ಕಾಂಗ್ರೆಸ್ ನಾಯಕ ಮತ್ತು ಎನ್‌ಎಸ್‌ಯುಐ (ಭಾರತೀಯ ವಿದ್ಯಾರ್ಥಿ ಒಕ್ಕೂಟ) ಉಸ್ತುವಾರಿ ಕನ್ಹಯ್ಯ ಕುಮಾರ್ ಅವರನ್ನು ಶುಕ್ರವಾರ ಪಾಟ್ನಾದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭನ್ ಮತ್ತು ಅವರ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಿಎಂಗೆ ಮನವಿ ಪತ್ರ ಸಲ್ಲಿಸಲು ತೆರಳುತ್ತಿದ್ದಾಗ ಬಂಧಿಸಲಾಗಿದೆ.
ಕಾಂಗ್ರೆಸ್ ನಿಯೋಗ ನಿತೀಶ್ ಅವರ ನಿವಾಸದ ಕಡೆಗೆ ಮೆರವಣಿಗೆ ನಡೆಸುತ್ತಿದ್ದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿ ಜಲಫಿರಂಗಿ ಬಳಸಿದ್ದಾರೆ. ನಿತೀಶ್ ಆಡಳಿತವು ಯುವಕರಿಗೆ ಉದ್ಯೋಗ ನೀಡುವಲ್ಲಿ ಅಸಮರ್ಥವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದೆ. ಈ ವೇಳೆ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಘರ್ಷಣೆ ನಡೆದಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ವಿಚಾರಣೆಯೂ ಇಲ್ಲ – ಜಾಮೀನೂ ಇಲ್ಲ: ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ ಉಮರ್ ಖಾಲಿದ್
ಸಿಎಂ ನಿವಾಸದ ಬಳಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಪೊಲೀಸರೊಂದಿಗೆ ವಾಗ್ವಾದ ನಡೆದಿದೆ. ಈ ವೇಳೆ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದಾರೆ. ಜಲಫಿರಂಗಿಗಳನ್ನೂ ಬಳಸಿದ್ದಾರೆ. ನಂತರ ಕನ್ಹಯ್ಯ ಮತ್ತು ಇತರ 30 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಕನ್ಹಯ್ಯ ಅವರನ್ನು ಬಿಡುಗಡೆ ಮಾಡಲಾಗಿದೆ.
“ನಮಗೆ ಲಾಠಿ ಅಥವಾ ನೀರಿನ ಫಿರಂಗಿ ಬೇಡ. ನಮ್ಮ ನಲ್ಲಿಗಳಿಗೆ ನೀರು ಬರಬೇಕು, ಅಷ್ಟೇ ನಮಗೆ ಬೇಕು. ನಮ್ಮ ಮೇಲೆ ನೀರು ಸಿಂಪಡಿಸುವುದು ಬೇಡ, ಬದಲಾಗಿ ‘ನಲ ಜಲ ಯೋಜನೆ’ (ಕುಡಿಯುವ ನೀರಿನ ಯೋಜನೆ) ಅಡಿಯಲ್ಲಿ ನೀರು ಸರಿಯಾಗಿ ನೀಡಿ. ಸರ್ಕಾರ ನಲ್ಲಿಗಳಲ್ಲಿ ನೀರು ಒದಗಿಸದೆ ಅದನ್ನು ವಿದ್ಯಾರ್ಥಿಗಳು ಮತ್ತು ಯುವಕರ ಮೇಲೆ ಜಲಫಿರಂಗಿ ಪ್ರಯೋಗಿಸಲು ಬಳಸುತ್ತಿದೆ” ಎಂದು ಬಂಧನಕ್ಕೊಳಗಾಗುವಾಗ ಕನ್ಹಯ್ಯ ಹೇಳಿದರು.
ಮಾರ್ಚ್ 16 ರಂದು ಚಂಪಾರಣ್‌ನ ಭಿತಿಹರ್ವ ಆಶ್ರಮದಲ್ಲಿ ‘ಪಳಯನ್ ರೋಕೋ, ನೌಕ್ರಿ ದೋ’ (ವಲಸೆ ನಿಲ್ಲಿಸಿ, ಉದ್ಯೋಗ ನೀಡಿ) ಪಾದಯಾತ್ರೆಯನ್ನು ಪ್ರಾರಂಭಿಸಿದ ಜೆಎನ್‌ಯುಎಸ್‌ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ)ದ ಮಾಜಿ ಅಧ್ಯಕ್ಷ ಕನ್ಹಯ್ಯ, ಇಂದು ಅನೇಕ ಜಿಲ್ಲೆಗಳು ಮತ್ತು ನೂರಾರು ಕಿಲೋಮೀಟರ್‌ಗಳನ್ನು ಕ್ರಮಿಸಿ ತಮ್ಮ ಮೆರವಣಿಗೆಯನ್ನು ಕೊನೆಗೊಳಿಸಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಏಪ್ರಿಲ್ 7ರಂದು ಕನ್ಹಯ್ಯ ಅವರೊಂದಿಗೆ ಸೇರಿಕೊಂಡರು.
