ಹಾಸನ ಜಿಲ್ಲೆಯಲ್ಲಿ ಮುಗ್ಧ ಮಹಿಳೆಯರ ಮೇಲೆ ಮಾನಸಿಕವಾಗಿ ಚಿತ್ರಹಿಂಸೆ ನೀಡಿ ಮಹಿಳೆಯರನ್ನು ಮಹಿಳೆಯರ ಹಕ್ಕುಗಳ ಕಗ್ಗೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ಹಾಸನದ ಜೆಡಿಎಸ್ ಪಕ್ಷದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಮನೋಹರ್ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹಾಸನ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯರನ್ನು ಬೆತ್ತಲೆಗೊಳಿಸಿರುವ ಎಲ್ಲಾ ವಿಡಿಯೋ ಚಿತ್ರಣಗಳು ರಾಜ್ಯದ ಎಲ್ಲಾ ಕಡೆ ಹರಿದಾಡುತ್ತಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ದ ಕೂಡಲೇ ಅತ್ಯಂತ ಕಠಿಣ ಕ್ರಮ ಕೈಗೊಂಡು ಮಹಿಳೆಯರನ್ನು ರಕ್ಷಿಸಬೇಕು ಎಂದು ದೂರನ್ನು ಸಲ್ಲಿಸಲಾಗಿದೆ.
ಇದನ್ನು ಓದಿದ್ದೀರಾ? ಪೆನ್‌ಡ್ರೈವ್ ಕೇಸು| ಮಹತ್ವದ ತಿರುವು: ಬಿಜೆಪಿ ನಾಯಕನ ವಿರುದ್ಧ ಎಚ್‌ಡಿಕೆ ಆರೋಪ
ಈಗಾಗಲೇ ಕರ್ನಾಟಕ ರಾಜ್ಯ ಹಾಗೂ ದೇಶದ ಎಲ್ಲಾ ಭಾಗದಲ್ಲೂ ಹಾಸನದ ಮಹಿಳೆಯರ ಬೆತ್ತಲೆ ಪ್ರಕರಣ ಬಹಿರಂಗವಾಗಿದೆ. ಇದರ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಹಿಳಾ ಆಯೋಗವು ಸಹ ದೂರನ್ನು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದೆ. ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ಕಾನೂನು ಕ್ರಮಕ್ಕೆ ಮುಂದಾಗಿದೆ. ಆದರೆ ಮಾನವ ಹಕ್ಕು ಉಲ್ಲಂಘನೆ ಬಹಿರಂಗವಾದರೂ ಸಹ ಇಲ್ಲಿಯವರೆಗೂ ಯಾವುದೇ ರೀತಿಯ ಕಾನೂನಾತ್ಮಕ ಕ್ರಮ ಕೈಗೊಳ್ಳದೆ ಇರುವುದು ಅತ್ಯಂತ ದುರದೃಷ್ಟಕರ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಾಗೆಯೇ ಕೂಡಲೇ ರಾಜ್ಯ ಮಾನವ ಹಕ್ಕು ಆಯೋಗದ ತಂಡ ಹಾಸನಕ್ಕೆ ಭೇಟಿ ನೀಡಿ ನಡೆದಿರುವ ಅನ್ಯಾಯದ ಬಗ್ಗೆ ಮಾನವ ಹಕ್ಕು ಉಲ್ಲಂಘನೆ ಆಗಿರುವ ಬಗ್ಗೆ ತನಿಖೆ ನಡೆಸಬೇಕು. ಯಾರು ಮುಗ್ಧ ಮಹಿಳೆಯರನ್ನು ದುರುಪಯೋಗಪಡಿಸಿಕೊಂಡು ಲೈಂಗಿಕವಾಗಿ ಚಿತ್ರಹಿಂಸೆ ನೀಡಿದ್ದಾರೋ ಆ ಅರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಇದನ್ನು ಓದಿದ್ದೀರಾ? ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡು ಹೋಗಲು ಬಿಜೆಪಿ ಸರ್ಕಾರ ಮತ್ತು ಮೋದಿಯವರೇ ನೇರ ಕಾರಣ | ಪುಷ್ಪಾ ಅಮರನಾಥ್
ಇನ್ನು ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಮನೋಹರ್, “ಕೋಮುವಾದವನ್ನು ವಿರೋಧಿಸುತ್ತಿದ್ದ ದೇವೇಗೌಡರು, ಯಾವ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಪ್ರಜ್ವಲ್ ರೇವಣ್ಣನನ್ನು ರಕ್ಷಿಸಲೆಂದೇ ಜನತಾದಳ ಬಿಜೆಪಿಯೊಂದಿಗೆ ಕೈ ಜೋಡಿಸಿದೆ” ಎಂದು ಆರೋಪಿಸಿದರು.
“ತಮ್ಮ ಕುಟುಂಬದ ರಕ್ಷಣೆಗಾಗಿ ದೇವೇಗೌಡರು ಈ ರೀತಿ ಮೈತ್ರ ಮಾಡಿಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಕೇಂದ್ರ ಸರಕಾರವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಲು ಮುಖ್ಯ ಕಾರಣ. ಪ್ರಜ್ವಲ್ ಇಂತಹ ಕೆಟ್ಟ ಕೆಲಸ ಮಾಡಿರುವುದು ಮೊದಲೇ ಇವರೆಲ್ಲರಿಗೂ ತಿಳಿದಿತ್ತು” ಎಂದು ವಿ.ಮನೋಹರ್ ದೂರಿದ್ದಾರೆ.