ಸಾವರ್ಕರ್ ಜನ್ಮದಿನವಾದ ಮೇ 28ರಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಆರ್.ವಿ ದೇಶ್‌ಪಾಂಡೆ ಅವರು ಸಾವರ್ಕರ್ ಗುಣಗಾನ ಮಾಡಿ ಪೋಸ್ಟ್ ಹಾಕಿದ್ದರು. ಅವರ ಪೋಸ್ಟ್‌ಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ಇದೀಗ ಪೋಸ್ಟ್‌ಅನ್ನು ಡಿಲೀಟ್ ಮಾಡಿದ್ದಾರೆ.
ಸಾವರ್ಕರ್ ಗುಣಗಾನ ಮಾಡಿ ಜನ್ಮದಿನದ ಶುಭಾಶಯ ಕೋರಿದ್ದ ಆರ್.ವಿ ದೇಶ್‌ಪಾಂಡೆ, “ಯುವಕರಲ್ಲಿ ದೇಶಭಕ್ತಿಯ ಜ್ವಾಲೆಯನ್ನು ಬೆಳಗಿಸಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಸಾರವನ್ನು ಸಾರಿದ ಅಪ್ರತಿಮ ದೇಶಭಕ್ತರಾಗಿದ್ದ ಸಾವರ್ಕರ್ ಜನ್ಮದಿನದಂದು ಗೌರವಪೂರ್ವಕ ನಮನಗಳು” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಅವರ ಪೋಸ್ಟ್ ವಿರುದ್ಧ ಭಾರೀ ಆಕ್ರೋಶ, ಟೀಕೆಗಳು ವ್ಯಕ್ತವಾಗಿವೆ. ಈ ಬೆನ್ನಲ್ಲೇ, ತಮ್ಮ ಪೋಸ್ಟ್‌ಅನ್ನು ದೇಶ್‌ಪಾಂಡೆ ಡಿಲೀಟ್ ಮಾಡಿದ್ದಾರೆ.
ಅಂದಹಾಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲವಾರು ನಾಯಕರು ಸಾವರ್ಕರ್ ಅವರನ್ನು ಟೀಕಿಸುತ್ತಾರೆ. “ಬ್ರಿಟಿಷರ ಬಳಿ ಕ್ಷಮೆ ಕೇಳಿದ್ದ ಸಾವರ್ಕರ್, ಬ್ರಿಟಿಷರ ಸಹಯೋಗಿಯಾಗಿದ್ದರು. ಬ್ರಿಟಿಷರಿಂದ ಪಿಂಚಣಿ ಪಡೆದಿದ್ದರು” ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.

ಅಲ್ಲದೆ, ದೇಶದಲ್ಲಿ ಕೋಮುವಾದವನ್ನು ಹುಟ್ಟುಹಾಕಿದ್ದು, ಮುಸ್ಲಿಂ ದ್ವೇಷವನ್ನು ಹರಡಿದ್ದು ಕೂಡ ಸಾವರ್ಕರ್ ಎಂದು ಕಾಂಗ್ರೆಸ್ಸಿಗರು ಸೇರಿದಂತೆ ಹಲವರು ಆರೋಪಿಸಿದ್ದಾರೆ. ಹೀಗಿದ್ದರೂ, ಕರ್ನಾಟಕದಲ್ಲಿ ಸಂಘಪರಿವಾರದ ಕೋಮು ಪ್ರಯೋಗಶಾಲೆಯಾಗಿರುವ ಕರಾವಳಿ ಭಾಗದವರೇ ಆದ ಆರ್.ವಿ ದೇಶ್‌ಪಾಂಡೆ ಅವರು ಸಾವರ್ಕರ್ ಗುಣಗಾನ ಮಾಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.
“ಎರಡು ತಾಸಿನ ಹಿಂದೆ ಸಾವರ್ಕರ್ ಭಜನೆ ಮಾಡಿದ್ದ ಪೋಸ್ಟರ್ ಡಿಲೀಟಾಗಿದೆ! ಅರುವು ಆಗಿದೆ. ದೇಹ ಕಾಂಗ್ರೆಸ್‌ನಲ್ಲಿದೆ. ಆತ್ಮ ಮಾತ್ರ ಬಿಜೆಪಿಯಲ್ಲಿದೆ. ಇಂಥ ಆತ್ಮಗಳು ಕಾಂಗ್ರೆಸ್‌ನಲ್ಲಿ ತುಂಬಾ ಇವೆ…. ಸ್ವಚ್ಛ ಆಗದಿದ್ದರೆ ನಷ್ಟ ಕಾಂಗ್ರೆಸ್ಸಿಗೆ” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಸ್ವಜಾತಿ ಪ್ರೇಮದಿಂದ ಹೊಗಳಿದ್ದು.