧಾನಿ ನೆಹರೂ ಬಗ್ಗೆ ಅಪಪ್ರಚಾರ ಮಾಡಿರುವ ಹಾಗೂ ಮಹಾತ್ಮ ಗಾಂಧಿಯವರ ಸಾವಿನ ಬಗ್ಗೆ ಸುಳ್ಳು ಅಪಪ್ರಚಾರ ಮಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಕೂಡಲೇ ಬಂಧಿಸಬೇಕು, ಇಂತಹ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವ ಅವರ ವಿರುದ್ಧ ಕಠಿಣ ಕಾನೂನು ಕೈಗೊಳ್ಳಬೇಕು ಎಂದು ಪೊಲೀಸ್ ದೂರಿನಲ್ಲಿ ಮನೋಹರ್ ಒತ್ತಾಯಿಸಿದ್ದಾರೆ.
