- ಕನ್ನಡಿಗರ ಅಸ್ಮಿತೆ ಮುಂದಿಟ್ಟುಕೊಂಡು ಒಣ ರಾಜಕೀಯ ಮಾಡಿದ್ದ ಕಾಂಗ್ರೆಸ್
- I.N.D.I.A ಮೈತ್ರಿಕೂಟ ಉಳಿಸಿಕೊಳ್ಳಲು ರಾಜ್ಯ ಸರ್ಕಾರ ನೀರು ಬಿಟ್ಟಿದೆ
ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟು ಕನ್ನಡಿಗರ ಮಾನವನ್ನು ಕಾಂಗ್ರೆಸ್ ಸರ್ಕಾರ ಹರಾಜು ಹಾಕಿದೆ. ಚುನಾವಣೆಗೂ ಮುನ್ನ ಕನ್ನಡಿಗರ ಅಸ್ಮಿತೆಯನ್ನು ಮುಂದೆ ಇಟ್ಟುಕೊಂಡು ಒಣ ರಾಜಕೀಯ ಮಾಡಿದ್ದ ಕಾಂಗ್ರೆಸ್ ಇಂದು ಕರ್ನಾಟಕಕ್ಕೆ ಮಹಾ ದ್ರೋಹವೆಸಗುತ್ತಿದೆ. ಕರ್ನಾಟಕದಲ್ಲಿರುವುದು ಸ್ಟಾಲಿನ್‌ರ ಗುಲಾಮ ಸರ್ಕಾರ ಎಂದು ಬಿಜೆಪಿ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, “ಆಗ, ಸೇವ್ ನಂದಿನಿ ಅಂತ ಸುಳ್ಳು ಸುದ್ದಿ ಸೃಷ್ಟಿಸಿ ಕನ್ನಡಿಗರ ದಾರಿ ತಪ್ಪಿಸಲಾಯಿತು! ಹಿಂದಿ ಹೇರಿಕೆ ಎಂದು ಹುಸಿ ಪುಕಾರು ಹಬ್ಬಿಸಿ ಪ್ರಚಾರ ಗಿಟ್ಟಿಸಿಕೊಳ್ಳಲಾಯಿತು ಹಾಗೂ ಮೇಕೆದಾಟು ವಿಚಾರ ನ್ಯಾಯಾಲಯದಲ್ಲಿದ್ದರೂ ಪಾದಯಾತ್ರೆಯ ನಾಟಕ ಮಾಡಲಾಯಿತು” ಎಂದು ಕುಟುಕಿದೆ.
“ಈಗ, ಬರಗಾಲ ಬಂದಿದ್ದರೂ, ಜಲಾಶಯಗಳು ಒಣಗುತ್ತಿದ್ದರೂ ಸಿದ್ದರಾಮಯ್ಯ ಅವರ ಸರ್ಕಾರ ಕದ್ದು ಮುಚ್ಚಿ ಕಾವೇರಿ ನೀರನ್ನು ಬಿಟ್ಟಿತು. I.N.D.I.A ಮೈತ್ರಿಕೂಟ ಉಳಿಸಿಕೊಳ್ಳಲು, ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಕನ್ನಡಿಗರ ಪರ ಸಮರ್ಥವಾಗಿ ವಾದ ಮಂಡಿಸದೆ ಸೋಲು ಒಪ್ಪಿಕೊಂಡಿತು. ಒಮ್ಮೆಯೂ ಸಿದ್ದರಾಮಯ್ಯ ಅವರ ಸರ್ಕಾರ ತಮಿಳುನಾಡಿನೊಂದಿಗೆ ಕೂತು ನೀರಿನ ಅಭಾವ ಕುರಿತು ಅರ್ಥ ಮಾಡಿಸಲಿಲ್ಲ” ಎಂದು ಆರೋಪಿಸಿದೆ.
“ಕನ್ನಡಿಗರ ಪೌರುಷ, ಕನ್ನಡಿಗರ ಸಾಹಸ, ಕನ್ನಡಿಗರ ಸ್ವಾಭಿಮಾನ, ಕನ್ನಡದ ಅಸ್ಮಿತೆಯನ್ನು ಕಾಂಗ್ರೆಸ್ ಕೇವಲ ರಾಜಕೀಯ ಅಸ್ತ್ರವಾಗಿಸಿಕೊಂಡು ಕಿವಿ ಮೇಲೆ ಹೂವಿಟ್ಟು ಅಣಕಿಸುತ್ತಿದೆ. ಕರ್ನಾಟಕದಲ್ಲಿರುವುದು ಸ್ಟಾಲಿನ್‌ರ ಗುಲಾಮ ಸರ್ಕಾರ. ಕನ್ನಡ, ಕರ್ನಾಟಕ, ನಾಡ ವಿರೋಧಿ ಕಾಂಗ್ರೆಸ್ಸಿಗೆ ಕನ್ನಡಿಗರು ಧಿಕ್ಕಾರ ಹಾಕುತ್ತಿದ್ದಾರೆ” ಎಂದು ಕುಟುಕಿದೆ.
ಈ ಸುದ್ದಿ ಓದಿದ್ದೀರಾ? ಕಾವೇರಿ ವಿಚಾರದಲ್ಲಿ ನಾನು ಯಾವುದೇ ಸಲಹೆ ಕೊಡಲ್ಲ: ಹೆಚ್ ಡಿ ದೇವೇಗೌಡ
ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಹರಿಹಾಯ್ದಿರುವ ಬಿಜೆಪಿ, “ಮುಸ್ಲಿಂ ಲೀಗ್‌ನಂತಹ ಮತೀಯ ಪಕ್ಷದ ಜೊತೆ ಸೇರಿ ದಶಕಗಳ ಕಾಲ ಅಧಿಕಾರ ಅನುಭವಿಸಿರುವ ಕಾಂಗ್ರೆಸ್, ಯಾವ ರೀತಿಯಿಂದ ಜಾತ್ಯತೀತ ಪಕ್ಷ ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು” ಎಂದು ಬಿಜೆಪಿ ಆಗ್ರಹಿಸಿದೆ.
“ಸ್ವಾಮಿ ಸ್ವಯಂಘೋಷಿತ ಸಂವಿಧಾನ ತಜ್ಞ ಸಿದ್ದರಾಮಯ್ಯರವರೇ, ಬಾಬಾ ಸಾಹೇಬರು ರಚಿಸಿದ್ದ ಸಂವಿಧಾನವನ್ನು ಸದಸ್ಯರಿಗೆ ನೀಡಬಾರದೆಂಬ ನಿಯಮವೇನಾದರೂ ಇದೆಯಾ? ಅಂಬೇಡ್ಕರ್ ಅವರು ರಚಿಸಿರುವ ಮೂಲ ಸಂವಿಧಾನದ ಬಗ್ಗೆ ನಿಮಗೇಕೆ ಈ ಪರಿ ದ್ವೇಷ” ಎಂದು ಕಿಡಿಕಾರಿದೆ.
“ನೂತನ ಸಂಸತ್‌ನ ಮೊದಲ ಅಧಿವೇಶನದ ದಿನದಂದು, ಸದಸ್ಯರಿಗೆ ನೀಡಿದ್ದು, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ್ದ ಮೂಲ ಸಂವಿಧಾನ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನದ ಆಶಯವನ್ನೇ ಬುಡಮೇಲು ಮಾಡಿದ್ದ ನಿಮ್ಮ ನಾಯಕಿ ಇಂದಿರಾಗಾಂಧಿಯವರು, ಓಲೈಕೆ ರಾಜಕಾರಣಕ್ಕಾಗಿ ಸಮಾಜವಾದ ಮತ್ತು ಜಾತ್ಯತೀತ ಎಂಬ ಪದಗಳನ್ನು ಒತ್ತಾಯಪೂರ್ವಕವಾಗಿ ಸಂವಿಧಾನಕ್ಕೆ ಅಳವಡಿಸಿದ್ದರು. ನೀವು ಸದಾ ಗುರಾಣಿಯಂತೆ ಬಳಸಿಕೊಳ್ಳುವ ಆ ಎರಡು ಪದಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ್ದ ಮೂಲ ಸಂವಿಧಾನದಲ್ಲಿ ಇರಲೇ ಇಲ್ಲ” ಎಂದಿದೆ.
“ಇನ್ನು ನಿಮ್ಮ ಸಮಾಜವಾದದ ಅಸಲಿ ಮುಖವಾಡವನ್ನು ನಿಮ್ಮ ಪಕ್ಷದವರೇ ಬೆತ್ತಲು ಮಾಡಿದ್ದಾರೆ. ಹಿಂದೂಗಳನ್ನು ತುಚ್ಛವಾಗಿ ದ್ವೇಷಿಸುವುದೇ, ನಿಮ್ಮ ಸೋಗಲಾಡಿ ಜಾತ್ಯತೀತತೆ ಎಂಬುದು ಸಹ ಸಾಬೀತಾಗಿದೆ” ಎಂದು ಟೀಕಿಸಿದೆ.