ಬಿಜೆಪಿ ಅವಧಿಯಲ್ಲಿ ನಡೆದಿರುವ ಅಕ್ರಮಗಳ ಪೈಕಿ ನಿರ್ದಿಷ್ಟ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಬಿಜೆಪಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತ ಎಸ್ಐಟಿ ತನಿಖೆ ವಿಚಾರವಾಗಿ ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, “ನಿರ್ದಿಷ್ಟ ಪ್ರಕರಣಗಳಲ್ಲಿ ತನಿಖೆ ಮಾಡಿಯೇ ಮಾಡ್ತೀವಿ. ಕೇಸ್ ಬೈ ಕೇಸ್ ಮಾಹಿತಿ ಪಡೆದು ತನಿಖೆ ಮಾಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ” ಎಂದು ಹೇಳಿದರು.
“ಸಿಎಂ, ಡಿಸಿಎಂ ಕೂಡ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಭರವಸೆ ನೀಡಿದ್ದಾರೆ. ಸಾರಾಸಗಟಾಗಿ ಎಲ್ಲ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸ್ತೀವಿ ಅಂತಲ್ಲ. ನಿರ್ದಿಷ್ಟ ಪ್ರಕರಣಗಳಲ್ಲಿ ಎಲ್ಲಿ ಲೋಪದೋಷಗಳಾಗಿವೆ ಅವನ್ನು ತನಿಖೆಗೆ ಒಳಪಡಿಸ್ತೀವಿ” ಎಂದು ಸ್ಪಷ್ಟನೆ ನೀಡಿದರು.
“ಯಾವ ಇಲಾಖೆಯಲ್ಲಿ ಅಕ್ರಮವಾಗಿದೆ ಎಂದು ನಿರ್ದಿಷ್ಟ ಪ್ರಕರಣಗಳ ಮಾಹಿತಿ ಪಡೆಯುತ್ತೇವೆ. ಬಳಿಕ ತನಿಖೆಯ ಬಗ್ಗೆ ನಿರ್ಧಾರ ಮಾಡುತ್ತೇವೆ” ಎಂದು ತಿಳಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಬುಧವಾರರಿಂದ ಬಿಜೆಪಿ ಅನ್ನಭಾಗ್ಯ ಯೋಜನೆ ಜಾರಿಗೆ ಆಗ್ರಹಿಸಿ ಅಭಿಯಾನ ನಡೆಸುತ್ತಿರುವ ವಿಚಾರವಾಗಿ ಮಾತನಾಡಿ, “ಅಧಿಕಾರ ಇದ್ದಾಗ ಬಡವರಿಗೆ ಬಿಜೆಪಿ ಒಂದೇ ಒಂದು ಸಹಾಯ ಮಾಡಲಿಲ್ಲ. ತಿಗಣೆಯಂತೆ ಬಡವರ ರಕ್ತ ಹೀರಿದವರು ಬಿಜೆಪಿಯವರು. ಈಗ ನಾವು ಬಡವರಿಗೆ ಸಹಾಯ ಮಾಡುವುದಕ್ಕೆ ಹೊರಟಾಗ ಅಡ್ಡಿಪಡಿಸ್ತಿದ್ದಾರೆ” ಎಂದು ಕಿಡಿ ಕಾರಿದರು.
ಈ ಸುದ್ದಿ ಓದಿದ್ದೀರಾ? ಹಾಸನ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಹೊಂದಾಣಿಕೆ ರಾಜಕಾರಣದಿಂದ ನಾವು ಸೋತೆವು: ಡಿ ವಿ ಸದಾನಂದಗೌಡ
ಇನ್ನು ಇದೇ ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ”ಬಿಜೆಪಿ ಕಾಲದ ಹಗರಣಗಳ ಬಗ್ಗೆ ಹಿಂದಿನ ಸಚಿವ ಸಂಪುಟದಲ್ಲಿ ಚರ್ಚೆ ಆಗಿತ್ತು. ನಾವು ವಿರೋಧ ಪಕ್ಷದಲ್ಲಿ ಇದ್ದಾಗ ಯಾವೆಲ್ಲ ಹಗರಣಗಳು ತನಿಖೆ ಮಾಡ್ತೇವೆ ಎಂದು ಹೇಳಿದ್ದೆವೊ ಆ ಎಲ್ಲ ಹಗರಣಗಳನ್ನು ಎಸ್.ಐ.ಟಿ ಮೂಲಕ ತನಿಖೆ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಅದರ ಬಗ್ಗೆ ತೀರ್ಮಾನ ಮಾಡುತ್ತಾರೆ” ಎಂದು ಹೇಳಿದರು.