ಭಾರತ-ಪಾಕಿಸ್ತಾನ ಕದನ ವಿರಾಮ ತನ್ನಿಂದಲೇ ಆಗಿದ್ದು ಎಂದು 65 ದಿನಗಳಲ್ಲಿ ಒಟ್ಟು 22 ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದಾರೆ.
ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರೊಂದಿಗೆ ಭೇಟಿಯ ಸಂದರ್ಭದಲ್ಲಿ ಟ್ರಂಪ್ ಮತ್ತೊಮ್ಮೆ “ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಮಾಡಿದ್ದು ತಾನೇ” ಎಂದು ಮತ್ತೆ ಹೇಳಿಕೊಂಡಿದ್ದಾರೆ. “ಇನ್ನೊಂದು ವಾರದೊಳಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ಯುದ್ಧವಾಗುತ್ತಿತ್ತು. ಆದರೆ ನಾವು ಅದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರದ ಕದನ ವಿರಾಮ ನಿರ್ಧಾರ ನಿರಾಸೆ ಮೂಡಿಸಿದೆ: ಸಚಿವ ಪ್ರಿಯಾಂಕ್ ಖರ್ಗೆ
“ಕದನ ವಿರಾಮ ಮಾಡದಿದ್ದರೆ ನಿಮ್ಮೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಿ ನಾವು ಈ ಒಪ್ಪಂದ ಮಾಡಿಸಿದ್ದೇವೆ” ಎಂದು ಪುನರುಚ್ಚರಿಸಿದ್ದಾರೆ. ಆದರೆ ಟ್ರಂಪ್ ಅವರ ಈ ಹೇಳಿಕೆಯನ್ನು ವಿರೋಧಿಸದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜೈರಾಮ್ ರಮೇಶ್ ಅವರು ಟೀಕಿಸಿದ್ದಾರೆ.
65 days, 22 times: Jairam Ramesh after Trump repeats India-Pak ceasefire claimhttps://t.co/9oGOgl5T3C
— Greater Kashmir (@GreaterKashmir) July 15, 2025
“ಭಾರತ ಮತ್ತು ಪಾಕಿಸ್ತಾನದೊಂದಿಗಿನ ಅಮೆರಿಕದ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಘೋಷಿಸುತ್ತಿದ್ದಂತೆಯೇ ಅಧ್ಯಕ್ಷ ಟ್ರಂಪ್ ಈ ಹೇಳಿಕೆಯನ್ನು ನೀಡಿದ್ದಾರೆ. ಒಮ್ಮೆ ತಮ್ಮ ಹಿರಿಯ ಸಹೋದ್ಯೋಗಿ ಘನಶ್ಯಾಮ್ ತಿವಾರಿ ಅವರು ಬಿಜೆಪಿಯ ‘ಟ್ರಂಪ್ ಕಾರ್ಡ್’ ಎಂದು ಬಣ್ಣಿಸಿದ ನರೇಂದ್ರ ಮೋದಿ, ವಿಷಯದ ಬಗ್ಗೆ ಯಾವಾಗ ಮೌನ ಮುರಿಯುತ್ತಾರೆ” ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಭಾರತವು ಅಮೆರಿಕ ಅಧ್ಯಕ್ಷರ ಹೇಳಿಕೆಗಳನ್ನು ನಿರಾಕರಿಸಿದೆ. ಭಾರತ ಮತ್ತು ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಕೇಂದ್ರ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ದ್ವಿಪಕ್ಷೀಯವಾಗಿ ಪರಿಹರಿಸುತ್ತದೆ ಎಂದು ಭಾರತ ಹೇಳಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈವರೆಗೂ ಟ್ರಂಪ್ ಹೇಳಿಕೆಯನ್ನು ಖಂಡಿಸಿಲ್ಲ.
ಇದನ್ನು ಓದಿದ್ದೀರಾ? ಕದನ ವಿರಾಮ | ವಿಶ್ವಾಸ ದ್ರೋಹ ಎಸಗಿದ ಪ್ರಧಾನಿ ಮೋದಿ: ಮುತಾಲಿಕ್ ಆಕ್ರೋಶ
ಕಾಶ್ಮೀರ ಮೂಲದ ಭಯೋತ್ಪಾದಕ ಸಂಘಟನೆ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ಪ್ರವಾಸಿಗರನ್ನು ಕೊಂದಿದೆ. ಇದಕ್ಕೆ ಪತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ 100ಕ್ಕೂ ಅಧಿಕ ಉಗ್ರರನ್ನು ಕೊಂದಿದೆ. ಈ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು ಸದ್ಯ ಕದನ ವಿರಾಮ ಒಪ್ಪಂದ ಮಾಡಲಾಗಿದೆ. ಆದರೆ ಟ್ರಂಪ್ ಮಾತ್ರ ಈ ಒಪ್ಪಂದವನ್ನು ತಾನೇ ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ.
