ಎಲ್ಲ ವರ್ಗಕ್ಕೂ ನ್ಯಾಯ ಒದಗಿಸಿದಂತೆ ಮೇಲ್ನೋಟಕ್ಕೆ ಕಂಡುಬಂದರೂ ಕರ್ನಾಟಕದ ಮಾದರಿಗೆ ಯಾವುದೇ ಸ್ಪಷ್ಟತೆಯನ್ನು ರಾಜ್ಯ ಬಜೆಟ್ ಹೊಂದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ವಿಶ್ಲೇಷಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಶೇ.60 ಭಾಗ ಜನರು ಅವಲಂಬಿತರಾಗಿರುವ ಕೃಷಿ ಮತ್ತು ಕೃಷಿಪೂರಕ ಕ್ಷೇತ್ರಕ್ಕೆ ಈ ಬಜೆಟ್‌ನಲ್ಲಿ ಕೇವಲ ಶೇ.14 ರಷ್ಟು ಅನುದಾನ ಮೀಸಲಿಡಲಾಗಿದೆ. ಇದರಿಂದ ಕೃಷಿ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ” ಎಂದಿದ್ದಾರೆ.
“ಕೇಂದ್ರ ಸರ್ಕಾರ ತರಲು ಹೊರಟಿರುವ ರೈತ ವಿರೋಧಿ, ಕೃಷಿ ವಿರೋಧಿ ನೀತಿಗಳನ್ನು ತಿರಸ್ಕರಿಸದೇ ಇರುವುದು ಸರಿಯಲ್ಲ. ಮತ್ತು ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ‘ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್ ಪಡೆದುಕೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕೇಂದ್ರ ಸರ್ಕಾರ ಖಾಸಗಿಕರಣ ಮಾಡಲು ಹೊರಟಿರುವ ವಿದ್ಯುತ್ ತಿದ್ದುಪಡಿ ಬಗ್ಗೆ ಚಕಾರ ಎತ್ತಿಲ್ಲ. ಕೃಷಿ ಬೆಲೆ ಆಯೋಗವನ್ನು ಸದೃಢಗೊಳಿಸಲು ಯಾವುದೇ ತೀರ್ಮಾನ ಕೈಗೊಳ್ಳದೆ ಮಾತಿಗೆ ತಪ್ಪಿದ್ದು ಬಿಜೆಪಿ ತಂದಿರುವ ಎಲ್ಲ ರೈತ ವಿರೋಧಿ ನೀತಿಗಳನ್ನು ರಾಜ್ಯ ಸರ್ಕಾರ ಮುಂದುವರಿಸಲು ಇಚ್ಚಿಸಿದಂತೆ ಕಾಣುತ್ತದೆ” ಎಂದು ಟೀಕಿಸಿದ್ದಾರೆ.