ಕಾಂಗ್ರೆಸ್ ನೇತೃತ್ವದ ಈ ಸರ್ಕಾರಕ್ಕೆ ಮೂರೇ ತಿಂಗಳು ಭವಿಷ್ಯ. ಮೂರು ತಿಂಗಳಲ್ಲಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಸರ್ಕಾರವು ಷರತ್ತು ವಿಧಿಸಿ, ಜನರಿಗೆ ಮೋಸ ಎಸಗುತ್ತಿದೆ. ಯಾವುದೇ ಷರತ್ತುಗಳಿಲ್ಲದೆ ಗ್ಯಾರಂಟಿ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಮಂಗಳವಾರ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಕರ್ನಾಟಕದ ಅಜಿತ್ ಪವಾರ್‌ಗೆ ಮೋಸವಾಗಿದೆ. ಈಗಿನ ಮುಖ್ಯಮಂತ್ರಿ ಜನರಿಗೆ ಮಾತ್ರವಲ್ಲದೇ ತನಗೂ ವಂಚಿಸಿದ್ದಾರೆ ಎಂದು ಆ ಪವಾರ್‌ಗೆ ಈಗ ಗೊತ್ತಾಗಿದೆ. ಹೀಗಾಗಿ ಸರ್ಕಾರಕ್ಕೆ ಭವಿಷ್ಯವಿಲ್ಲ. ಮಹಾರಾಷ್ಟ್ರದಲ್ಲಿ ನಡೆದಂತೆ ರಾಜ್ಯದಲ್ಲೂ ಬದಲಾವಣೆ ಆಗಲಿದೆ” ಎಂದರು.
ರಾಜ್ಯದಲ್ಲಿ ಜನರಿಗೆ ಚುನಾವಣಾ ಪೂರ್ವದಲ್ಲಿ ಕೊಟ್ಟ ನಿಮ್ಮ ಗ್ಯಾರಂಟಿಗಳಿಂದಾಗಿ ಯಾಕಾದರೂ ಈ ಕಾಂಗ್ರೆಸ್‌ಗೆ ಮತ ನೀಡಿದೆವೋ ಎಂದು ರಾಜ್ಯದ ಜನರು ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕದ ನಿರುದ್ಯೋಗಿ ಪದವೀಧರರಿಗೆ ಕಾಂಗ್ರೆಸ್ ಮಾಡಿದ ಮೋಸವನ್ನು ಇಡೀ ದೇಶದ ಯುವಕರು ನೋಡುತ್ತಿದ್ದಾರೆ. ಉದ್ಯೋಗ ಸಿಗುವ ವರೆಗೂ ಕಾಂಗ್ರೆಸ್ ನೆರವು ನೀಡಲಿದೆಯೇನೋ ಎನ್ನುವ ರೀತಿಯಲ್ಲಿ ಗೌರವ ಪೂರ್ವಕವಾಗಿ ನೋಡಲಾಗುತ್ತಿತ್ತು. ಆದರೆ, ನಾವು ಎಲ್ಲ ನಿರುದ್ಯೋಗಿ ಪದವೀಧರರಿಗೆ ಪ್ರೋತ್ಸಾಹಧನ ನೀಡುವುದಿಲ್ಲ, 2022-23ರಲ್ಲಿ ಪಾಸಾಗಿರಬೇಕು. ಆರು ತಿಂಗಳು ನಿರುದ್ಯೋಗಿಗಳಾಗಿರಬೇಕು ಎಂದು ಷರತ್ತು ವಿಧಿಸಿದ್ದಾರೆ. ಹಾಗಾದರೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಮತ ನೀಡಿದವರ ಕತೆ ಏನು” ಎಂದು ಪ್ರಶ್ನಿಸಿದರು.
ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಪ್ರಕಾರ ಜುಲೈ 7 ರಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಂಡನೆ ಮಾಡುವ ಬಜೆಟ್‌ನಲ್ಲಿ ನಿರುದ್ಯೋಗಿ ಪದವೀಧರರಿಗೆ ಪರಿಹಾರವನ್ನು ನೀಡಬೇಕು. ಇಲ್ಲದಿದ್ದರೆ ನಿರುದ್ಯೋಗಿ ಪದವೀಧರರನ್ನು ಸಂಘಟಿಸಿ, ಬಿಜೆಪಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಅಧಿಕಾರಕ್ಕೆ ವಯಸ್ಸಾಗಿತ್ತೇ, ಪ್ರತಿಭಟನೆಗೆ ಹರೆಯವೇ: ಬಿಎಸ್‌ವೈ ಬಳಕೆ ಕುರಿತು ಬಿಜೆಪಿ ಲೇವಡಿ ಮಾಡಿದ ಕಾಂಗ್ರೆಸ್
ಬಡವರ ಮೂಗಿದೆ ತುಪ್ಪ ಸವರಿ ಅಧಿಕಾರಕ್ಕೆ ಬಂದ ಕಾಂಗ್ರೆಸ್: ಎನ್ ಮಹೇಶ್
ಮಾಜಿ ಸಚಿವ ಎನ್ ಮಹೇಶ್ ಮಾತನಾಡಿ, “ಕಳೆದ 75 ವರ್ಷಗಳಲ್ಲಿ 60 ವರ್ಷ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಹೇಗೆ ಬಡವರ ಮೂಗಿಗೆ ತುಪ್ಪ ಸವರಿ ಅಧಿಕಾರಕ್ಕೆ ಬಂದ್ರೋ, ಹಾಗೇ ಹಿಂದಿನ 60 ವರ್ಷದಲ್ಲಿಯೂ ಕಾಂಗ್ರೆಸ್ ಮಾಡಿದೆ. ಬಡವರನ್ನು ಬಡವರಾಗಿಯೇ ಇಟ್ಟು, ಬಡತನದ ಹೆಸರಿನಲ್ಲಿ ಮತಗಳಿಕೆ ಮಾಡುವ ಕೆಲಸ ಮಾಡಿದ್ದಾರೆ. ಜೊತೆಗೆ ಸುಳ್ಳು ಹೇಳುವುದೇ ಇವರ ರೀತಿ ನೀತಿ” ಎಂದು ವಾಗ್ದಾಳಿ ನಡೆಸಿದರು.